ಮುಂಡರಗಿಯ ಶ್ರೀ ಜ.ಅ. ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶನಿವಾರ ತಾಲೂಕು ನೌಕರರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಮುಂಡರಗಿ: ಕ್ರೀಡಾಪಟುಗಳಿಗೆ ಆಟ ಮತ್ತು ನೋಟ ಚೆನ್ನಾಗಿದ್ದರೆ ಎಲ್ಲದರಲ್ಲಿಯೂ ಯಶಸ್ಸು ಸಾಧಿಸಲು ಸುಲಭವಾಗುತ್ತದೆ ಎಂದು ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಕಾರದೊಂದಿಗೆ, ಶ್ರೀ ಜ.ಅ. ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ನೌಕರರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಮತ್ತು ಗೆಲವು ಮುಖ್ಯವಲ್ಲ, ಭಾಗವಹಿಸುವುದೇ ಹೆಮ್ಮೆ ಎಂದು ಹೇಳಿದರು.ಒಂದು ಸಂಸ್ಕೃತ ಪಾಠಶಾಲೆಯಿಂದ ಪ್ರಾರಂಭವಾದ ಶ್ರೀ ಜ.ಅ.ವಿ. ಸಮಿತಿಯು ಈಗ 33 ಅಂಗಸಂಸ್ಥೆಗಳನ್ನು ಹೊಂದಿ ಬೆಳೆದು ನಿಂತಿದೆ. ನಾಡಿನ ಉದ್ದಗಲಕ್ಕೂ ಈ ವಿದ್ಯಾ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿದ್ದಾರೆ. ಎಲ್ಲರ ಸಹಕಾರ ಇಂತಹ ಕಾರ್ಯಕ್ರಮಕ್ಕೆ ಅವಶ್ಯ ಎಂದರು. ಸಮಿತಿಯ ಗೌರವ ಕಾರ್ಯದರ್ಶಿ ರಾಮಸ್ವಾಮಿ ಹೆಗಡಾಳ ಕಾರ್ಯಕ್ರಮ ಉದ್ಘಾಟಿಸಿದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ, ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿದರು.
ಕಾಲೇಜು ಮೇಲ್ವಿಚಾರಣಾ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಟಗಳು ಕೇವಲ ಗೆಲುವಿಗಾಗಿ, ಬಹುಮಾನಕ್ಕಾಗಿ ಮಾತ್ರವಲ್ಲ. ಎಲ್ಲರೊಂದಿಗೂ ಸಾಮರಸ್ಯ ಬೆಳೆಸುವುದಕ್ಕಾಗಿ ಆಟೋಟಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಚಟುವಟಿಕೆ ಇರಬೇಕು. ವಿದ್ಯಾ ಸಮಿತಿ ಶತಮಾನೋತ್ಸವದ ಅಂಗವಾಗಿ ಶ್ರೀಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.ಬಹುಮಾನದ ಪ್ರಾಯೋಜಕರಾದ ಆರ್.ಎಲ್. ಪೊಲೀಸ್‌ಪಾಟೀಲ್, ಎ.ಡಿ. ಬಂಡಿ, ಗಿರೀಶ ಅಂಗಡಿ, ಜಯಣ್ಣ ಗುಜ್ಜರ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಜ್ಯೋತಿಬಾ ಫರೀಟ್ ಅವರನ್ನು ಸನ್ಮಾನಿಸಲಾಯಿತು. ವಿ.ಎಫ್. ಗುಡದಪ್ಪನವರ, ಡಾ. ಡಿ.ಸಿ. ಮಠ, ಮಂಜುನಾಥ ಇಟಗಿ, ವೀರೇಶ ಸಜ್ಜನರ, ಉಮೆಶ ಹಿರೇಮಠ, ಪ್ರಾಚಾರ್ಯ ಡಾ. ಸಂತೋಷ ಹಿರೇಮಠ, ಡಾ. ಮನೋಜ ಕೋಪರ್ಡೆ ಉಪಸ್ಥಿತರಿದ್ದರು. ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ಒಟ್ಟು 11 ತಂಡಗಳು ಪಾಲ್ಗೊಂಡಿದ್ದವು. ಡಾ. ಆರ್.ಎಚ್. ಜಂಗಣವಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.