ಸರ್ವರ್ ಸಮಸ್ಯೆಯಿಂದ ಬೇಸತ್ತ ಪಡಿತರದಾರರು

| Published : Dec 01 2024, 01:30 AM IST

ಸಾರಾಂಶ

ಹಿರಿಯೂರು: ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ನವೆಂಬರ್ ತಿಂಗಳ ಪಡಿತರ ಪಡೆಯಲು ಪಡಿತರ ಚೀಟಿದಾರರು ಪರದಾಡಿದ ಘಟನೆ ಶನಿವಾರ ನಡೆಯಿತು.

ಹಿರಿಯೂರು: ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ನವೆಂಬರ್ ತಿಂಗಳ ಪಡಿತರ ಪಡೆಯಲು ಪಡಿತರ ಚೀಟಿದಾರರು ಪರದಾಡಿದ ಘಟನೆ ಶನಿವಾರ ನಡೆಯಿತು.

ನವೆಂಬರ್ ತಿಂಗಳ ಪಡಿತರ ಪಡೆಯಲು ಶನಿವಾರ ಕೊನೆಯ ದಿನವಾಗಿದ್ದು, ರಾಜ್ಯಾದ್ಯoತ ಸರ್ವರ್ ಸಮಸ್ಯೆಯಿಂದ ಪಡಿತರ ಚೀಟಿ ಹೊಂದಿರುವವರು ಪಡಿತರ ಪಡೆಯದೇ ತೊಂದರೆ ಅನುಭವಿಸಿದ್ದಾರೆ. ಬೆಳಿಗ್ಗೆಯಿಂದಲೂ ನ್ಯಾಯಬೆಲೆ ಅಂಗಡಿಗಳ ಎದುರು ಕಾದು ಕುಳಿತ ಪಡಿತರ ಚೀಟಿದಾರರು ಮಧ್ಯಾಹ್ನದವರೆಗೂ ಕಾದರೂ ಸರ್ವರ್ ಬರದಿದ್ದರಿಂದ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಮಹಾನಾಯಕ ದಲಿತ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್ ಪ್ರತಿಕ್ರಿಯಿಸಿ, ಒಂದೊಂದು ನ್ಯಾಯಬೆಲೆ ಅಂಗಡಿಯಲ್ಲಿ ನೂರಕ್ಕೂ ಹೆಚ್ಚು ಕಾರ್ಡುಗಳ ಪಡಿತರ ವಿತರಣೆ ಬಾಕಿ ಇದೆ. ನಾವೀಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ವಿಚಾರಿಸಿದ್ದು, ಇದು ರಾಜ್ಯದಾದ್ಯಂತ ಆಗಿರುವ ಸಮಸ್ಯೆ ಎಂದರು.

ಸಂಜೆ ಹೊತ್ತಿಗೆ ಸರಿ ಆಗಲಿದೆ ಎಂದಿದ್ದರು. ಸಂಜೆ ಐದು ಗಂಟೆಗೆ ಸರ್ವರ್ ಬಂದಿದ್ದು, ಎಲ್ಲಾ ಕಾರ್ಡುದಾರರಿಗೆ ಪಡಿತರ ವಿತರಿಸುವುದು ಅಸಾಧ್ಯ. ಪಡಿತರ ಸಿಗದ ಬಡವರು ಒಂದು ತಿಂಗಳು ಜೀವನ ಹೇಗೆ ನಿಭಾಯಿಸಬೇಕು ಎಂಬುದನ್ನು ಸಂಬಂಧಪಟ್ಟವರು ಅರಿಯಬೇಕು ಎಂದು ಹೇಳಿದರು.