ವರ್ತುಲ ರೈಲ್ವೆಗೆ ಉಪನಗರ ರೈಲ್ವೆ ಜೋಡಣೆ ಪ್ರಸ್ತಾವ

| Published : Mar 29 2024, 02:00 AM IST

ಸಾರಾಂಶ

ಬೆಂಗಳೂರಿನ ಸಬ್‌ ಅರ್ಬನ್‌ ರೈಲ್ವೆಯನ್ನು ಹೊರ ವರ್ತುಲ ರೈಲ್ವೆ ಜೊತೆಗೆ ಜೋಡಿಸಲು ಕೆ-ರೈಡ್‌ ಪ್ರಸ್ತಾವನೆ ಸಲ್ಲಿಸಿದೆ. ಈ ಜೋಡಣೆಯಿಂದ ನಗರಕ್ಕೆ ಪ್ರಯಾಣಿಸಲು ಭಾರಿ ಅನುಕೂಲ ಆಗಲಿದೆ.

ಮಯೂರ್‌ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಉಪನಗರ ರೈಲ್ವೆ ಯೋಜನೆಯನ್ನು ವರ್ತುಲ ರೈಲ್ವೆವರೆಗೆ ವಿಸ್ತರಿಸಿ ಎರಡೂ ರೈಲ್ವೆ ವ್ಯವಸ್ಥೆಗಳ ನಡುವೆ ಸಂಪರ್ಕ ಕಲ್ಪಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಿದೆ. ಇದರಿಂದ ಹೊರವಲಯದ ಪ್ರಯಾಣಿಕರು ನಗರಕ್ಕೆ ಸುಲಭವಾಗಿ ಬರಬಹುದಾಗಿದ್ದು, ರಸ್ತೆ ಮೇಲಿನ ಒತ್ತಡ ಕಡಿಮೆಯಾಗಲಿದೆ.

ರೈಲ್ವೆ ಇಲಾಖೆಯು 287 ಕಿಲೋ ಮೀಟರ್‌ ವರ್ತುಲ ರೈಲ್ವೆ ಯೋಜನೆಗಾಗಿ ₹7.19 ಕೋಟಿ ಮೊತ್ತದಲ್ಲಿ ಅಂತಿಮ ಹಂತದ ಜಾಗದ ಸರ್ವೆ ನಡೆಸುತ್ತಿದೆ. ಉಪನಗರ ರೈಲ್ವೆ ಯೋಜನೆಯ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ನಡುವಿನ ಎರಡನೇ ಕಾರಿಡಾರ್‌ ಕಾಮಗಾರಿ ಪ್ರಗತಿಯಲ್ಲಿದೆ. ಉಪನಗರ ರೈಲನ್ನು ಎರಡನೇ ಹಂತದಲ್ಲಿ ಹೊರ ಜಿಲ್ಲೆಗಳಿಗೂ ವಿಸ್ತರಿಸುವ ಮರು ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಕೆ-ರೈಡ್‌ನಿಂದ ಕಳುಹಿಸಲಾಗಿದೆ. ಇದು ಸಾಧ್ಯವಿರುವೆಡೆ ಉಪನಗರ ರೈಲನ್ನು ವರ್ತುಲ ರೈಲಿಗೆ ಸಂಪರ್ಕ ಕಲ್ಪಿಸುವ ವಿಸ್ತರಣಾ ಪ್ರಸ್ತಾಪ ಒಳಗೊಂಡಿದೆ ಎಂದು ಉಪನಗರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಸಂಪರ್ಕ:

ಉಪನಗರ ರೈಲಿನ 4ನೇ ಕನಕ ಕಾರಿಡಾರ್ ಹಾಗೂ ವರ್ತುಲ ರೈಲು ಹೀಲಲಿಗೆಯಲ್ಲಿ ಮತ್ತು 1ನೇ ಕಾರಿಡಾರ್‌ ಹಾಗೂ ವರ್ತುಲ ರೈಲು ದೇವನಹಳ್ಳಿಯಲ್ಲಿ ಸಂಧಿಸುತ್ತವೆ. ಇಲ್ಲಿ ಎರಡೂ ರೈಲು ವ್ಯವಸ್ಥೆಗಳನ್ನು ಸಂಪರ್ಕಿಸುವುದು ಸುಲಭ. ಆದರೆ, ಉಪನಗರ ರೈಲು ಕೊನೆಗೊಳ್ಳುವ ರಾಜಾನುಕುಂಟೆ ಹಾಗೂ ವರ್ತುಲ ರೈಲು ಹಾದು ಹೋಗುವ ದೊಡ್ಡಬಳ್ಳಾಪುರ ನಡುವೆ 8 ಕಿ.ಮೀ., ಉಪನಗರ ರೈಲಿನ 3ನೇ ಕಾರಿಡಾರ್‌ ಆರಂಭವಾಗುವ ಕೆಂಗೇರಿ ಮತ್ತು ವರ್ತುಲ ರೈಲು ಹಾದು ಹೋಗುವ ಹೆಜ್ಜಾಲದ ನಡುವೆ ಸುಮಾರು 12 ಕಿ.ಮೀ., ಉಪನಗರ ರೈಲಿನ 2ನೇ ಕಾರಿಡಾರ್‌ ಕೊನೆಗೊಳ್ಳುವ ಚಿಕ್ಕಬಾಣಾವರ ಹಾಗೂ ವರ್ತುಲ ರೈಲು ಹೋಗುವ ನಂಜಪ್ಪ ಗಾರ್ಡನ್‌ ನಡುವಣ ಸರಿಸುಮಾರು 20 ಕಿ.ಮೀ. ಮತ್ತು ಚಿಕ್ಕಬಾಣಾವರ ಹಾಗೂ ನಿಡವಂದ ನಡುವೆ 19 ಕಿ.ಮೀ. ಅಂತರವಿದೆ.

ಪ್ರಯಾಣಿಕರಿಗೆ ಅನುಕೂಲ

ಈ ಅಂತರವನ್ನು ಸಂಪರ್ಕಿಸಲು ಉಪನಗರ ರೈಲನ್ನು ವಿಸ್ತರಿಸುವ ಅಗತ್ಯವಿದೆ. ಇಲ್ಲದಿದ್ದರೆ ಹೊರವಲಯದ ಪ್ರಯಾಣಿಕರು ವರ್ತುಲ ರೈಲಿಗೆ ಬಂದು ಅಲ್ಲಿಂದ ಉಪನಗರ ರೈಲು ಏರಲು ಆಟೋ ಸೇರಿ ಖಾಸಗಿ ವಾಹನ ಅವಲಂಬಿಸಬೇಕಾಗುತ್ತದೆ. ಪುನಃ ಇದರಿಂದ ರಸ್ತೆ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ. ಇದರಿಂದ ಜನತೆಗೆ ಅನಾನುಕೂಲವಾಗುತ್ತದೆ. ಸ್ಥಳೀಯ ಪ್ರಯಾಣಿಕರಿಗೆ ಪರಿಣಾಮಕಾರಿಯಾಗಿ ಸೇವೆ ಒದಗಿಸುವಲ್ಲಿ ರೈಲ್ವೆ ವಿಫಲವಾಗಿದೆ. ಉಪನಗರ ರೈಲು ವಿಸ್ತರಣೆಗೆ ಅನುಮತಿ ಕೊಡದಿದ್ದರೆ ವರ್ತುಲ ರೈಲಿನ ಸದುಪಯೋಗ ಆಗುವುದಿಲ್ಲ ಎಂದು ಸಾರಿಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನುಮೋದನೆ ಕೊಡಿ

ಉಪನಗರ ವಿಸ್ತರಣೆಯ ಪ್ರಸ್ತಾಪಕ್ಕೆ ನೈಋತ್ಯ ರೈಲ್ವೆ, ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಎರಡನೇ ಹಂತದಲ್ಲಿ ಹೊರ ಜಿಲ್ಲೆಗಳಿಗೆ ಉಪನಗರ ರೈಲನ್ನು ವಿಸ್ತರಣೆ ಮಾಡುವುದರ ಜೊತೆಗೆ ಆದ್ಯತೆ ಮೇರೆಗೆ ಅನುಮೋದನೆ ನೀಡಬೇಕು. ಇದರಿಂದ ವರ್ತುಲ ರೈಲಿಗೆ ಹೆಚ್ಚಿನ ಉಪಯೋಗವಿದೆ ಎಂದು ಕೆ-ರೈಡ್‌ ಅಧಿಕಾರಿಗಳು ಹೇಳುತ್ತಾರೆ.ಇದು ಒಳ್ಳೆಯ ಪ್ರಸ್ತಾವನೆ. ಉಪನಗರ ರೈಲು ಹಾಗೂ ವರ್ತುಲ ರೈಲ್ವೆ ನಡುವಣ ಸಂಪರ್ಕ ಇದ್ದರೆ ಮಾತ್ರ ಎರಡೂ ವ್ಯವಸ್ಥೆಗಳ ಉದ್ದೇಶ ಈಡೇರುತ್ತದೆ. ಒಂದಕ್ಕೊಂದು ಸಂಬಂಧ ಇರದಿದ್ದರೆ ಪ್ರಯಾಣಿಕರಿಗೆ ಕಷ್ಟವಾಗಲಿದೆ.

-ರಾಜ್‌ಕುಮಾರ್‌ ದುಗರ್‌, ಸಾರಿಗೆ ತಜ್ಞ.