ಸಾರಾಂಶ
ಬಾಗಲಕೋಟೆ: ನಗರದ ವಿಶ್ವ ನೂತನ ಚಿತ್ರಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ನಗರದ ಶ್ರೀ ಹುಲಿಗೆಮ್ಮದೇವಿ (ಪ.ಜಾ.) ಸೇವಾ ಸಂಘದ ದ್ವಿತೀಯ ವಾರ್ಷಿಕೋತ್ಸವವನ್ನು ನೇತ್ರ ತಜ್ಞ ವೈದ್ಯ ಡಾ.ಸಂಗಮೇಶ ಸಾಲಿಮಠ ಉದ್ಘಾಟಿಸಿ ಮಾತನಾಡಿ, ಇಂದಿನ ಯುವಜನತೆ ಒಳ್ಳೆಯ ಕನಸು, ನಿಶ್ಚಿತ ಗುರಿ ಇಟ್ಟುಕೊಂಡು ಸದಾ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು. ವಿವಿಧ ಕ್ಷೇತ್ರದ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಂದಿನ ಯುವಜನತೆ ಒಳ್ಳೆಯ ಕನಸು, ನಿಶ್ಚಿತ ಗುರಿ ಇಟ್ಟುಕೊಂಡು ಸದಾ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ನೇತ್ರ ತಜ್ಞ ವೈದ್ಯ ಡಾ.ಸಂಗಮೇಶ ಸಾಲಿಮಠ ಹೇಳಿದರು.ನಗರದ ವಿಶ್ವ ನೂತನ ಚಿತ್ರಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಶ್ರೀ ಹುಲಿಗೆಮ್ಮದೇವಿ (ಪ.ಜಾ.) ಸೇವಾ ಸಂಘ ಬಾಗಲಕೋಟೆ ಇದರ ದ್ವಿತೀಯ ವಾರ್ಷಿಕೋತ್ಸವಉದ್ಘಾಟಿಸಿ ಮಾತನಾಡಿ, ಸಂಘದಿಂದ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಸಂತಸದ ಸಂಗತಿ. ಸಂಘದ ಕಾರ್ಯ ಚಟುವಟಿಕೆಗಳಿಗೆ ನಾನು ಸದಾ ತಮ್ಮೊಂದಿಗಿದ್ದು, ತನು-ಮನ-ಧನದಿಂದ ಸಹಾಯ, ಸಹಕಾರ ನೀಡುತ್ತೇನೆಂದು ಹೇಳಿ, ಸಂಘ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಸಾಹಿತಿ ಡಾ.ಗೀತಾ ದಾನಶೆಟ್ಟಿ ಮಾತನಾಡಿ, ಸಮಾಜದಲ್ಲಿ ಸಂಘ-ಸಂಸ್ಥೆಗಳು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಮಾರುತಿ ಪಾಟೋಳಿ ಮಾತನಾಡಿ, ನಿಸ್ವಾರ್ಥ ಸೇವೆಯಿಂದ ಪ್ರತಿಫಲ ಕಟ್ಟಿಟ್ಟ ಬುತ್ತಿ. ಸಂಘ-ಸಂಸ್ಥೆಗಳು ನಿಸ್ವಾರ್ಥವಾಗಿ ಸೇವಾ ಮನೋಭಾವನೆ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.
ವಿಶ್ವ ನೂತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಾನಂದ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸುವಂಥ ಕಾರ್ಯ ಶ್ಲಾಘನೀಯವಾಗಿದೆ. ಸಂಘದ ವತಿಯಿಂದ ಹೀಗೆ ಇನ್ನೂ ಹತ್ತು ಹಲವು ಕಾರ್ಯಕ್ರಮ ನೆರವೇರಲಿ ಎಂದು ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರೇಣುಕಾ ನ್ಯಾಮಗೌಡ ಹಾಗೂ ಡಾ.ಸುರೇಶ ವಸ್ತ್ರದ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ವಿಜಯಲತಾ ಮಬ್ರುಮಕರ, ಡಾ.ವಿಕ್ರಂ ಬಸನಗೌಡರ, ಕಲೆ ಸಾಹಿತ್ಯದಲ್ಲಿ ರಾಜು ಯಾದವ, ಸಮಾಜ ಸೇವೆಯಲ್ಲಿ ಅಬ್ದುಲ್ ಗಣಿ ಹಾದಿಮನಿ, ಪರಮಾನಂದಯ್ಯ ಹಿರೇಮಠ, ಚಿತ್ರಕಲೆಯಲ್ಲಿ ಮಂಜುನಾಥ ಕುದುರಿ ಇತರರನ್ನು ಸನ್ಮಾನಿಸಲಾಯಿತು.ಶ್ರೀ ಹುಲಿಗೆಮ್ಮದೇವಿ (ಪ.ಜಾ.) ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ನಿಂಗರಾಜ ಮಬ್ರುಮಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಹಡಲಗೇರಿ ಸ್ವಾಗತಿಸಿದರು. ಬಸವರಾಜ ದಾವಣಗೆರೆ ಶಿಕ್ಷಕರು, ನಿರೂಪಿಸಿ ವಂದಿಸಿದರು.