ಸಕಲರ ಅಭಿವೃದ್ಧಿಯಿಂದ ಯಶಸ್ಸು ಸಾಧ್ಯ: ಸಿದ್ದರಾಮ ಶ್ರೀ

| Published : May 07 2025, 12:48 AM IST

ಸಕಲರ ಅಭಿವೃದ್ಧಿಯಿಂದ ಯಶಸ್ಸು ಸಾಧ್ಯ: ಸಿದ್ದರಾಮ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ಎಲ್ಲರನ್ನು ಸಮನಾಗಿ ಕಂಡು ಅವರಿಗೆ ತಮ್ಮಿಂದಾಗುವ ಸಹಾಯ ಸಹಕಾರ ನೀಡಿ, ಇನ್ನೊಬ್ಬರ ಅಭಿವೃದ್ಧಿಗಾಗಿ ದುಡಿಯುವ ಸಂಸ್ಥೆ ಅಥವಾ ವ್ಯಕ್ತಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಗದಗ-ಡಂಬಳದ ಎಡೆಯೂರು ತೊಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೀಳಗಿ

ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ಎಲ್ಲರನ್ನು ಸಮನಾಗಿ ಕಂಡು ಅವರಿಗೆ ತಮ್ಮಿಂದಾಗುವ ಸಹಾಯ ಸಹಕಾರ ನೀಡಿ, ಇನ್ನೊಬ್ಬರ ಅಭಿವೃದ್ಧಿಗಾಗಿ ದುಡಿಯುವ ಸಂಸ್ಥೆ ಅಥವಾ ವ್ಯಕ್ತಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಗದಗ-ಡಂಬಳದ ಎಡೆಯೂರು ತೊಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ಸಭಾಭವನದಲ್ಲಿ ಬ್ಯಾಂಕಿನ ರಜತ ಮಹೋತ್ಸವದ ಕಾರ್ಯಚಟುವಟಿಕೆಗಳ ಉದ್ಘಾಟನೆ, ಬಸವ ಜಯಂತಿ ಆಚರಣೆ, ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿಯೇ ಬಸವಣ್ಣನವರು ಸಮಸಮಾಜ, ಸಮ ಅಭಿವೃದ್ಧಿ ಚಿಂತನೆಯೊಂದಿಗೆ ಎಲ್ಲರನ್ನು ಅನುಭವ ಮಂಟಪದಲ್ಲಿ ಸೇರಿಸುವ ಕಾಯಕವನ್ನು ಮಾಡಿ ಇಂದಿಗೂ ಅದು ಜನರಲ್ಲಿ ಉಳಿಯುವಂತೆ ಮಾಡಿದ್ದಾರೆ. ಹಾಗೆಯೇ ಎಸ್.ಆರ್. ಪಾಟೀಲ ಅವರು 1997ರಲ್ಲಿ ಬೀಳಗಿ ಪಟ್ಟಣದಲ್ಲಿ ಪ್ರಥಮ ಬ್ಯಾಂಕ್‌ ಆರಂಭಿಸಿ ಬ್ಯಾಂಕಿನಿಂದ ಎಲ್ಲರಿಗೂ ಸಹಾಯಕವಾಗುವಂತೆ ನೋಡಿಕೊಂಡಿದ್ದು, ಬ್ಯಾಂಕಿಗೆ 25 ವರ್ಷಗಳ ಯಶಸ್ಸು ಕಂಡಿದ್ದಾರೆ, ಬ್ಯಾಂಕನ್ನು ವಿಜಯಪುರದ ಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿ ಅವರು ಜನರಲ್ಲಿ ವಿಶ್ವಾಸ ತುಂಬಿ ನಮ್ಮ ಹಿತಾಸಕ್ತಿ ಕಾಯುತ್ತಾರೆ, ಸಾಲಗಾರರನ್ನು ಸಾಲಗಾರ ಎಂದು ಹೀಯಾಳಿಸದೆ ಎಲ್ಲರನ್ನೂ ಗೌರವಿಸಿದರೆ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಹಿತೋಪದೇಶ ನೀಡಿದ್ದರು. ಅದರಂತೆ ಇಂದು ಬ್ಯಾಂಕು ಇಂದು ಬೀಳಗಿ ಪಟ್ಟಣವಲ್ಲದೆ ರಾಜ್ಯಾದ್ಯಂತ ತನ್ನ ಶಾಖೆಗಳನ್ನು ತೆರೆದು ಉತ್ತಮ ಸೇವೆ ನೀಡುತ್ತಿದೆ. ಯಾವ ಸಂಸ್ಥೆಯಲ್ಲಿ ಸ್ವಾರ್ಥ ಭಾವನೆ ಇರೋದಿಲ್ಲವೋ ಅಂತಹ ಸಂಸ್ಥೆ ಸಾಕಷ್ಟು ಬೆಳೆದು ಜನರ ಕೆಲಸಗಳಿಗೆ ಸಿದ್ಧವಾಗಿ ನಿಂತಿರುತ್ತದೆ, ಕಾಯಕವೇ ಪೂಜೆ, ಕೈಲಾಸ ಎಂದು ತಿಳಿದು ಬ್ಯಾಂಕಿನ ಪದಾಕಾರಿಗಳು, ಸಿಬ್ಬಂದಿ ನಿರಂತರ ಶ್ರಮ ಹಾಕಿದ್ದರ ಪರಿಣಾಮ ಇಂದು ಬ್ಯಾಂಕು ಉತ್ತಮ ಹೆಸರು, ಸಂಪಾದನೆಯ ಜೊತೆಗೆ ತನ್ನ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ನಿಮಿತ್ತ 25 ವಿಶೇಷ ಕಾರ್ಯಚಟುವಟಿಕೆ ಹಾಕಿಕೊಂಡಿದ್ದು ಗಮನಾರ್ಹವಾಗಿದ್ದು, ಜನರಿಗೆ ಉತ್ತಮ ಸಂದೇಶ ನೀಡುವ ಯೋಜನೆಗಳಾಗಿವೆ ಎಂದು ಬಣ್ಣಿಸಿದರು.

ಮೂಢನಂಬಿಕೆ, ಅಂಧಶ್ರದ್ದೆ ಹೋಗಲಾಡಿಸುವ ನಿಟ್ಟಿನಲ್ಲಿ ಹುಲಿಕಲ್ ನಟರಾಜ ಅವರಿಂದ ಪವಾಡ ಬಯಲು ಕಾರ್ಯಕ್ರಮ, ಸಾಹಿತ್ಯ ಉತ್ಸವ, ಕವಿಗೋಷ್ಠಿ, ಸಹಕಾರ ಗೋಷ್ಠಿ, ಜಾನಪದ ಉತ್ಸವ. ಹಾಸ್ಯ ಸಂಜೆ, ಮಹಿಳೆಯರಿಗಾಗಿಯೇ ವಚನ ಗಾಯನ ಸೇರಿ ವಿವಿಧ ಕಾರ್ಯಕ್ರಮ, ತರಬೇತಿ ಒಳಗೊಂಡ 18 ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕೆಲಸವಾಗಿದೆ ಎಂದ ಅವರು, ಗ್ರಾಮೀಣ ಭಾಗದ ಜನರಿಗೆ ಯಾವೆಲ್ಲ ಸೌಲಭ್ಯ ಬೇಕೋ ಅದನ್ನು ನೀಡುವಲ್ಲಿ ಎಸ್.ಆರ್. ಪಾಟೀಲರು ಯಶಸ್ವಿಯಾಗಿದ್ದಾರೆ, ಗ್ರಾಮೀಣ ಭಾಗದಲ್ಲಿ ಮೆಡಿಕಲ್, ನರ್ಸಿಂಗ್‌ , ಆಯುರ್ವೇದ ಕಾಲೇಜು, ಸಹಕಾರಿ ಸಂಘಗಳನ್ನು ಜನರಿಗೆ ನೀಡಿದ್ದಾರೆ. ಅವರ ಇಂತಹ ಕಾರ್ಯಗಳು ನಿರಂತರವಾಗಿ ನಡೆಯಲಿ, ಜತೆಗೆ ಬೀಳಗಿ ತಾಲೂಕಿನ ಮತ್ತು ಜಿಲ್ಲೆಯಲ್ಲಿನ ಸಮಗ್ರ ಚಿಂತನೆಗಳನ್ನು ಒಳಗೊಂಡ ಪರಿಶ್ರಮ ಎಂಬ ಸ್ಮರಣ ಸಂಚಿಕೆ ಸಿದ್ದವಾಗುತ್ತಿದ್ದು ಎಲ್ಲ ಮಾಹಿತಿಯೂ ಅದರಲ್ಲಿ ಸಿಗಲಿದೆ ಎಂದು ಹೇಳಿದರು.

ಬಾದಾಮಿ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಡಾ.ಚಂದ್ರಶೇಖರ ಹೆಗಡೆ ವಿಶೇಷ ಉಪನ್ಯಾಸ ನೀಡಿದರು. ವಚನ ಗಾಯನ ಸ್ಪರ್ಧೆಯ ವಿಜೇತ ಮಕ್ಕಳು ಮತ್ತು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಪ್ರದಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ, ಬಸವ ಬಳಗದ ಅಧ್ಯಕ್ಷ ಶಿವಾನಂದ ಸಾರಾವರಿ, ಗುರುರಾಜ ಲೂತಿ, ಎಂ.ಎಲ್. ಕೆಂಪಲಿಂಗಣ್ಣವರ ಸೇರಿದಂತೆ ಇತರರು ಇದ್ದರು.25 ವರ್ಷಗಳಿಂದ ಬ್ಯಾಂಕು ಜನರಿಗಾಗಿ ಕೆಲಸ ಮಾಡುತ್ತಿದ್ದು, ಸದ್ಯ ತನ್ನ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಎಲ್ಲ ನಿರ್ದೇಶಕ ಮಂಡಳಿಯ ಸಲಹೆಯಂತೆ ಅರ್ಥಪೂರ್ಣವಾಗಿ ಸಮಾರಂಭ ಆಚರಿಸಬೇಕು ಎನ್ನುವ ಉದ್ದೇಶದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೀಳಗಿ ಪಟ್ಟಣದಲ್ಲಿ ಯಾವುದೇ ವಾಣಿಜ್ಯ ಸಂಸ್ಥೆ ಇಲ್ಲದೆ ಇರುವಾಗ 1997ರಲ್ಲಿ ಕೇವಲ ₹11 ಲಕ್ಷ 600 ಷೇರು ಬಂಡವಾಳದೊಂದಿಗೆ ಸಂಸ್ಥೆ ಆರಂಭಗೊಂಡು ಇಂದು ಶತಮಾನ ಕಂಡ ಬ್ಯಾಂಕುಗಳ ಸಾಲಿನಲ್ಲಿ 2ನೇ ಸ್ಥಾನದಲ್ಲಿದೆ.

- ಎಸ್.ಆರ್. ಪಾಟೀಲ ಸಂಸ್ಥಾಪಕ, ಅಧ್ಯಕ್ಷರು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌