Successful implementation of guarantee schemes in the district

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಲಕ್ಷಾಂತರ ಫಲಾನುಭವಿಗಳಿಗೆ ಇದರ ನೇರ ಲಾಭ ತಲುಪುತ್ತಿದೆ. ಈ ಯೋಜನೆಗಳನ್ನು ಜಿಲ್ಲೆಯಲ್ಲಿ ಇನ್ನೂ ಪರಿಣಾಮಕಾರಿಗೊಳಿಸಲು ಹೆಚ್ಚಿನ ಪ್ರಚಾರ ಮತ್ತು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಮೆಹರೋಜ್ ಖಾನ್ ತಿಳಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಹಾಗೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುತ್ತಿದ್ದು ಎಲ್ಲಾ ತಾಲೂಕುಗಳಲ್ಲಿ ಮುಂದಿನ 2-3 ದಿನಗಳಲ್ಲಿ ಸಮಿತಿಗಳ ರಚನೆ ಪೂರ್ಣವಾಗಬೇಕು ಎಂದು ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಅರ್ಹ ಮಹಿಳೆಯರ ಖಾತೆಗೆ ಕೋಟ್ಯಂತರ ರು. ಜಮೆಯಾಗಿದೆ. ಮರಣ ಹೊಂದಿದ ಫಲಾನುಭವಿಗಳಿಂದ ಸರ್ಕಾರಕ್ಕೆ ಜಮೆಯಾಗಬೇಕಾದ 73,75,747 ಬಾಕಿ ಇರುವುದು ವರದಿಯಾಗಿದ್ದು, ಬ್ಯಾಂಕ್‌ಗಳ ಜೊತೆ ಸಭೆ ನಡೆಸಿ, ಖಾತೆಯಲ್ಲಿ ಹಣ ಇರುವವರಿಂದ ಹಣ ರಿಕವರಿ ಮಾಡಲು ಸೂಚಿಸಲಾಯಿತು.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 8,69,04,686 ಮಹಿಳೆಯರು ಪ್ರಯಾಣಿಸಿದ್ದಾರೆ. ಜೂನ್ 2023 ರಿಂದ ಸೆಪ್ಟೆಂಬರ್ 2026 ರವರೆಗೆ ಸರ್ಕಾರದಿಂದ ಕೆಎಸ್‌ಆರ್‌ಟಿಸಿಗೆ 3,36,18,95,464 ರು. ಆದಾಯ ಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ 401 ಬಸ್‌ಗಳಿವೆ. ಆದರೆ ಸೊರಬ, ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿಯಲ್ಲಿ ಡಿಪೋಗಳಿಲ್ಲದೆ ಅಲ್ಲಿ ಬಸ್ ಕೊರತೆ ಉಂಟಾಗಿದೆ ಎಂದು ಕೆಸ್‌ಆರ್‌ಟಿಸಿ ಡಿಸಿ ನವೀನ್ ತಿಳಿಸಿದರು.

ಅನ್ನಭಾಗ್ಯ ಯೋಜನೆ: ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳಿಗೆ ನೇರ ನಗದು ಮತ್ತು ಆಹಾರ ಧಾನ್ಯ ವಿತರಣೆ ಸುಗಮವಾಗಿ ನಡೆಯುತ್ತಿದೆ.ಜಿಲ್ಲೆಯಲ್ಲಿ ಇದುವರೆಗೆ 360,54,76,960 ರು. ವೆಚ್ಚ ಮಾಡಲಾಗಿದೆ.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಜಿಲ್ಲೆಯ 4,73,682 ಕುಟುಂಬಗಳಿಗೆ ಸೌಲಭ್ಯ ತಲುಪಿದ್ದು, ಶೇ. 96 ರಷ್ಟು ಸಾಧನೆಯಾಗಿದೆ. ಸರ್ಕಾರದಿಂದ ಒಟ್ಟು 82,368.67 ರು. ಲಕ್ಷ ವೆಚ್ಚ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 1,31,395 ರು. ಡಿಬಿಟಿ ಖಾತೆಗಳಿದ್ದು, ಇದುವರೆಗೆ 39,08,64,000 ರು. ಭತ್ಯೆ ನೀಡಲು ವೆಚ್ಚ ಮಾಡಲಾಗಿದೆ ಎಂದು ಅಧಿಕಾತಿ ಮಾಹಿತಿ ನೀಡಿದರು.

ಸಭೆಯಲ್ಲಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಜಿ.ಪಂ. ಸಿಇಓ ರಿಷಿ ಆನಂದ್, ಜಿಲ್ಲಾ ಹಾಗೂ ತಾಲೂಕುಗಳ ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳು, ಸದಸ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

---------------------

ಕೋಟ್‌...

ಫಲಾನುಭವಿಗಳ ಅಭಿಪ್ರಾಯ

ತಾವು ಮೊದಲು ಇಸ್ತ್ರಿ ಕೆಲಸ ಮಾಡುತ್ತಿದ್ದವರು, ಗೃಹಲಕ್ಷ್ಮಿ ಹಣದಿಂದೀಗ ಬಟ್ಟೆ ಮತ್ತು ಸೀರೆ ತಂದು ವ್ಯಾಪಾರ ಆರಂಭಿಸಿದ್ದು, ಲಾಭ ಸಿಗುತ್ತಿದೆ. ಕುಟುಂಬ ನಿರ್ವಹಣೆಗೆ ತುಂಬಾ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಚಿರ ಋಣಿ.

-ಕಲಾವತಿ, ರಿಪ್ಪನ್‌ಪೇಟೆ.

------------------

ಕೂಲಿ ಕೆಲಸ ಬಿಟ್ಟು, ಗೃಹಲಕ್ಷ್ಮಿ ಹಣ ಒಟ್ಟುಗೂಡಿಸಿ ಸ್ವಂತ ಚಿಕನ್ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದು, ಅನುಕೂಲಕರವಾಗಿದೆ. ಕುಟುಂಬ ನಿರ್ವಹಣೆ ಉತ್ತಮವಾಗಿ ಮಾಡುತ್ತಿದ್ದೇನೆ. ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರಕ್ಕೆ ಧನ್ಯವಾದಗಳು.

- ಸವಿತಾ, ಉಂಬ್ಳೇಬೈಲು

-------------

ತಮ್ಮ ಪತಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಬಿಪಿಎಲ್ ಕಾರ್ಡ್‌ನಿಂದ ಅವರ ಆಪರೇಷನ್, ರೇಷನ್‌ಗೆ ತುಂಬಾ ಸಹಾಯ ಆಗಿದೆ ಹಾಗೂ ಗೃಹಲಕ್ಷ್ಮಿ ಹಣದಿಂದ ಹೊಲಿಗೆ ಮಷೀನ್ ಪಡೆದು, ಬಟ್ಟೆ ಹೊಲಿಯುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ನೆರವಾಗಿದೆ. ಸರ್ಕಾರಕ್ಕೆ ಋಣಿ.

-ರೇಖಾ ಸತೀಶ್, ಸೊರಬ

-------------------------

ಪೋಟೋ: 27ಎಸ್‌ಎಂಜಿಕೆಪಿ05

ಶಿವಮೊಗ್ಗದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಮೆಹರೋಜ್ ಖಾನ್ ಮಾತನಾಡಿದರು.