ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

| Published : Mar 29 2024, 12:50 AM IST / Updated: Mar 29 2024, 02:44 PM IST

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ ಆಯೋಗವು ಎರಡು ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಿಗದಿಪಡಿಸಲಾಗಿದೆ, ಒಟ್ಟು ೭ ರಾಷ್ಟ್ರೀಯ ಪಕ್ಷಗಳು ಚುನಾವಣೆ ಪ್ರತಿನಿಧಿಸುತ್ತಿವೆ ಇದರೊಂದಿಗೆ ಇತರೆ ಪ್ರಾದೇಶಿಕ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಏ. ೨೬ರಂದು ನಡೆಯಲಿರುವ ಚುನಾವಣೆಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ, ಶುಕ್ರವಾರ ಮಾ.೨೯ ರಂದು ಹಾಗೂ ಮಾ.೩೧ ಭಾನುವಾರ ರಜೆ ಇರುವುದು, ನಾಮಪತ್ರ ಸಲ್ಲಿಕೆಗೆ ಏ.೪ರಂದು ಕೊನೆ ದಿನಾಂಕವಾಗಿದೆ, ಏ.೫ರಂದು ನಾಮಪತ್ರ ಪರಿಶೀಲಿಸಲಾಗುವುದು. ಏ.೮ರ ಸಂಜೆ ೩ ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.

ನಗರದ ಹೊರವಲಯದ ಜಿಲ್ಲಾಡಳಿತ ಕಚೇರಿಯ ವಿಡಿಯೋ ಕಾನ್ಫೆರೆನ್ಸ್ ಹಾಲ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಏ.೨೬ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಮತದಾನಕ್ಕೆ ಸಮಯ ನಿಗದಿ ಮಾಡಲಾಗಿದೆ. ಚುನಾವಣೆ ಆಯೋಗವು ಎರಡು ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಿಗದಿಪಡಿಸಲಾಗಿದೆ, ಒಟ್ಟು ೭ ರಾಷ್ಟ್ರೀಯ ಪಕ್ಷಗಳು ಚುನಾವಣೆ ಪ್ರತಿನಿಧಿಸುತ್ತಿವೆ ಇದರೊಂದಿಗೆ ಇತರೆ ಪ್ರಾದೇಶಿಕ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.

ಅಭ್ಯರ್ಥಿಗಳಿಗೆ ಸೂಚನೆ

ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವಂತ ಉಮೇದುವಾರನಿಗೆ ಕ್ಷೇತ್ರದ ಓರ್ವ ಮತದಾರ ಸೂಚಕನಾಗಿರಬೇಕು, ಇತರೆ ಪಕ್ಷಗಳಿಂದ ಸ್ಪರ್ಧಿಸುವಂತ ಉಮೇದುವಾರನಿಗೆ ಕ್ಷೇತ್ರದ ೧೦ ಮಂದಿ ಮತದಾರರು ಸೂಚಕರಾಗಿದ್ದು ಎಲ್ಲಾ ಸೂಚಕರ ಸಹಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಓರ್ವ ಅಭ್ಯರ್ಥಿ ೨ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ, ಒಂದು ಕ್ಷೇತ್ರಕ್ಕೆ ಗರಿಷ್ಠ ೪ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ, ಉಮೇದುವಾರ ಬೇರೊಂದು ಕ್ಷೇತ್ರದಿಂದ ಬಂದವನಾಗಿದ್ದರೆ ಆ ಕ್ಷೇತ್ರದ ಮತದಾರರ ಪಟ್ಟಿಯ ಪ್ರಾಮಾಣೀಕೃತ ಪ್ರತಿ ಸಲ್ಲಿಸಬೇಕೆಂದು ಹೇಳಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕು, ಜಿಲ್ಲಾಧಿಕಾರಿ ಕಚೇರಿಯ ಸಮೀಪ ೧೦೦ ಮೀಟರ್ ವ್ಯಾಪ್ತಿಯವರೆಗೆ ೧೪೪ರ ಕಾಯ್ದೆ ಜಾರಿ ಮಾಡಿದೆ. ನಾಮಪತ್ರ ಸಲ್ಲಿಸುವ ಉಮೇದುವಾರರೊಂದಿಗೆ ೪ ಮಂದಿ ಮಾತ್ರ ಜತೆಯಲ್ಲಿರಬಹುದು ಒಟ್ಟು ೫ ಮಂದಿಗೆ ಮಾತ್ರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜತೆಯಲ್ಲಿರಲು ಅವಕಾಶ ನೀಡಲಾಗಿದೆ ಎಂದರು.

ಕ್ರಿಮಿನಲ್‌ ಪ್ರಕರಣಗಳ ಘೋಷಣೆ

ಉಮೇದುವಾರ ತನ್ನ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ನಮೂನೆ ಸಿ-೧ ರಲ್ಲಿ ಕನಿಷ್ಠ ಮೂರು ಪ್ರತ್ಯೇಕ ದಿನಾಂಕಗಳಂದು ದಿನ ಪತ್ರಿಕೆಯಲ್ಲಿ ಮುದ್ರಿಸ ತಕ್ಕದು, ಸಾರ್ವಜನಿಕರಿಗೆ ಅನುಕೂಲ ಉಂಟಾಗಲು ಏ.೮ರಿಂದ ೨೪ರವರೆಗೆ ಸದರಿ ವಿಷಯ ದೂರದರ್ಶನದಲ್ಲಿ ಮೂರು ಪ್ರತ್ಯೇಕ ದಿನಾಂಕ ಪ್ರಚಾರ ಪಡೆಸಿರಬೇಕೆಂದು ಹೇಳಿದರು.

ಸರ್ಕಾರಿ ವಸತಿಗೆ ಸಂಬಂಧಿಸಿದಂತೆ ಬಾಡಿಗೆ, ವಿದ್ಯುತ್ ಶುಲ್ಕ, ನೀರಿನ ಶುಲ್ಕ ದೂರವಾಣಿ ಶುಲ್ಕ ಮತ್ತು ಇತ್ಯಾದಿ ಸರ್ಕಾರಕ್ಕೆ ಬಾಕಿ ಇದ್ದಲ್ಲಿ ಅದನ್ನು ಪಾವತಿಸಿ ಪ್ರಮಾಣಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸಬೇಕು. ನಾಮಪತ್ರವನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಸೌಲಭ್ಯವನ್ನು ಕಲ್ಪಿಸಿದೆ.(ಸುವಿಧ ಪೋರ್ಟಲ್) ನಮೂನೆ ೨೬ರಲ್ಲಿ ಪ್ರಮಾಣ ಪತ್ರಗಳು ಸಹ ಆನ್‌ಲೈನ್ ಮೂಲಕ ಸುವಿಧ ತಂತ್ರಾಂಶದಲ್ಲಿ ನಮೂದಿಸುವ ಅವಕಾಶ ಕಲ್ಪಿಸಿದೆ ಇಷ್ಟೇ ಅಲ್ಲದೆ ಠೇವಣಿಯನ್ನು ಸಹ ಸದರಿ ಹೋಟೆಲ್‌ನಲ್ಲಿ ಪಾವತಿಸುವ ಅವಕಾಶ ನೀಡಲಾಗಿದೆ ಎಂದರು.

ಮುದ್ರಿತ ಪ್ರತಿ ಸಲ್ಲಿಸಬೇಕು

ನಾಮಪತ್ರ ಹಾಗೂ ನಮೂನೆ-೨೬ನ್ನು ಕ್ಯೂಆರ್ ಕೋಡ್ ನೊಂದಿಗೆ ಮುದ್ರಿತ ಪ್ರತಿ ಪಡೆದು ಸಹಿ ಮಾಡಿ ಎಲ್ಲಾ ದಾಖಲೆಗಳೊಂದಿಗೆ ಕಡ್ಡಾಯವಾಗಿ ಚುನಾವಣಾಧಿಕಾರಿಗೆ ನಿಗದಿತ ಅವಧಿಯೊಳಗೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಮುದ್ರಿತ ಪ್ರತಿ ಚುನಾವಣಾಧಿಕಾರಿಗೆ ಸಲ್ಲಿಸದಿದ್ದಲ್ಲಿ ಅಂತಹ ನಾಮಪತ್ರ ಪರಿಗಣಿಸುವುದಿಲ್ಲ, ನಾಮಪತ್ರ ಮತ್ತು ನಮೂನೆ-೨೬ನ್ನು ಸುವಿಧ ತಂತ್ರಾಂಶದಲ್ಲಿ ಏ.೩ರೊಳಗೆ ನಮೂದಿಸಲು ಅವಕಾಶವಿದೆ ಎಂದು ಹೇಳಿದರು.

ನಾಮಪತ್ರಗಳ ಸಲ್ಲಿಕೆ ನಂತರ ೮ರೊಳಗೆ ನಾಮಪತ್ರ ವಾಪಸ್ಸಾತಿ ಕಾಲಾವಕಾಶ ಮುಗಿದ ನಂತರ ಅಂತಮವಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು, ಏ.೨೬ ಚುನಾವಣೆಯ ಮುಗಿದ ನಂತರ ಜೂ.೪ ರಂದು ಮತ ಎಣಿಕೆ ನಡೆಯಲಿದೆ. ಜೂ.೬ರಂದು ಚುನಾವಣೆ ಪ್ರಕ್ರಿಯೆಗಳು ಸಂಪೂರ್ಣಗೊಳ್ಳಲಿದ್ದು ಎರಡನೇ ಹಂತದ ಚುನಾವಣೆ ಮುಂದುವರೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಎಂ.ನಾರಾಯಣ, ಎಡಿಸಿ ಶಂಕರ್ ವಾಕ್ಯಳ್, ಚುನಾವಣಾ ವೆಚ್ಚಗಳ ವೀಕ್ಷಕ ಬಾಬು, ಚುನಾವಣಾ ಸಹಾಯಕಾಧಿಕಾರಿಗಳಾದ ನಾಗವೇಣಿ, ಮಂಜುಳ ಇದ್ದರು.