ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹೈಕೋರ್ಟ್ ನ ಏಕ ಸದಸ್ಯ ಪೀಠ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದು, ತಕ್ಷಣವೇ ಕ್ಷೇತ್ರದಲ್ಲಿ ಮರು ಚುನಾವಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಚುನಾವಣಾ ಆಯೋಗವನ್ನು ಸಿಪಿಐ(ಎಂ) ಪಕ್ಷ ಆಗ್ರಹಿಸುತ್ತದೆ ಎಂದು ರಾಜ್ಯ ಸಮಿತಿ ಸದಸ್ಯ ಡಾ. ಅನಿಲ್ ಕುಮಾರ್ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ವಿಚಾರದಲ್ಲಿ ಎಸ್.ಎನ್. ಸುಬ್ಬಾರೆಡ್ಡಿ ಅವರ ಅಕ್ರಮ ಆಸ್ತಿ ಮತ್ತು ಆದಾಯದ ವಿಚಾರಕ್ಕೆ ಸಂಬಂಧಪಟ್ಟು ಸಿಪಿಐ(ಎಂ) ನಿರಂತರವಾಗಿ ಜನರ ನಡುವೆ ಸ್ಪಷ್ಟವಾಗಿ ಹೇಳ್ತಾ ಬಂದ ವಿಷಯ, ಅವರು ತಮ್ಮ ನಿಜವಾದ ಆದಾಯ ಮತ್ತು ಆಸ್ತಿಗಳನ್ನ ಚುನಾವಣಾ ಆಯೋಗಕ್ಕೆ ಸರಿಯಾದ ರೀತಿಯಲ್ಲಿ ತೋರಿಸದೇನೆ ವಂಚನೆ ಮಾಡಿದ್ದಾರೆ ಎಂಬ ಹೈಕೋರ್ಟ್‌ನ ಈ ತೀರ್ಪಿನಿಂದ ಸಾಬೀತಾಗಿದೆ ಎಂದರು.
ಚುನಾವಣಾ ಆಯೋಗವನ್ನೇ ದಾರಿ ತಪ್ಪಿಸಿರುವ ಎಸ್.ಏನ್. ಸುಬ್ಬಾರೆಡ್ಡಿ ಮೇಲೆ ತಕ್ಷಣ ಕಾನೂನು ಕ್ರಮ ವಹಿಸಬೇಕು. ಸರ್ಕಾರ ಶಾಸಕರಾಗಿ ಅವರು ಪಡೆದ ಎಲ್ಲ ಹಣಕಾಸು ಮತ್ತಿತರೆ ಸೌಲಭ್ಯಗಳನ್ನು ವಾಪಾಸು ಪಡೆಯಬೇಕು. ಅದೇ ರೀತಿ, ಇಂತಹವರನ್ನು ಕಾಂಗ್ರೆಸ ಪಕ್ಷ ತನ್ನ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಕ್ಷೇತ್ರದ ಮತದಾರರಲ್ಲಿ ಅದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸುತ್ತದೆ ಎಂದರು.ಸುಬ್ಬಾರೆಡ್ಡಿ ಎಂಎಲ್ಎ ಗಿರಿ ವಜಾ ಮಾಡಿ ನನ್ನನ್ನು ಜಯಶೀಲನನ್ನಾಗಿ ಘೋಷಿಸಿದ ಎಂದು ಬಿಜೆಪಿಯ ಸಿ.ಮುನಿರಾಜು ಕೇಳಿದ್ದು ತಪ್ಪು, ಕಳೆದ 2023ರ ವಿಧಾನಸಭೆಯ ಚುನಾವನೆಯನ್ನು ಎದುರಿಸುವಾಗ ಇಬ್ಬರು ಕೋಟಿಗಟ್ಟಲೆ ಹಣ ಸುರಿದು ಚುನಾವಣೆ ಗೆಲ್ಲುವ ಪ್ರಯತ್ನ ಮಾಡಿದ್ದರು. ಅದರಲ್ಲಿ ಸುಬ್ಬಾರೆಡ್ಡಿ ಗೆದ್ದಿದ್ದಾರೆ ಅಷ್ಟೇ. ಅಲ್ಲಿ ಮೂರನೇ ಅತೀ ಹೆಚ್ಚು ಮತ ಪಡೆದ ನಮ್ಮ ಮೇಲೆಯೂ ಸಹ ಇವರು ಅಪಪ್ರಚಾರ ಮಾಡಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಸುಬ್ಬಾರೆಡ್ಡಿ ₹120 ಕೋಟಿ ಖರ್ಚು ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ₹80 ಕೋಟಿ ಖರ್ಚು ಮಾಡಿ ಮತದಾರರನ್ನ ಭ್ರಷ್ಟರನ್ನಾಗಿ ಮಾಡಿದ್ದಾರೆ. ಜತೆಗೆ ಸದಾ ಕಾರ್ಮಿಕ, ಕೂಲಿಕಾರ ರೈತರೊಟ್ಟಿಗೆ ಹೋರಾಡಿ ಜೀವನ ಮಾಡುತ್ತಿರುವ ಸಿಪಿಐಎಂ ಪಕ್ಷದ ಅಭ್ಯರ್ಥಿಯಾದ ನನ್ನ ವಿರುದ್ಧ ದುಡ್ಡು ಹಂಚುತ್ತಿರುವುದಾಗಿ ಬಿಟ್ಟಿ ಪ್ರಚಾರ ತೆಗೆದುಕೊಂಡಿತ್ತು. ನ್ಯಾಯಾಲಯ ಇಬ್ಬರಿಗೂ ತಕ್ಕ ಪಾಠ ಕಲಿಸಿದೆ ಸುಪ್ರೀಂ ಕೊರ್ಟ್ ನಲ್ಲೂ ಇವರ ಶಾಸಕ ಸ್ಥಾನ ಕಿತ್ತೊಗೆದು ಮರು ಚುನಾವಣೆ ನಡಸಬೇಕೆಂದು ಅಭಿಪ್ರಾಯಪಟ್ಟರು.ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಎಸ್.ಎನ್.ಸುಬ್ಬಾರೆಡ್ಡಿ ಅವರು ತಾವು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮೊದಲ ಬಾರಿಯಿಂದಲೂ ತಮ್ಮ ಅಕ್ರಮ ಬಂಡವಾಳವನ್ನು ಹೊಡುತ್ತಾ ಈ ಕ್ಷೇತ್ರದ ಮತದಾರರನ್ನು ಭ್ರಷ್ಟಗೊಳಿಸುವಂತಹ ದುಷ್ಟ ಕೆಲಸದಲ್ಲಿ ತೊಡಗಿರುವಂತಹದ್ದು ಗುಟ್ಟಾದ ವಿಚಾರವಲ್ಲ. ಅದೇ ರೀತಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತು ಅದರ ಅಭ್ಯರ್ಥಿ ಕೂಡಾ ವ್ಯಾಪಕವಾದ ಅಕ್ರಮ ಬಂಡವಾಳ ತೊಡಗಿಸಿ ಮತದಾರರನ್ನು ಭ್ರಷ್ಟಗೊಳಿಸಿದ್ದು ಕೂಡಾ ಗುಟ್ಟಿನ ವಿಚಾರವಲ್ಲ ಎಂದರು.
ಜಿಲ್ಲಾ ಕಾರ್ಯದರ್ಶಿ ಜೆ. ಸಿದ್ದಗಂಗಪ್ಪ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಚನ್ನರಾಯಪ್ಪ, ಜಯರಾಮರೆಡ್ಡಿ, ರಾಘುನಾಥಾರೆಡ್ಡಿ, ಅಂಬರೀಶ, ಮತ್ತಿತರರು ಇದ್ದರು.
ಸಿಕೆಬಿ-3 ಸುದ್ದಿಗೋಷ್ಟಿಯಲ್ಲಿ ಸಿಪಿಐಎಂ ನ ರಾಜ್ಯ ಸಮಿತಿ ಸದಸ್ಯ ಡಾ. ಅನಿಲ್ ಕುಮಾರ್ ಮಾತನಾಡಿದರು.