ಸಬ್‌ಅರ್ಬನ್‌ ರೈಲು ಸ್ಥಗಿತ ; ಲೆವೆಲ್‌ ಕ್ರಾಸ್‌ ತೆರವೂ ವಿಳಂಬ!

| N/A | Published : Jul 06 2025, 01:48 AM IST / Updated: Jul 06 2025, 08:36 AM IST

ಸಬ್‌ಅರ್ಬನ್‌ ರೈಲು ಸ್ಥಗಿತ ; ಲೆವೆಲ್‌ ಕ್ರಾಸ್‌ ತೆರವೂ ವಿಳಂಬ!
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾಮಗಾರಿ ಬಹುತೇಕ ಸ್ಥಗಿತ ಪರಿಣಾಮ ಪ್ರಮುಖವಾಗಿ ನಗರದಲ್ಲಿ 26 ಕಡೆ ಇರುವ ಲೆವೆಲ್‌ ಕ್ರಾಸ್‌ (ಎಲ್‌ಸಿ) ತೆರವು ಯೋಜನೆಯೂ ವಿಳಂಬವಾಗುತ್ತಿದೆ.

ಮಯೂರ್‌ ಹೆಗಡೆ

 ಬೆಂಗಳೂರು :  ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾಮಗಾರಿ ಬಹುತೇಕ ಸ್ಥಗಿತ ಪರಿಣಾಮ ಪ್ರಮುಖವಾಗಿ ನಗರದಲ್ಲಿ 26 ಕಡೆ ಇರುವ ಲೆವೆಲ್‌ ಕ್ರಾಸ್‌ (ಎಲ್‌ಸಿ) ತೆರವು ಯೋಜನೆಯೂ ವಿಳಂಬವಾಗುತ್ತಿದೆ.

ಯೋಜನೆ ಅನುಷ್ಠಾನ ಮಾಡುತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯು (ಕೆ-ರೈಡ್‌) ಬಿಎಸ್‌ಆರ್‌ಪಿ ಹಾದು ಹೋಗುವ ಎಲ್ಲ ನಾಲ್ಕು ಕಾರಿಡಾರ್‌ಗಳಲ್ಲಿ ಇರುವ ನೈಋತ್ಯ ರೈಲ್ವೆಯ ಎಲ್ಲ ಲೆವೆಲ್‌ ಕ್ರಾಸ್‌ ತೆರವುಗೊಳಿಸಲು ಉದ್ದೇಶಿಸಿದೆ. ಇದಕ್ಕಾಗಿ ಆರ್‌ಯುಬಿ, ಆರ್‌ಒಬಿ ನಿರ್ಮಿಸುವ ಬದಲಾಗಿ ಹಳಿಗಳನ್ನೇ ಮೇಲಕ್ಕೆ ಎತ್ತರಿಸುವ ಯೋಜನೆ ರೂಪಿಸಿದೆ.

ಆದರೆ, ಪ್ರಸ್ತುತ ಬಿಎಸ್‌ಆರ್‌ಪಿ ಮೊದಲ ಕಾರಿಡಾರ್‌ ಸಂಪಿಗೆ ಮೆಜೆಸ್ಟಿಕ್‌- ದೇವನಹಳ್ಳಿ (41.40ಕಿಮೀ) ಹಾಗೂ ಮೂರನೇ ಕಾರಿಡಾರ್‌ ‘ಪಾರಿಜಾತ’ ಕೆಂಗೇರಿ - ವೈಟ್‌ಫೀಲ್ಡ್ ( 35.52ಕಿಮೀ) ಮಾರ್ಗ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಎರಡನೇ ಕಾರಿಡಾರ್‌ ‘ಮಲ್ಲಿಗೆ’ ಬೈಯಪ್ಪನಹಳ್ಳಿ ಚಿಕ್ಕಬಾಣಾವಾರ (25.01 ಕಿಮೀ) ಕಾಮಗಾರಿ ಹಾಗೂ ನಾಲ್ಕನೇ ಕಾರಿಡಾರ್‌ ‘ಕನಕ’ ಹೀಲಲಿಗೆ - ರಾಜಾನುಕುಂಟೆ ಕಾಮಗಾರಿ ಭೂಸ್ವಾಧೀನ, ಹಸ್ತಾಂತರ ಸಮಸ್ಯೆಯಿಂದ ಸ್ಥಗಿತಗೊಂಡಿದೆ.

ಪರಿಣಾಮ ಈ ಯೋಜನೆಗೆ ಪೂರಕವಾಗಿದ್ದ ಎಲ್‌ಸಿ ತೆರವು ಕಾಮಗಾರಿ ಕೂಡ ಆಗಿಲ್ಲ. ಬೈಯಪ್ಪನಳ್ಳಿ - ಚಿಕ್ಕಬಾಣಾವರ ಮಾರ್ಗದಲ್ಲಿ ಶ್ಯಾಂಪುರದ ಬಳಿ ನಡೆಯುತ್ತಿದ್ದ ಹಳಿ ಮೇಲಕ್ಕೆ ಎತ್ತರಿಸುವ ಕಾಮಗಾರಿ ಸ್ಥಗಿತಗೊಂಡು ಮೂರ್ನಾಲ್ಕು ತಿಂಗಳು ಕಳೆದಿದೆ. ಉಳಿದಂತೆ ಇತರ ಬಿಎಸ್‌ಆರ್‌ಪಿ ಮಾರ್ಗಗಳಲ್ಲಿ ಎಲ್ಲಿಯೂ ಈ ಕಾಮಗಾರಿಯೇ ಆರಂಭವಾಗಿಲ್ಲ.

ಆರ್‌ಒಬಿ, ಆರ್‌ಯುಬಿ ನಿರ್ಮಾಣ ಮಾಡಲು ಭೂಸ್ವಾಧೀನ ಅಗತ್ಯ. ಆದರೆ, ರೈಲು ಹಳಿ ಎತ್ತರಿಸಲು ಹೆಚ್ಚುವರಿ ಭೂಮಿ ಬೇಕಾಗಿಲ್ಲ. ಹೀಗಾಗಿ ಭೂಸ್ವಾಧೀನಕ್ಕೆ ಹೆಚ್ಚಿನ ಪರಿಹಾರ ಮೊತ್ತವೂ ಬೇಕಾಗಿಲ್ಲ. ಪ್ರಸ್ತುತ ಇರುವ ರೈಲು ಹಳಿಯ ಗುಂಟವೇ ಬಿಎಸ್‌ಆರ್‌ಪಿ ಮಾರ್ಗದ ಹಳಿಗಳು ನಿರ್ಮಾಣ ಆಗುತ್ತವೆ. ಮೊದಲು ಬಿಎಸ್‌ಆರ್‌ಪಿ ಹಳಿ ಎತ್ತರಿಸಿ ನಿರ್ಮಿಸಲಾಗುತ್ತದೆ. ಅದಕ್ಕೆ ರೈಲ್ವೆ ಇಲಾಖೆಯ ರೈಲು ಸಂಚಾರವನ್ನು ಬದಲಿಸಿದ ಬಳಿಕ ಈಗಾಗಲೇ ಇರುವ ಹಳಿಗಳನ್ನು ಎತ್ತರಿಸಲಾಗುತ್ತದೆ. ನಾಲ್ಕು ಪಥ ನಿರ್ಮಾಣವಾದ ನಂತದ ಬಿಎಸ್‌ಆರ್‌ಪಿ ರೈಲು ಸಂಚಾರ ಆರಂಭ ಆಗಲಿದೆ.

ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಸುಮಾರು 52 ಲೆವೆಲ್‌ ಕ್ರಾಸ್‌ಗಳಿವೆ. ರೈಲು ದಾಟಿ ಹೋಗುವಾಗ ಗೇಟ್‌ ಮುಚ್ಚುವುದು ಅನಿವಾರ್ಯ. ಪ್ರಯಾಣಿಕರು ಕನಿಷ್ಠ 5 ರಿಂದ 15 ನಿಮಿಷ ಕಾಯುವಂತಹ ಸ್ಥಿತಿ ಇದೆ.

ಎಲ್ಲೆಲ್ಲಿ ತೆರವು?

ಕೊಡಿಗೇಹಳ್ಳಿ, ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಹಿಂಭಾಗ, ದೊಡ್ಡಜಾಲ, ಕೆಐಎಡಿಬಿ, ದೇವನಹಳ್ಳಿ- 2, ಬಾಣಸವಾಡಿ, ಕಾವೇರಿನಗರ, ನಾಗವಾರ, ಕನಕನಗರ - 2, ಜ್ಞಾನಭಾರತಿ, ಆ‌ರ್.ವಿ. ಕಾಲೇಜು, ಸಿಂಗ್ರನ ಅಗ್ರಹಾರ, ಹುಸ್ಕೂರು - 2, ಅಂಬೇಡ್ಕರ್ ನಗರ, ಮಾರತ್ತಹಳ್ಳಿ, ಕಗ್ಗದಾಸಪುರ, ಜಕ್ಕೂರು, ಕೆಪಿಸಿಎಲ್ ಗ್ಯಾಸ್‌ ಪವರ್ ಪ್ಲಾಂಟ್, ಮುದ್ದನಹಳ್ಳಿ, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ ಸೇರಿ 26 ಕಡೆ ಎಲ್‌ಸಿ ತೆರವು ಉದ್ದೇಶಿಸಲಾಗಿತ್ತು.

ಬಿಎಸ್‌ಆರ್‌ಪಿ ಲೆವೆಲ್‌ ಕ್ರಾಸ್‌ ತೆರವು ಮಾಡಲು ಸಾಕಷ್ಟು ಅನುಕೂಲವಾಗುತ್ತಿತ್ತು. ಆದರೆ ಒಂದು ಎಲ್‌ಸಿಯನ್ನೂ ತೆರವು ಮಾಡಿಲ್ಲ. ಕಾಮಗಾರಿ ನಡೆಯುತ್ತಿದ್ದ 2ನೇ ಕಾರಿಡಾರ್‌ನಲ್ಲಿ ಕನಿಷ್ಠ ಒಂದೆರಡನ್ನು ಪೂರ್ಣಗೊಳಿಸಿದ್ದರೂ ಜನತೆಗೆ ವ್ಯತ್ಯಾಸ, ಅನುಕೂಲ ತಿಳಿಯುತ್ತಿತ್ತು.

ರಾಜ್‌ಕುಮಾರ್‌ ದುಗರ್‌, ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಘಟನೆ

Read more Articles on