ಲಕ್ಷ್ಮೇಶ್ವರ: ಸತತ ಅಧ್ಯಯನ ಹಾಗೂ ಗುರುಗಳು ಹೇಳಿಕೊಟ್ಟ ಪಾಠಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅಭ್ಯಾಸ ಮಾಡಿದಲ್ಲಿ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ಹುಲ್ಲೂರ ಗ್ರಾಪಂ ಮಾಜಿ ಉಪಾಧ್ಯಕ್ಷ ಎಂ.ಎಂ. ಗಾಡಗೋಳಿ ತಿಳಿಸಿದರು.

ಗುರುವಾರ ಸಮೀಪದ ಹುಲ್ಲೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ''''ಕನ್ನಡಪ್ರಭ'''' ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ರತಿನಿತ್ಯ ಅಭ್ಯಾಸ ಮಾಡುವ ಯೋಜನೆ ರೂಪಿಸಿಕೊಳ್ಳಬೇಕು. ಕೇವಲ ಪರೀಕ್ಷೆಗಾಗಿ ಓದುವುದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಓದುವ ಗುಣ ಬೆಳೆಸಿಕೊಳ್ಳಬೇಕು.

ದಿನಪತ್ರಿಕೆಗಳು ನಮ್ಮ ಜ್ಞಾನ ಹೆಚ್ಚಿಸುವ ಪ್ರಮುಖ ಮಾಧ್ಯಮವಾಗಿವೆ. ಪತ್ರಿಕೆಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ತಿಳಿಸುವ ಕಣಜಗಳಾಗಿವೆ. ಆದ್ದರಿಂದ ಪಠ್ಯಪುಸ್ತಕಗಳ ಜತೆಯಲ್ಲಿ ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಳ್ಳಿ ಎಂದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಗುರುನಾಥ ರೆಡ್ಡಿ ದ್ಯಾವನೂರ, ಗ್ರಾಪಂ ಉಪಾಧ್ಯಕ್ಷೆ ವೀಣಾ ಅಕ್ಕಿ, ಎಸ್‌ಡಿಎಂಸಿ ಉಪಾಧ್ಯಕ್ಷ ಕಬೀರಸಾಬ್ ನದಾಫ್, ಸಿದ್ದಪ್ಪ ಕ್ಯಾತಣ್ಣವರ, ಮಂಜುನಾಥ ಹರಿಜನ, ಮಲ್ಲೇಶಪ್ಪ ಕ್ಯಾತಣ್ಣವರ, ಶಿವಾನಂದಯ್ಯ ಹಿರೇಮಠ, ಆನಂದ ಇಚ್ಚಂಗಿ, ಹನುಮಂತಪ್ಪ ಕುರಿ, ಮಾಬೂಸಾಬ ನದಾಫ್ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ಇದ್ದರು.


ಈ ವೇಳೆ ಎಂ.ಎಂ. ಗಾಡಗೋಳಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯ ಕೆ.ವೈ. ಮೇಲಿನಮನಿ ಕಾರ್ಯಕ್ರಮ ನಿರ್ವಹಿಸಿದರು. ''''ಕನ್ನಡಪ್ರಭ'''' ಪ್ರಸರಣ ವಿಭಾಗದ ಪ್ರಸಾದ ಕೊಡಿತ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.