ಆತ್ಮವಿಶ್ವಾಸ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ

| Published : Apr 26 2024, 12:55 AM IST

ಆತ್ಮವಿಶ್ವಾಸ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಮೌಲ್ಯಯುತ, ಗುಣಮಟ್ಟದ ಮತ್ತು ನೈತಿಕ ಶಿಕ್ಷಣದ ಅವಶ್ಯಕತೆ

ಶಿರಹಟ್ಟಿ: ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು. ಸತತ ಪ್ರಯತ್ನ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ. ಸಮಯ ಹಾಗೂ ಸೌಕರ್ಯ ಸದ್ಭಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸದಾ ಉತ್ಸಾಹಿಗಳಾಗಿದ್ದುಕೊಂಡು ಆತ್ಮ ವಿಶ್ವಾಸದಿಂದ ನಿರಂತರವಾದ ಅಧ್ಯಯನದಲ್ಲಿ ತೊಡಗಿಕೊಂಡರೆ ಯಶಸ್ಸು ಅವರನ್ನು ಸದಾ ಹಿಂಬಾಲಿಸುತ್ತದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಬುಧವಾರ ಸಂಜೆ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಪಟ್ಟಣದ ಸಂಗಪ್ಪ ಕಾಳಗಿ ಮಹಾಮನೆಯಲ್ಲಿ ಆಯೋಜಿಸಿದ ಶರಣ ಪೌರ್ಣಮೆ ನಿಮಿತ್ತ ಏರ್ಪಡಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳಾದ ವಿಶ್ವನಾಥ ಮಹದೇವಪ್ಪ ಸ್ವಾಮಿ ಹಾಗೂ ಅಮೃತಾ ಅನಿಲ ಮಾನೆ ಇವರನ್ನು ಸನ್ಮಾನಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಮೌಲ್ಯಯುತ, ಗುಣಮಟ್ಟದ ಮತ್ತು ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಚಂಚಲತೆಗೆ ಬಲಿಯಾಗದೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಸಾಧನೆ ಮಾಡುವ ಮೂಲಕ ಜೀವನದಲ್ಲಿ ಗುರಿಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಿರಂತರ ಪ್ರಯತ್ನದಿಂದ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ. ಪ್ರಯತ್ನವಿಲ್ಲದೆ ಯಾವ ಯಶಸ್ಸು ಕೂಡ ದೊರಕಲು ಸಾಧ್ಯವಿಲ್ಲ ಎಂದು ಸಾಧನೆಗೈದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಉಪನ್ಯಾಸಕರಾಗಿ ಭಾಗವಹಿಸಿದ್ದ ಶಿಕ್ಷಕ ರವಿ ಬೇಂದ್ರೆ ಅಕ್ಕಮಹಾದೇವಿಯ ಬಹುಮುಖ ವ್ಯಕ್ತಿತ್ವದ ಆದರ್ಶಗಳ ಕುರಿತು ಮಾತನಾಡಿದರು. ಅಕ್ಕಮಹಾದೇವಿ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಕನ್ನಡದ ಪ್ರಥಮ ಮಹಿಳಾ ಕವಯತ್ರಿಯಾಗಿದ್ದಾರೆ. ಇವರನ್ನು ಶರಣ ಚಳವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ ಎಂದು ಹೇಳಿದರು.

೧೨ನೇ ಶತಮಾನದಲ್ಲಿ ಶಿವಶರಣೆ ಅಕ್ಕಮಹಾದೇವಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತ. ಇವರ ಜೀವನ ಮಹಿಳೆಯರಿಗೆ ಆತ್ಮಸ್ಥೆರ್ಯ ತುಂಬಿದ ಮಾರ್ಗದರ್ಶನಗಳಾಗಿವೆ. ಇವರು ಮೌಲ್ಯ ತುಂಬಿದ ವಚನ ರಚಿಸುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಇವರ ವಚನಗಳು ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶನಗಳಾಗಿವೆ. ಅಂತಹ ವಚನಗಳನ್ನು ಆಲಿಸುವ ಮೂಲಕ ಬದುಕಿನಲ್ಲಿ ತೃಪ್ತಿ ಕಾಣಬೇಕು ಎಂದು ಹೇಳಿದರು.

ಸಾಧನೆಗೈದ ವಿದ್ಯಾರ್ಥಿಗಳಾದ ವಿಶ್ವನಾಥ ಸ್ವಾಮಿ, ಅಮೃತಾ ಮಾನೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪಾಸಾಗಿ ಸಾಧನೆಗೈದ ಸಂದರ್ಭದಲ್ಲಿ ಕೆ.ಎ. ಬಳಿಗೇರ ಗುರುಗಳು ತಮ್ಮ ಮನೆಯಲ್ಲಿ ಕರೆಸಿ ನಮ್ಮನ್ನು ಸನ್ಮಾಸಿ ೨ ವರ್ಷ ಬಿಟ್ಟು ಮತ್ತೆ ನಿಮ್ಮನ್ನು ಸನ್ಮಾನ ಮಾಡಬೆಕು ಎಂದು ಹೇಳಿದ್ದರು. ಅದು ನಮ್ಮ ತಲೆಯಲ್ಲಿ ಉಳಿದಿತ್ತು. ಅವರ ಮಾತು ಕೂಡ ನಮ್ಮ ಸಾಧನೆಗೆ ಸಾಧ್ಯವಾಯಿತು ಎಂದು ಹಳೆಯ ನೆನಪು ಸ್ಮರಿಸಿದರು.

ನಿವೃತ್ತ ಶಿಕ್ಷಕ ಸಿ.ಪಿ.ಕಾಳಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷ ಸುಧಾ ಹುಚ್ಚಣ್ಣವರ, ತಾಲೂಕಾಧ್ಯಕ್ಷ ನಂದಾ ಕಪ್ಪತ್ತನವರ, ಎಚ್.ಎಂ. ದೇವಗಿರಿ, ಬಿ.ಎಸ್. ಹಿರೇಮಠ, ಬೀರಪ್ಪ ಸ್ವಾಮಿ, ಭರಮಪ್ಪ ಸ್ವಾಮಿ, ಸಂಗಪ್ಪ ಕಾಳಗಿ, ಎಚ್.ಎಂ.ಪಲ್ಲೇದ, ಮಹಾದೇವ ಕಾಳಗಿ ಮುಂತಾದವರು ಭಾಗವಹಿಸಿದ್ದರು.

ಜ್ಯೋತಿ ಕಾಳಗಿ ಸ್ವಾಗತಿಸಿದರು. ಬಸವರಾಜ ಸೆಲಿಯಪ್ಪನವರ್ ನಿರೂಪಿಸಿದರು. ಶಾಂತ ಪಾಟೀಲ್ ವಚನ ಗಾಯನ ಮಾಡಿದರು.