ಅನಧಿಕೃತ ಹೋಂ ಸ್ಟೇಗಳ ಮಾಹಿತಿ ವಾರದೊಳಗೆ ಸಲ್ಲಿಸಿ: ಡಿಸಿ ಲಕ್ಷ್ಮೀಪ್ರಿಯಾ

| Published : Jan 11 2025, 12:47 AM IST

ಅನಧಿಕೃತ ಹೋಂ ಸ್ಟೇಗಳ ಮಾಹಿತಿ ವಾರದೊಳಗೆ ಸಲ್ಲಿಸಿ: ಡಿಸಿ ಲಕ್ಷ್ಮೀಪ್ರಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ಅನಧಿಕೃತವಾಗಿರುವ ಈ ಹೋಂ ಸ್ಟೇಗಳನ್ನು ಇಲಾಖೆ ವತಿಯಿಂದ ಅಗತ್ಯ ಅನುಮತಿ ಪಡೆದು ಅಧಿಕೃತವಾಗಿ ನಡೆಸಲು ಸೂಚಿಸುವಂತೆ ಡಿಸಿ ಲಕ್ಷ್ಮೀಪ್ರಿಯಾ ತಿಳಿಸಿದರು.

ಕಾರವಾರ: ಜಿಲ್ಲೆಯಲ್ಲಿರುವ ಅನಧಿಕೃತ ಹೋಂ ಸ್ಟೇಗಳ ಕುರಿತಂತೆ ವಿವರವಾದ ವರದಿಯನ್ನು ಒಂದು ವಾರದ ಒಳಗೆ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾದ್ಯಂತ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ ಸ್ಟೇಗಳ ಕುರಿತು ಸಂಬಂಧಪಟ್ಟ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳಿಂದ ನಿಖರವಾದ ಮಾಹಿತಿ ಪಡೆಯಬೇಕು. ಅನಧಿಕೃತವಾಗಿರುವ ಈ ಹೋಂ ಸ್ಟೇಗಳನ್ನು ಇಲಾಖೆ ವತಿಯಿಂದ ಅಗತ್ಯ ಅನುಮತಿ ಪಡೆದು ಅಧಿಕೃತವಾಗಿ ನಡೆಸಲು ಸೂಚಿಸುವಂತೆ ತಿಳಿಸಿದರು.ಕಾರವಾರದ ಕಡಲ ತೀರದಲ್ಲಿ ಇರುವ ಟುಪಲೇವ್ ಯುದ್ಧ ವಿಮಾನವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಕುರಿತಂತೆ ಬಾಕಿ ಇರುವ ಅಗತ್ಯ ಕಾಮಗಾರಿ ಮತ್ತು ಅನುಮತಿಗಳನ್ನು ಪಡೆದು ಸುರಕ್ಷತಾ ಕ್ರಮಗಳನ್ನು ದೃಢೀಕರಿಸಿಕೊಂಡು ಈ ತಿಂಗಳ ಅಂತ್ಯದೊಳಗೆ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲ ಕಡಲತೀರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಕಾಮಗಾರಿ ಮತ್ತು ಸಾಧನ ಖರೀದಿಗೆ ಟೆಂಡರ್ ಕರೆದು ಈ ಕುರಿತು ಪ್ರಥಮಾದ್ಯತೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ಮೊದಲಾದವರು ಇದ್ದರು.ಭಟ್ಕಳದಲ್ಲಿ ಇಂದಿನಿಂದ ಐಎನ್ಎಫ್‌ ಟ್ರೇಡ್ ಎಕ್ಸಪೋ

ಭಟ್ಕಳ: ಇಲ್ಲಿನ ವೆಂಕಟಾಪುರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜ. 11ರಿಂದ 15ರ ವರೆಗೆ ನಡೆಯುವ ಐಎನ್ಎಫ್(ಇಂಡಿಯನ್ ನವಾಯತ್ ಫೋರಂ) ಐಎನ್ಎಫ್‌ ಟ್ರೇಡ್ ಎಕ್ಸಪೋ ೨೦೨೫ಅನ್ನು ಶನಿವಾರ ಪೌರಾಡಳಿತ ಸಚಿವ ರಹೀಮ್ ಖಾನ್ ಉದ್ಘಾಟಿಸುವರು ಎಂದು ಟ್ರೇಡ್ ಎಕ್ಸಪೋ ಕಮಿಟಿಯ ಸಂಚಾಲಕ ಮಾಜ್ ಜುಕಾಕು ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಉಪಸ್ಥಿತರಿರಲಿದ್ದು, ಅಧ್ಯಕ್ಷತೆಯನ್ನು ಇಂಡಿಯನ್ ನವಾಯತ್ ಫೋರಂನ ಅಧ್ಯಕ್ಷ ಅರ್ಷದ್ ಎಸ್.ಎಂ. ವಹಿಸಲಿದ್ದಾರೆ ಎಂದರು.ಐದು ದಿನಗಳ ಎಕ್ಸಪೋದಲ್ಲಿ ಸುಮಾರು 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಕ್ಸಪೋ ಯಶಸ್ಸಿಗೆ ವಿವಿಧ 225 ಕಂಪನಿಯ ಸ್ಟಾಲ್‌ಗಳನ್ನು ಹಾಕಲಾಗಿದೆ. ಐಎನ್ ಎಕ್ಸಪೋ ದಿಂದಾಗಿ ಹೊಸ ಉದ್ಯಮದಾರರಿಗೆ, ಉದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ಎಕ್ಸಪೋದಲ್ಲಿ ಉದ್ಯಮದಲ್ಲಿ ಯಶಸ್ವಿಯಾದ ಉದ್ಯಮಿಗಳಿಂದ ಉಪನ್ಯಾಸ ಮತ್ತು ಸಾಹಸಗಾಥೆಯನ್ನು ವಿವರಿಸಲಾಗುತ್ತದೆ. 50 ಸಾವಿರ ಚದರ ಅಡಿ ಪ್ರದೇಶದಲ್ಲಿ ಟ್ರೇಡ್ ಎಕ್ಸಪೋ ನಡೆಯುತ್ತಿದ್ದು, ಇಲ್ಲಿ ನೂರಾರು ಕಂಪನಿಗಳು ಬರುವುದರಿಂದ ಇದರಿಂದ ಹೊಸ ಉದ್ಯಮ ಸ್ಥಾಪಿಸುವವರಿಗೆ ಸಹಕಾರಿಯಾಗಿದೆ ಎಂದರು.

ಟ್ರೇಡ್ ಎಕ್ಸಪೋಗೆ ಆಗಮಿಸಲು ಪ್ರತಿ 30 ನಿಮಿಷಕ್ಕೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಎಕ್ಸಪೋ ವೀಕ್ಷಿಸಲು ಪಾಸ್ ಅವಶ್ಯಕತೆ ಇದ್ದು, ಇದನ್ನು ಕಚೇರಿಯಲ್ಲಿ ತೆಗೆದುಕೊಳ್ಳಬಹುದು ಎಂದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನೌಮಾನ್ ಪಟೇಲ್, ಗುಫ್ರಾನ್ ಲಂಕಾ, ಅಬ್ದುಲ್ ಮುಯೀನ್ ಕಾಡ್ಲಿ ಮುಂತಾದವರು ಉಪಸ್ಥಿತರಿದ್ದರು.