ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಉತ್ತಮ ದೈಹಿಕ ಕ್ಷಮತೆ ಇದ್ದರಷ್ಟೇ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಪೊಲೀಸರು ದೈಹಿಕ ಸದೃಢತೆಗೆ ಒತ್ತು ಕೊಡಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಮಂಜುನಾಥ ನಾಯ್ಕ್ ಹೇಳಿದರು.ಜಿಲ್ಲಾ ಪೊಲೀಸ್ ಘಟಕವು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ದಿನನಿತ್ಯ ಕೆಲಸದ ಒತ್ತಡದಲ್ಲಿಯೇ ದಿನ ಕಳೆಯುವ ಪೊಲೀಸ್ ಅಧಿಕಾರಿ-ಸಿಬ್ಬಂದಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಸಹಕಾರಿ ಆಗಲಿದೆ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲವು ಎಂಬುದು ಸಾಮಾನ್ಯ ಸಂಗತಿ. ಪ್ರತಿ ಹಂತದಲ್ಲೂ ಗೆಲುವಿನ ನಿರೀಕ್ಷೆ ಸಹಜ. ಆದರೆ, ಎಲ್ಲ ಸಂದರ್ಭದಲ್ಲೂ ಗೆಲ್ಲಲು ಸಾಧ್ಯವಿಲ್ಲ. ಸೋಲುಗಳು ಸವಾಲುಗಳಿಗೆ ಮುಖಾಮುಖಿ ಆಗುವುದನ್ನು ತಿಳಿಸುತ್ತವೆ. ಸೋಲು ಮುಂದಿನ ಗೆಲುವಿಗೆ ಮುನ್ನುಡಿ ಆಗಬಲ್ಲದು ಎಂದರು.ಕ್ರೀಡೆಯು ವ್ಯಕ್ತಿಗೆ ಉಲ್ಲಾಸದಾಯಕ ವಾತಾವರಣ ನಿರ್ಮಿಸಲು ಸಹಕಾರಿ ಆಗಿರುವಂತೆಯೇ ತನ್ನಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಸದಾ ಲವಲವಿಕೆಯಿಂದಿರಲು, ಕಾರ್ಯಕ್ಷೇತ್ರದಲ್ಲಿ ಉತ್ಸುಕರಾಗಿರಲು ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ಕುಮಾರ್ ಭೂಮರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲ ಠಾಣೆಗಳ ಪೊಲೀಸ್ ಅಧಿಕಾರಿ- ಸಿಬ್ಬಂದಿ ಹಾಗೂ ಕ್ರೀಡಾಳುಗಳು ಉಪಸ್ಥಿತರಿದ್ದರು.- - -
ಬಾಕ್ಸ್3 ದಿನಗಳ ಕ್ರೀಡಾಕೂಟ, 9 ತಂಡಗಳು
ಲಾಠಿ ಹಿಡಿದು ಸದಾ ಬಂದೋಬಸ್ತ್ನಲ್ಲಿದ್ದ ಪೊಲೀಸರು, ಕರ್ತವ್ಯದ ಒತ್ತಡ ಬಿಟ್ಟು ಮೈದಾನಕ್ಕೆ ಇಳಿದು, ಕ್ರೀಡೆಯಲ್ಲಿ ಪಾಲ್ಗೊಂಡರು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ ಖಾಕಿ ಪಡೆ ರಿಲ್ಯಾಕ್ಸ್ ಮೂಡಿಗೆ ಜಾರಿತ್ತು.ಎಸ್ಪಿ ಜಿ.ಕೆ.ಮಿಥುನ್ಕುಮಾರ್ ನೇತೃತ್ವದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ಮೇಲಾಧಿಕಾರಿಗಳು, ಕಿರಿಯರು ಎನ್ನದೇ ಎಲ್ಲರೂ ಸಮಾನವಾಗಿ ಆಟದಲ್ಲಿ ಪಾಲ್ಗೊಂಡರು. ಮೂರು ದಿನ ನಡೆಯುವ ಕ್ರೀಡಾಕೂಟದಲ್ಲಿ 9 ತಂಡಗಳು ಪಾಲ್ಗೊಂಡಿವೆ. ಪ್ರತಿ ಕ್ರೀಡಾ ತಂಡಗಳು ಪ್ರದರ್ಶಿಸಿದ ಪಥಸಂಚಲನ ಗಮನ ಸೆಳೆಯಿತು.
- - --29ಎಸ್ಎಂಜಿಕೆಪಿ8:
ಶಿವಮೊಗ್ಗ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಮಂಜುನಾಥ ನಾಯ್ಕ್ ಚಾಲನೆ ನೀಡಿದರು.