ಕನ್ನಡಪ್ರಭ ವಾರ್ತೆ ಮೈಸೂರು

ಮುಂದಿನ ಬೇಸಿಗೆ ಕಾಲದ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕಾ ಕ್ರಮಕೈಗೊಂಡು, ಸಾರ್ವಜನಿಕರಿಂದ ದೂರುಗಳು ಬರದಂತೆ ನಿಗಾ ವಹಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಮೈಸೂರು ತಾಲೂಕಿನ ಗ್ರಾಪಂಗಳ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂಗಳಲ್ಲಿ ಸದಸ್ಯರು ಇಲ್ಲದೆ ಇರುವ ಕಾರಣ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳ ಪಾತ್ರ, ಜವಾಬ್ದಾರಿ ದೊಡ್ಡದಾಗಿದೆ. ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಒಂದು ತಿಂಗಳು ಕಳೆದಿದೆ. ಅಧಿಕಾರಿಗಳು ತಮ್ಮತಮ್ಮ ವ್ಯಾಪ್ತಿಯ ಗ್ರಾಪಂನಲ್ಲಿ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಗ್ರಾಪಂಗಳಿಗೆ ಆಡಳಿತಾಧಿಕಾರಿಗಳು ದಿನಕ್ಕೊಮ್ಮೆ ಭೇಟಿ ನೀಡಲು ಸಾಧ್ಯವಾಗದೆ ಇದ್ದರೂ ವಾರಕ್ಕೊಮ್ಮೆ ಭೇಟಿ ನೀಡಬೇಕು. ಪಿಡಿಒಗಳ ಜೊತೆಗೆ ಸಮನ್ವಯತೆ ಮಾಡಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು. ಅದಕ್ಕಾಗಿ ಒಂದು ಪ್ಲಾನ್ ಮಾಡಿಕೊಳ್ಳಬೇಕು. ನೀರಿನ ಸಮಸ್ಯೆ ಬರುವ ಗ್ರಾಮಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹಳ್ಳಿಗಳಲ್ಲಿ ಸಮಸ್ಯೆ ಉಂಟಾಗಬಹುದು ಎಂದರು.ಗ್ರಾಮಗಳಲ್ಲಿ ಎಷ್ಟು ಶಾಲೆಗಳಿವೆ, ಅಂಗನವಾಡಿ ಕೇಂದ್ರಗಳು, ಸ್ಮಶಾನಗಳು ಎಷ್ಟು ಇವೆ ಎಂಬುದನ್ನು ಪರಿಶೀಲಿಸಿ ಮೂಲ ಸೌಕರ್ಯಗಳನ್ನು ಗಮನಿಸಬೇಕು. ಶಾಲೆ, ಅಂಗನವಾಡಿ, ಸ್ಮಶಾನಗಳಿಗೆ ಕುಡಿಯುವ ನೀರು ಒದಗಿಸುವಂತೆ ಮಾಡಬೇಕು. ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.ಶಾಲೆಗಳನ್ನು ಪಟ್ಟಿ ಮಾಡಿಕೊಂಡು ಕೆಲಸ ಮಾಡಬೇಕು. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್‌ ಲೈನ್‌ ಗಳಲ್ಲಿ ಕೆಲವು ಬೀದಿಗಳಿಗೆ ಸಂಪರ್ಕ ಇಲ್ಲದಿದ್ದರೆ ಜೋಡಣೆ ಮಾಡಬೇಕು. ಯಾವುದಾದರೂ ಸ್ಮಶಾನದಲ್ಲಿ ಕುಡಿಯುವ ನೀರು ಇಲ್ಲದಿದ್ದರೆ ಗಮನಿಸಬೇಕು. ಅದೇ ರೀತಿ ಅಂಗನವಾಡಿ ಕೇಂದ್ರಗಳಲ್ಲೂ ನೋಡಬೇಕು ಎಂದು ಸೂಚಿಸಿದರು. ಕ್ರಿಯಾಯೋಜನೆ ಮಾರ್ಪಾಡು ಮಾಡಿಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳ ಜತೆಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕು. 15ನೇ ಹಣಕಾಸು ಆಯೋಗದಲ್ಲಿ ಉಳಿದಿರುವ ಹಣ, ಬಡ್ಡಿ ಹಣ ಹಾಗೂ ತೆರಿಗೆ ಸಂಗ್ರಹದ ರೂಪದಲ್ಲಿ ಬರುವ ಮೊತ್ತವನ್ನು ಸೇರಿಸಿ ಕ್ರಿಯಾಯೋಜನೆ ತಯಾರಿಸಬೇಕು. ಒಂದು ವೇಳೆ 2024- 25ನೇ ಸಾಲಿನಲ್ಲಿ ರೂಪಿಸಿರುವ ಕ್ರಿಯಾಯೋಜನೆಯಲ್ಲಿ ಉಳಿದಿರುವ ಅನುದಾನಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬೇಕು ಎಂದರು.ಗ್ರಾಪಂಗೆ ಬರುವ ಅನುದಾನ, ತೆರಿಗೆಯಲ್ಲಿ ಬರುವ ಒಟ್ಟು ಮೊತ್ತದಲ್ಲಿ ಆಡಳಿತಾತ್ಮಕ ವೆಚ್ಚ ಕಳೆದು ಉಳಿದ ಅನುದಾನಕ್ಕೆ ಕ್ರಿಯಾಯೋಜನೆ ತಯಾರು ಮಾಡಬೇಕು. ಇದರಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಅದಕ್ಕೆ ಬೇಕಾದರೆ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡು ಸಲ್ಲಿಸಿದರೆ ಅನುಮೋದನೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.ಸರ್ಕಾರದಿಂದ ನೀಡುವ ಅನುದಾನ ಬಳಕೆಯಾಗಬೇಕು. ತೆರಿಗೆ ಸಂಗ್ರಹದ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಬೇಕು. ಗ್ರಾಪಂನಲ್ಲಿ ಈಗ ಆಡತಾಧಿಕಾರಿಗಳು ಇರುವ ಕಾರಣ ಯಾವುದೇ ಒತ್ತಡ ಇರಲ್ಲ. ತಮಗೆ ಸಿಕ್ಕ ಅವಕಾಶವನ್ನು ಗ್ರಾಮಗಳ ಅಭಿವೃದ್ದಿಗೆ ಮೀಸಲಿಡಬೇಕು ಎಂದರು. ಶಾಲೆಗಳಿಗೆ ಹದ್ದುಬಸ್ತುಸರ್ಕಾರಿ ಶಾಲೆಗಳ ಜಾಗವನ್ನು ಹದ್ದು ಬಸ್ತಿನಲ್ಲಿಟ್ಟು ಸಂರಕ್ಷಣೆ ಮಾಡಲು ಆರ್‌ ಟಿಸಿ ಮಾಡಿಸಿಕೊಳ್ಳಬೇಕು. ಗ್ರಾಮ ಠಾಣಾ ಜಾಗದಲ್ಲಿರುವ ಶಾಲೆಗಳನ್ನು ಹೊರತುಪಡಿಸಿ ಉಳಿದ ಶಾಲೆಗಳಿಗೆ ಸರ್ವೆ ಮಾಡಿ ಆರ್‌ ಟಿಸಿಯಲ್ಲಿ ಕೂರಿಸಬೇಕು. ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒಂದೊಂದು ದಿನ ಒಂದೊಂದು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಆರ್‌ ಟಿಸಿಯಲ್ಲಿ ಹೆಸರನ್ನು ನಮೂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಮಾತನಾಡಿ, ಗ್ರಾಪಂಗಳಲ್ಲಿ ಯಾವುದೇ ಸಮಸ್ಯೆ ನಿರ್ವಹಣೆ ಮಾಡಬೇಕು. ಆಡಳಿತಾಧಿಕಾರಿಗಳಿಗೆ ಅನುಭವವಿದೆ. ಪಿಡಿಒಗಳಿಗೂ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಾ ವಿಚಾರಗಳು ಗೊತ್ತಿದೆ. ಆದ್ದರಿಂದ ಎಲ್ಲ ಅಧಿಕಾರಿಗಳು ವಾಸ್ತವತೆಯನ್ನು ಅರಿತು ಕೆಲಸ ಮಾಡಿದರೆ ಉತ್ತಮ ಎಂದರು.ತಾಪಂ ಇಒ ಕೃಷ್ಣ, ಆಡಳಿತಾಧಿಕಾರಿಗಳಾದ ಮಹದೇವಸ್ವಾಮಿ, ಅಶೋಕ್, ಶ್ವೇತಾ, ಮಾಯಪ್ಪ, ಶಿವಣ್ಣ, ಶಿವಕುಮಾರ್, ಜೀವನಕುಮಾರ್, ಸುರೇಶ್, ಪ್ರಕಾಶ್, ರವಿಕುಮಾರ್, ಚಿಕ್ಕಣ್ಣ, ಹರ್ಷದ್‌ ಪಾಷ, ಯತೀಶ್, ಭವ್ಯ, ಸುಹಾಶ್, ಲೋಹಿತ್‌ ಬಾಬು ಮೊದಲಾದವರು ಇದ್ದರು.