ಸಾರಾಂಶ
Successful agricultural dialogue at Heggaru Kodige
-ಭೂಮಿ ಉಳಿಸೋಣ ಬನ್ನಿ ಶೀರ್ಷಿಕೆಯಡಿ ಸಾವಯವ ಕೃಷಿ ಚಿಂತನ ಮಂಥನ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ, ಕೊಪ್ಪ
ತಾಲೂಕಿನ ಅಗಳಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಾರು ಕೊಡುಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಆದರ್ಶ ಹೆಗ್ಗಾರು ಕೊಡುಗೆ ಅವರ ಸಂಯೋಜನೆಯಲ್ಲಿ ಭೂಮಿ ಉಳಿಸೋಣ ಬನ್ನಿ ಎಂಬ ಶೀರ್ಷಿಕೆಯಡಿ ಕೃಷಿ ಸಂವಾದ ಮತ್ತು ಸಾವಯವ ಕೃಷಿ ಚಿಂತನ ಮಂಥನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮ ಆಯೋಜಕ ಆದರ್ಶ ಹೆಗ್ಗಾರು ಕೊಡಿಗೆ ಕೃಷಿ ಸಾಧಕ ಬಾಧಕಗಳ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಲೆನಾಡು ಪ್ರಾಂತ್ಯದ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಮಾತನಾಡಿ, ಅವೈಜ್ಞಾನಿಕ ಅರಣ್ಯ ಕಾಯ್ದೆಗಳಿಂದ ಆಗುವ ಸಮಸ್ಯೆಗಳ ಬಗ್ಗೆ ರೈತರಿಗೆ ಆತ್ಮವಿಶ್ವಾಸ ತುಂಬಿದರು.
ಕೆ.ವಿ. ವಿಜಯರಂಗ ಕೋಟೆ ತೋಟ ಅವರು ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕೆ ರೋಗ ಇವುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಅರವಿಂದ್ ಸಿಗದಾಳ್ ಪ್ರಸ್ತುತ ಕೃಷಿಯಲ್ಲಿ ತಾಂತ್ರಿಕ ಅಭಿವೃದ್ಧಿ, ತೊಡಕುಗಳು ಹಾಗೂ ಪರಿಹಾರದ ಬಗ್ಗೆ ಜನರಿಗೆ ಮಾಹಿತಿ ನೀಡಿದರು.ಕೃಷಿಕರಾದ ಕೆ.ಆರ್. ಗಣೇಶ್ ಸಾವಯವ ಕೃಷಿ ಹಾಗೂ ಆಹಾರ ಪದ್ಧತಿ ಬಗ್ಗೆ, ಪತ್ರಕರ್ತ ರಂಜಿತ್ ಶೃಂಗೇರಿ ಇವರು ಕಸ್ತೂರಿರಂಗನ್ ವರದಿ ಹಾಗೂ ಮಾರಕ ಅರಣ್ಯ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ಪ್ರಶಾಂತ್ ಜಾಳ್ಮರ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದ ರೈತರ ಸ್ಥಿತಿಗತಿಗಳ ಬಗ್ಗೆ ಹಾಗೂ ನೊಂದು ಆತ್ಮಹತ್ಯೆಗೆ ಶರಣಾಗುವಂತಹ ರೈತರಿಗೆ ಆತ್ಮಸ್ಥೆರ್ಯ ತುಂಬಿದರು.
ಹಳ್ಳಿಯ ಸಾಂಪ್ರದಾಯಿಕ ಬೆಳೆಗಳಿಂದ ಸಿದ್ಧಪಡಿಸಿದ ಕೃಷಿ ಸಂವಾದ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೇಗೂರಿನ ಸತ್ಯ ನಾರಾಯಣ ಮತ್ತು ತಂಡದಿಂದ ಗೀತ ಗಾಯನ ಕಾರ್ಯಕ್ರಮ, ಕನ್ನಡ ಜಾನಪದ ಪರಿಷತ್ ಮೇಗುಂದಾ ಹೋಬಳಿ ಇವರಿಂದ ಜಾನಪದ ಕಾರ್ಯಕ್ರಮ, ನಾಟ್ಯ ವೈಭವ ನೃತ್ಯ ಅಕಾಡೆಮಿಯ ಕು. ನಿಕಿತಾ ಶೃಂಗೇರಿ ಅವರ ನೃತ್ಯ ಕಾರ್ಯಕ್ರಮ, ಸ್ಥಳೀಯ ಕಲಾವಿದೆ ಕು. ಸೃಷ್ಟಿ ಇವರ ಗಾಯನ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.