ನಿರಂತರ ಅಧ್ಯಯನದಿಂದ ಯಶಸ್ಸು

| Published : Aug 04 2024, 01:27 AM IST

ಸಾರಾಂಶ

ಇಂದು ವಿದ್ಯಾರ್ಥಿನಿಯರಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸದ ಕೊರತೆ ಕಂಡುಬರುತ್ತಿದೆ

ಗದಗ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿದ್ಯಾರ್ಜನೆ ಹಂತ ಮಹತ್ವದ ಘಟ್ಟವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ಇಷ್ಟಪಟ್ಟು ಅಧ್ಯಯನಗೈದರೆ ಯಾವ ಕಷ್ಟವಿಲ್ಲದೆ ಯಶಸ್ಸು ಸಾಧಿಸಬಹುದು ಎಂದು ಸಂಕನೂರ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅರವಳಿಕೆ ಹಾಗೂ ನೋವು ನಿವಾರಣಾ ತಜ್ಞೆ ಡಾ. ಶ್ವೇತಾ ಸಂಕನೂರ ಹೇಳಿದರು.

ಅವರು ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ನೆರವೇರಿದ ವಿದ್ಯಾದಾನ ಸಮಿತಿ ಬಾಲಕಿಯರ ಪಪೂ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಸ್ವಾಗತ ಮತ್ತು ಸನ್ಮಾನ ಸಮಾರಂಭ ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.

ಇಂದು ವಿದ್ಯಾರ್ಥಿನಿಯರಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸದ ಕೊರತೆ ಕಂಡುಬರುತ್ತಿದೆ. ಇದರಿಂದ ಹೊರ ಬರಲು ಜಪಾನಿನ ಇಕಿಗಾಯಿ ವ್ಯಕ್ತಿತ್ವ ವಿಕಸನ ತಂತ್ರ ಸಹಕಾರಿಯಾಗಿದೆ. ಈ ತಂತ್ರದ ಅನುಸಾರವಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಗುರುತಿಸಿಕೊಳ್ಳಬೇಕು ಮತ್ತು ತಮ್ಮ ಆಸಕ್ತಿ ಮತ್ತು ಅಭಿರುಚಿಗನುಸಾರವಾಗಿ ಗುರಿಯನ್ನಿಟ್ಟುಕೊಂಡು ಆ ಗುರಿ ಸಾಧನೆಗಾಗಿ ನಿರಂತರ ಶ್ರಮಿಸಬೇಕು. ಅಧ್ಯಯನ ಮತ್ತು ಉತ್ತಮ ಹವ್ಯಾಸ ಇವುಗಳ ಮೂಲಕ ನಾವು ಪ್ರೇರಣಾದಾಯಕ ವಿಷಯ ಕೇಳಿ ತಿಳಿದುಕೊಂಡು ನಮ್ಮ ಕೀಳರಿಮೆ ತೊರೆದು ನಿರಂತರ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ ಎಂದರು.

ಬಾಲಕಿಯರ ಪಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಮುಕ್ತಾ ಉಡುಪಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮುಂತಾದವರು ಮಾತನಾಡಿದರು.

ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಪ್ರಾ.ಡಾ.ಬಿ.ಎಸ್. ರಾಠೋಡ ಮಾತನಾಡಿದರು.

ಭೂಮಿಕಾ ಚವ್ಹಾಣ ಪ್ರಾರ್ಥಿಸಿದರು. ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಡಾ. ದತ್ತಪ್ರಸನ್ನ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಮೆಹಕ್ ಕೊಪ್ಪಳ, ಕರಿಯಮ್ಮ ಕುರಿ ನಿರೂಪಿಸಿದರು. ವಂದನಾ ಎಂ. ವಂದಿಸಿದರು. ಉಪನ್ಯಾಸಕ ಬಿ.ಬಿ. ಮಿರ್ಜಿ, ಪ್ರಶಾಂತ ಪಾಟೀಲ, ವೆಂಕಟೇಶ ರಾಠೋಡ, ಹೇಮಂತ ದಳವಾಯಿ, ರೇಷ್ಮಾ ಪರ್ವತಗೌಡರ, ಮಹಾಂತೇಶ ಬಾತಾಖಾನಿ ಕಚೇರಿ ಸಿಬ್ಬಂದಿ ಸಮೀರ ಹಂದಿಗೋಳ ಉಪಸ್ಥಿತರಿದ್ದರು.