ಸಾರಾಂಶ
ಬರದಿಂದ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು, ಗಿಡ ಮರಗಳಲ್ಲಿ ಬದುಕುವ ಪಕ್ಷಿಗಳಿಗೂ ಸರಿಯಾದ ಆಹಾರ, ನೀರು ದೊರೆಯದಂತಾಗಿದೆ.
ಕೊಟ್ಟೂರು: ತಾಲೂಕಿನಲ್ಲಿ ರೈತ ಬೆಳೆದ ಬೆಳೆಗಳಿಗೆ ಪ್ರಾಣಿ ಮತ್ತು ಪಕ್ಷಿಗಳು ಉಪಟಳ ನೀಡುತ್ತಿವೆ. ಇದರಿಂದ ಸಹಜವಾಗಿಯೇ ರೈತರು ಬಸವಳಿದಿದ್ದಾರೆ.ತೀವ್ರ ಬರಗಾಲವಿದ್ದರೂ ರೈತರು ತಮ್ಮ ಜಮೀನುಗಳಲ್ಲಿನ ಕೊಳವೆಬಾವಿಗಳಲ್ಲಿ ಸಿಗುವ ಅಲ್ಪ ಸ್ವಲ್ಪ ನೀರನ್ನೇ ಬಳಸಿಕೊಂಡು ಬೇಸಿಗೆ ಹಂಗಾಮಿನಲ್ಲಿ ಜೋಳ, ಸೂರ್ಯಕಾಂತಿ, ಮೆಕ್ಕೆಜೋಳ, ಕಲ್ಲಂಗಡಿ ಸೇರಿದಂತೆ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದರು. ಆದರೆ ಅಷ್ಟು ಇಷ್ಟು ಬೆಳೆದಿರುವ ಬೆಳೆಗಳನ್ನು ಪ್ರಾಣಿ, ಪಕ್ಷಿಗಳ ಕಾಟದಿಂದ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಿಮಿಸಿದೆ.
ಬರದಿಂದ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು, ಗಿಡ ಮರಗಳಲ್ಲಿ ಬದುಕುವ ಪಕ್ಷಿಗಳಿಗೂ ಸರಿಯಾದ ಆಹಾರ, ನೀರು ದೊರೆಯದಂತಾಗಿದೆ. ಇದರಿಂದ ಕಾಡು ಪ್ರಾಣಿಗಳು, ಪಕ್ಷಿಗಳು ಹೊಲಗಳಿಗೆ ದಾಳಿ ಮಾಡಿ, ಹಸಿವು, ಬಾಯಾರಿಕೆ ನೀಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿವೆ. ಸೂರ್ಯಕಾಂತಿ, ಜೋಳ ಬಿತ್ತಿದ್ದರೆ ಗಿಳಿ ತಿನ್ನುತ್ತಿವೆ. ಶೇಂಗಾ-ಮೆಕ್ಕೆಜೋಳವನ್ನು ಕಾಡು ಹಂದಿಗಳು ಹಾಳು ಮಾಡುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೀವ್ರ ಬರಗಾಲದಿಂದ ಪ್ರಾಣಿ, ಪಕ್ಷಿಗಳಿಗೂ ಆಹಾರ, ನೀರು ಸಿಗದ ಸ್ಥಿತಿ ಇರುವುದರಿಂದ ಯಾರನ್ನೂ ದೂರಬೇಕು ಎಂದು ರೈತರಿಗೆ ತಿಳಿಯದಾಗಿದ್ದು, ಉಳಿದಿದ್ದು ಉಳಿಯಲಿ ಎಂದು ಸುಮ್ಮನಾಗಿದ್ದಾರೆ.ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಕಾಡಂಚಿನಲ್ಲಿರುವ ಎಸ್. ವಿರೇಶ್, ಖಲೀಂ, ತಿಪ್ಪೇಸ್ವಾಮಿ, ಎಚ್. ಸುರೇಶ್, ಎಂ.ಎಂ. ನಿರಂಜನ್, ಬಸವರಾಜ ಸೇರಿದಂತೆ ಅನೇಕರ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಶೇಂಗಾ ಹೊಲಕ್ಕೆ ದಾಳಿ ಮಾಡಿರುವ ಶೇಂಗಾವನ್ನು ಕಾಡು ಹಂದಿಗಳು ಕಿತ್ತು ತಿಂದಾಕಿ ಹಾಳು ಮಾಡಿವೆ. ಇದರಿಂದ ರಾತ್ರಿ ವೇಳೆ ಹೊಲ ಕಾಯುವ ಸ್ಥಿತಿ ಬಂದಿದೆ.ಪಕ್ಷಿಗಳು ತಿನ್ನಲು ಅನುವು ಮಾಡಿದ ರೈತ:ವಿನಾಯಕ ಎಂಬ ರೈತನ ಹೊಲದಲ್ಲಿ ಬೆಳೆದಿದ್ದ ಜೋಳ ಗಿಳಿಗಳ ಪಾಲಾಗಿವೆ. ಆದರೆ ಅವುಗಳನ್ನು ಓಡಿಸದೇ ವಿನಾಯಕ ತಿನ್ನಲು ಬಿಟ್ಟಿದ್ದಾರೆ.ನಮ್ಮ ಜಮೀನಿನಲ್ಲಿ ಬೆಳೆದಿದ್ದ ಜೋಳ ನೀರುಕಾಳು ಇದ್ದರೆ ಗಿಳಿಗಳು ತಿನ್ನಲು ಬರುತ್ತಿದ್ದವು. ಒಂದೆರಡು ದಿನ ಅವುಗಳನ್ನು ಓಡಿಸುವ ಪ್ರಯತ್ನ ಮಾಡಿದೆ. ಆದರೆ ಅವುಗಳ ಹಸಿವು ಗಮನಿಸಿ ಅವುಗಳನ್ನು ಓಡಿಸುವುದನ್ನು ನಿಲ್ಲಿಸಿದೆ. ನನಗೆ ಸುಮಾರು 8ರಿಂದ 10 ಚೀಲ ಜೋಳ ನಷ್ಟವಾಯಿತು ಎಂದು ವಿನಾಯಕ ಹೇಳುತ್ತಾರೆ.