ಅನುದಾನಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದ್ದು, ಮುಂದಿನ ಒಂದೂವರೆ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಪಂಚಾಯಿತಿಗೆ ೧೦- ೧೫ ಕೋಟಿ, ಪುರಸಭೆಗೆ ೨೦ ಕೋಟಿ, ನಗರಸಭೆಗೆ ೩೦ ಕೋಟಿ: ಸಚಿವ ಎಚ್.ಸಿ.ಬಾಲಕೃಷ್ಣ ಘೋಷಣೆ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಲು ತೀರ್ಮಾನಿಸಿದ್ದು, ಪಟ್ಟಣ ಪಂಚಾಯಿತಿಗಳಿಗೆ ರು. ೧೦ ರಿಂದ ೧೫ ಕೋಟಿ, ಪುರಸಭೆಗಳಿಗೆ ರು. ೨೦ ಕೋಟಿ ಹಾಗೂ ನಗರಸಭೆಗಳಿಗೆ ರು. ೩೦ ಕೋಟಿ ಅನುದಾನ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಘೋಷಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೋಲಾರ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಅನುದಾನಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದ್ದು, ಮುಂದಿನ ಒಂದೂವರೆ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡ, ಸರ್ಕಾರದಿಂದ ರು. ೪೦ ಕೋಟಿ ವಿಶೇಷ ಅನುದಾನ ತಂದರೂ ಎಸ್ಟಿಮೇಟ್ ಮತ್ತು ಟೆಂಡರ್ ಅನುಮೋದನೆಗಾಗಿ ಬೆಂಗಳೂರಿನ ಕಚೇರಿಗಳಿಗೆ ಒಂದೂವರೆ ವರ್ಷದಿಂದ ಅಲೆಯುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಇನ್ಮುಂದೆ ಅನುದಾನದ ಕ್ರಿಯಾಯೋಜನೆ, ಎಸ್ಟಿಮೇಟ್ ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಬೆಂಗಳೂರಿಗೆ ಕಳುಹಿಸುವ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿ ಮಟ್ಟದಲ್ಲೇ ಕಾರ್ಯಪಾಲಕ ಎಂಜಿನಿಯರ್ಗಳ ಮೂಲಕ ಎಸ್ಟಿಮೇಟ್ ಸಿದ್ಧಪಡಿಸಿ, ಟೆಂಡರ್ ಅಂತಿಮಗೊಳಿಸಲು ಅಧಿಕಾರ ನೀಡಲಾಗುವುದು ಎಂದರು.ಕೋಲಾರ, ಮಾಲೂರು ಮತ್ತು ಬಂಗಾರಪೇಟೆಗೆ ನೀರು ಪೂರೈಸುವ ೫೦೦ ಎಂಸಿಎಫ್ಟಿ ಸಾಮರ್ಥ್ಯದ ಯರಗೋಳ್ ಜಲಾಶಯದಲ್ಲಿ ಸದ್ಯ ೧೩೦ ಎಂಸಿಎಫ್ಟಿ ನೀರು ಮಾತ್ರ ಲಭ್ಯವಿದ್ದು, ಇನ್ನೂ ೨-೩ ತಿಂಗಳಿಗೆ ಮಾತ್ರ ಸಾಕಾಗಲಿದೆ. ಜಲಾಶಯದ ನಿರ್ವಹಣೆಗೆ ವಾರ್ಷಿಕ ರು. ೯ ಕೋಟಿ ವಿಶೇಷ ಅನುದಾನ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಯರಗೋಳ್ ನಿರ್ವಹಣೆಗೆ ವಿಶೇಷ ಗಮನ ಹರಿಸಲಾಗುವುದು ಎಂದರು.
ಕೆಸಿ ವ್ಯಾಲಿಯಿಂದ ಬರಬೇಕಿದ್ದ ೪೨೦ ಎಂಎಲ್ಡಿ ನೀರಿನ ಬದಲು ಸದ್ಯ ೩೪೦ ಎಂಎಲ್ಡಿ ನೀರು ಹರಿಯುತ್ತಿದ್ದು, ಕೆರೆಗಳು ಶೇ.೨೦ ರಿಂದ ೩೩ ರಷ್ಟು ಮಾತ್ರ ತುಂಬಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಕೆಜಿಎಫ್ ನಗರಕ್ಕೆ ಬ್ರಿಟಿಷ್ ಕಾಲದ ಬೇತಮಂಗಲ (೩೪೮ ಎಂಸಿಎಫ್ಟಿ) ಹಾಗೂ ರಾಮಸಾಗರ ಕೆರೆಗಳಿಂದ ನೀರು ಪೂರೈಕೆಯಾಗುತ್ತಿದ್ದು, ಹಳೆಯ ಶುದ್ಧೀಕರಣ ಘಟಕದ ಮೇಲ್ದರ್ಜೆಗೇರಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.ಕೋಲಾರ ನಗರದಲ್ಲಿ ರೂ.೬೦ ಕೋಟಿ ವೆಚ್ಚದ ಯುಜಿಡಿ ಕಾಮಗಾರಿ, ಮಾಲೂರಿನಲ್ಲಿ ರೂ.೩೩ ಕೋಟಿ ವೆಚ್ಚದ ಅಮೃತ್ ೨.೦ ಕುಡಿಯುವ ನೀರಿನ ಯೋಜನೆ (ಶೇ.೫೫ ಪ್ರಗತಿ) ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದಕ್ಕೆ ಸಚಿವರು ಕೆ.ಯು.ಐ.ಡಿ.ಎಫ್.ಸಿ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಾಲೂರಿನಲ್ಲಿ ಪೈಪ್ಲೈನ್ ಕಾಮಗಾರಿ ವಿಳಂಬದಿಂದ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ದೂರಿದರು. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದ ಗುತ್ತಿಗೆದಾರರಿಗೆ ಕೇವಲ ನೋಟಿಸ್ ನೀಡದೆ, ಗುತ್ತಿಗೆ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸುವಂತೆ ಸಚಿವರು ಆದೇಶಿಸಿದರು.ಇದೇ ವೇಳೆ, ಮುಳಬಾಗಿಲಿನಲ್ಲಿ ೨೦೧೪-೧೫ನೇ ಸಾಲಿನ ರೂ.೨೭ ಕೋಟಿ ಯೋಜನೆಯಡಿ ಕೊರೆಯಲಾದ ೮೦ ಬೋರ್ವೆಲ್ಗಳು ಮತ್ತು ಪಂಪ್ ಮೋಟಾರುಗಳ ಸ್ಥಿತಿಗತಿ ಬಗ್ಗೆ ಜಂಟಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ಆದೇಶಿಸಿದರು.
ಬಂಗಾರಪೇಟೆಯಲ್ಲಿ ಮಂಜೂರಾದ ೨೩೬ ಹುದ್ದೆಗಳ ಪೈಕಿ ೧೫೪ ಸಿಬ್ಬಂದಿ ಮಾತ್ರ ಇದ್ದು, ಆರೋಗ್ಯ ನಿರೀಕ್ಷಕರು, ಎಇಇ ಹಾಗೂ ಕಂದಾಯ ಅಧಿಕಾರಿಗಳಿಲ್ಲದೆ ಆಡಳಿತಕ್ಕೆ ತೊಂದರೆಯಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಗಮನ ಸೆಳೆದರು.ಕೋಲಾರದಲ್ಲಿ ನಿತ್ಯ ೬೫ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಎಂಆರ್ಎಫ್ ಘಟಕ ಶೇ.೭೫ ಪೂರ್ಣಗೊಂಡಿದೆ. ಆದರೆ, ೪೫ ಸಾವಿರ ಟನ್ ಹಳೆ ಕಸ (ಲೆಗೆಸಿ ವೇಸ್ಟ್) ವಿಲೇವಾರಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಮಾರ್ಚ್ ಅಂತ್ಯದೊಳಗೆ ಸ್ವಚ್ಛ ಭಾರತ್ ಮಿಷನ್ ಅನುದಾನ ಬಳಸಿ ಕೆಲಸ ಮುಗಿಸದಿದ್ದರೆ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚಿಸಿದರು. ಕಸ ಸಂಗ್ರಹಣೆಗೆ ಅಗತ್ಯವಿರುವ ಹೊಸ ವಾಹನಗಳ ಪಟ್ಟಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದರು.ಇ-ಖಾತಾ ಹಾಗೂ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ’ದಾಖಲೆ ಲಭ್ಯವಿಲ್ಲ’ ಎಂಬ ನೆಪವೊಡ್ಡಿ ಅನಗತ್ಯವಾಗಿ ತಿರಸ್ಕರಿಸದೆ, ಅಧಿಕಾರಿಗಳೇ ದಾಖಲೆ ಹುಡುಕಿ ಜನರಿಗೆ ನೆರವಾಗುವಂತೆ ಸೂಚಿಸಲಾಯಿತು.
ಕೆಜಿಎಫ್ ಶಾಸಕಿ ರೂಪಕಲಾ ಎಂ.ಶಶಿಧರ್, ಎಂ.ಜಿ. ಮಾರ್ಕೆಟ್ ವಾಣಿಜ್ಯ ಸಂಕೀರ್ಣ ನಿರ್ಮಾಣ, ಬಿಇಎಂಎಲ್ ಸಂಸ್ಥೆಯಿಂದ ೨೦ ವರ್ಷಗಳಿಂದ ಬಾಕಿ ಇರುವ ರೂ.೮-೯ ಕೋಟಿ ಆಸ್ತಿ ತೆರಿಗೆಯ ಒನ್-ಟೈಮ್ ಸೆಟ್ಲ್ಮೆಂಟ್, ಎಸ್ಟಿಪಿ ಸಂಪರ್ಕ ರಸ್ತೆ ಹಾಗೂ ರೂ.೧೦ ಕೋಟಿ ಸಿಎಂಐಡಿಪಿ ರಸ್ತೆ ಕಾಮಗಾರಿಗಳ ವಿಳಂಬದ ಬಗ್ಗೆ ಪ್ರಸ್ತಾಪಿಸಿದರು.ಸಭೆಯ ಅಂತ್ಯದಲ್ಲಿ ಕೋಲಾರ ಶಾಸಕ ಡಾ.ಕೊತ್ತೂರು ಜಿ.ಮಂಜುನಾಥ್, ನಗರದ ಎಸ್ಎನ್ಆರ್ ಆಸ್ಪತ್ರೆ ಹಾಗೂ ಕೆಎಸ್ಆರ್ಟಿಸಿ ಡಿಪೋ ಬಳಿಯ ಕಸ ವಿಲೇವಾರಿಗೆ ೩೦ ವರ್ಷ ಹಳೆಯ ವಾಹನ ಬಳಕೆ, ನಕಲಿ ಮರಣ ಪ್ರಮಾಣಪತ್ರ ವಿತರಣೆ ಹಾಗೂ ರೂ.೪,೦೦೦ ಮೌಲ್ಯದ ಕ್ಯಾಮೆರಾಗೆ ರೂ.೧.೭೦ ಲಕ್ಷ ಬಿಲ್ ಮಾಡಿರುವ ಅವ್ಯವಹಾರದ ಕುರಿತು ಕೋಲಾರ ಪೌರಾಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಎಂಎಲ್ಸಿ ಅನಿಲ್ ಕುಮಾರ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ.ಎಲ್.ರವೀಂದ್ರ, ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಇದ್ದರು.