ಯಾವುದೇ ಕ್ಷೇತ್ರವಾಗಲಿ ಗುರಿಯೊಂದಿಗೆ ತೊಡಗಿದರೆ ಯಶಸ್ಸು ಸಾಧ್ಯ: ನವೀನ್ ಸಂಗಾಪುರ

| Published : Nov 12 2025, 01:45 AM IST

ಸಾರಾಂಶ

ಕೃಷಿಯಿಂದ ಗಳಿಸಿದ ಲಾಭವು ಕೃಷಿಗೆ ವಿನಿಯೋಗಿಸಬೇಕು. ಅದು ಒಂದು ಹಂತ ತಲುಪುವವರೆಗೂ ಅದರಲ್ಲಿ ಲಾಭ ಪಡೆಯುವ ಹಕ್ಕಿಲ್ಲ ಎಂದು ನಂಬಿದವನು ನಾನು. ನನ್ನ ರೇಷ್ಮೆ ಕೃಷಿಗಾಗಿ ಸಾಕಷ್ಟು ಕ್ಷೇತ್ರ ಕಾರ್ಯಗಳನ್ನು ಮಾಡಿ ಅತ್ಯುತ್ತಮ ಬೆಳೆ, ಅತ್ಯುತ್ತಮ ಲಾಭ ಪಡೆಯುವ ಮಾರ್ಗವನ್ನು ಕಂಡುಕೊಂಡು ಆ ಹಾದಿಯಲ್ಲಿ ಕ್ರಮಿಸಿ, ಇದೀಗ ಇತರೆ ರೈತರಿಗಾಗಿ ಚಾಕಿ ಸಾಕಾಣಿಕ ಕೇಂದ್ರ ಪ್ರಾರಂಭಿಸಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೃಷಿ, ಕೈಗಾರಿಕೆ ಸೇರಿದಂತೆ ಯಾವುದೇ ಕ್ಷೇತ್ರವಾಗಲಿ ಗುರಿಯೊಂದಿಗೆ ತೊಡಗಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಅಂತಾರಾಷ್ಟ್ರೀಯ ರೇಷ್ಮೆ ಕೃಷಿ ಖ್ಯಾತಿಯ ನವೀನ್ ಸಂಗಾಪುರ ತಿಳಿಸಿದರು.

ಕಾಲೇಜಿನ ವಾಣಿಜ್ಯ ಮತ್ತು ನಿವರ್ಹಣೆ ವಿಭಾಗವು ತರಬೇತಿ ಮತ್ತು ನಿಯೋಜನೆ ಕೋಶ, ಐಐಸಿ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದ ಸಹಯೋಗದೊಂದಿಗೆ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉದ್ಯಮಶೀಲತಾ ಅವಕಾಶಗಳು ಮತ್ತು ವೃತ್ತಿಜೀವನದ ಹಾದಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೃಷಿಯಿಂದ ಗಳಿಸಿದ ಲಾಭವು ಕೃಷಿಗೆ ವಿನಿಯೋಗಿಸಬೇಕು. ಅದು ಒಂದು ಹಂತ ತಲುಪುವವರೆಗೂ ಅದರಲ್ಲಿ ಲಾಭ ಪಡೆಯುವ ಹಕ್ಕಿಲ್ಲ ಎಂದು ನಂಬಿದವನು ನಾನು. ನನ್ನ ರೇಷ್ಮೆ ಕೃಷಿಗಾಗಿ ಸಾಕಷ್ಟು ಕ್ಷೇತ್ರ ಕಾರ್ಯಗಳನ್ನು ಮಾಡಿ ಅತ್ಯುತ್ತಮ ಬೆಳೆ, ಅತ್ಯುತ್ತಮ ಲಾಭ ಪಡೆಯುವ ಮಾರ್ಗವನ್ನು ಕಂಡುಕೊಂಡು ಆ ಹಾದಿಯಲ್ಲಿ ಕ್ರಮಿಸಿ, ಇದೀಗ ಇತರೆ ರೈತರಿಗಾಗಿ ಚಾಕಿ ಸಾಕಾಣಿಕ ಕೇಂದ್ರ ಪ್ರಾರಂಭಿಸಿದೆ ಎಂದರು.

10ನೇ ತರಗತಿ ಓದಿರುವ ನಾನು ರೇಷ್ಮೆ ಕೃಷಿಯಿಂದಾಗಿ ದೇಶ-ವಿದೇಶ ಸುತ್ತಿ ಅನೇಕರಿಂದ ಮಾರ್ಗದರ್ಶನ ಪಡೆದು ಇದೀಗ ನಾನೇ ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ ಎಂದರೆ ನನ್ನ ಸಂಪೂರ್ಣ ಕೇಂದ್ರಿಕರಿಸುವಿಕೆ ರೇಷ್ಮೆ ಕೃಷಿಯೇ ಆಗಿದೆ. ಅದೇ ನಿಟ್ಟಿನಲ್ಲಿ ನಿಮ್ಮ ಗುರಿ ಯಾವುದು ಎಂದು ತಿಳಿದು ಅದರಲ್ಲಿ ಸಂಪೂರ್ಣ ಕೇಂದ್ರೀಕರಿಸಿಕೊಂಡರೆ ಖಂಡಿತ ಯಶಸ್ಸು ನಿಮ್ಮದಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕುವವರಾಗಬಾರದು ಉದ್ಯೋಗವನ್ನು ಕೊಡುವವರಾಗಬೇಕು. ಆ ನಿಟ್ಟಿನಲ್ಲಿ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರೇರಣೆ ಪಡೆದು ಪ್ರಾಯೋಗಿಕ ತರಬೇತಿ ಪಡೆದುಕೊಂಡು ತಮ್ಮ ಗುರಿಯತ್ತ ಕಾರ್ಯನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಅದಕ್ಕೆ ಬೇಕಾದ ಪೂರಕ ವಾತಾವರಣವನ್ನು ನಮ್ಮ ಕಾಲೇಜು ಸೃಷ್ಟಿಸಿಕೊಡುತ್ತದೆ ಎಂದರು.

ವೇದಿಕೆಯಲ್ಲಿ ಆಂತರಿಕ ಗುಣಮಟ್ಟ ಭರವಸೆ ಘಟಕದ ಸಂಯೋಜಕ ರಘುನಂದನ್, ನಿರ್ವಹಣಾ ವಿಭಾಗ ಮುಖ್ಯಸ್ಥ ಚರಣ್ ರಾಜ್, ಎನ್‌ಎಸ್‌ಎಸ್ ಘಟಕಾಧಿಕಾರಿಯಾದ ಕುಮಾರ ಹಾಗೂ ತರಬೇತಿ ಮತ್ತು ನಿಯೋಜನೆ ಕೋಶದ ಸಂಯೋಜಕ ಕಿರಣ್ ಉಪಸ್ಥಿತರಿದ್ದರು. ಹಲವಾರು ವಿದ್ಯಾರ್ಥಿಗಳು ಸ್ವಯಂ ಉದ್ಯೋಗಕ್ಕೆ ಸಂಬಂಧ ಕೇಳಿದ ಪ್ರಶ್ನೆಗೆ ನವೀನ್ ಸಂಗಾಪುರ ಉತ್ತರಿಸಿದರು.