ಸಾಂಪ್ರದಾಯಿಕ ಪೇಸ್‌ಮೇಕರ್‌ಗಳಿಂದ ಎದುರಾಗಬಹುದಾದ ಅಪಾಯ ನಿವಾರಿಸುವ, ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೆ ಪರಿಚಿತವಾದ ಅತ್ಯಾಧುನಿಕ ತಂತಿ ಮುಕ್ತ ಪೇಸ್‌ಮೇಕರ್ ಇದಾಗಿದೆ. ಸಾಮಾನ್ಯವಾಗಿ ಹೃದಯ ಬಡಿತ ಅಸಹಜವಾಗಿ ಕಡಿಮೆಯಾದ ಸಂದರ್ಭದಲ್ಲಿ ಪೇಸ್‌ಮೇಕರ್ ಅಳವಡಿಸಲಾಗುತ್ತದೆ.
ಧಾರವಾಡ:
ಇಲ್ಲಿಯ ಎಸ್‌ಡಿಎಂ ನಾರಾಯಣ ಹೃದಯಾಲಯವು ಉತ್ತರ ಕರ್ನಾಟಕದಲ್ಲಿಯೇ ಮೊದಲ ಲೀಡ್‌ಲೆಸ್ ಡ್ಯುಯಲ್-ಚೇಂಬರ್ ಪೇಸ್‌ಮೇಕರ್ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ರಘುಪ್ರಸಾದ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಾಂಪ್ರದಾಯಿಕ ಪೇಸ್‌ಮೇಕರ್‌ಗಳಿಂದ ಎದುರಾಗಬಹುದಾದ ಅಪಾಯ ನಿವಾರಿಸುವ, ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೆ ಪರಿಚಿತವಾದ ಅತ್ಯಾಧುನಿಕ ತಂತಿ ಮುಕ್ತ ಪೇಸ್‌ಮೇಕರ್ ಇದಾಗಿದೆ. ಸಾಮಾನ್ಯವಾಗಿ ಹೃದಯ ಬಡಿತ ಅಸಹಜವಾಗಿ ಕಡಿಮೆಯಾದ ಸಂದರ್ಭದಲ್ಲಿ ಪೇಸ್‌ಮೇಕರ್ ಅಳವಡಿಸಲಾಗುತ್ತದೆ. ಅಂತೆಯೇ, 68 ವರ್ಷದ ವ್ಯಕ್ತಿಯೊಬ್ಬರಿಗೆ ಈ ಚಿಕಿತ್ಸೆ ಮಾಡಿದ್ದು ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಹೇಗೆ ಕಾರ್ಯ:ಎದೆ ಸೀಳಿ ತಂತಿಗಳನ್ನು ಅಳವಡಿಸಬೇಕಾದ ಸಾಂಪ್ರದಾಯಿಕ ಪೇಸ್‌ಮೇಕರ್‌ಗಳಿಗಿಂತ ಇದು ಭಿನ್ನವಾಗಿದೆ. ಸಂಪೂರ್ಣ ವೈಯರ್‌ಲೆಸ್ ಆಗಿದ್ದು ಸ್ಥಳೀಯ ಅರಿವಳಿಕೆ ನೀಡಿ ಒಂದು ಗಂಟೆ ಪ್ರಕ್ರಿಯೆ ನಡೆಸಲಾಗಿದೆ. ತೊಡೆಯ ಭಾಗದ ರಕ್ತನಾಳದ ಮೂಲಕ ಕ್ಯಾತಿಟರ್ ಸಹಾಯದಿಂದ ಸಣ್ಣ ಪೇಸ್‌ಮೇಕರ್ ಕ್ಯಾಪ್ಸುಲ್‌ಗಳನ್ನು ನೇರವಾಗಿ ಹೃದಯದ ಮೇಲಿನ ಮತ್ತು ಕೆಳಗಿನ ಬಲ ಕೋಣೆಗಳಲ್ಲಿ ಅಳವಡಿಸಲಾಗುತ್ತದೆ ಎಂದ ಅವರು, ಹೃದಯ ಬಡಿತದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಇದೊಂದು ಮಹತ್ವದ ಸಾಧನೆ ಎಂದು ವಿವರಿಸಿದರು.
ಪ್ರಯೋಜನವೇನು?:ಇಲ್ಲಿ ಯಾವುದೇ ತಂತಿಗಳಾಗಲಿ ಅಥವಾ ಶಸ್ತ್ರಚಿಕಿತ್ಸೆಯ ಪಾಕೆಟ್‌ಗಳಾಗಲಿ ಇಲ್ಲ. ಹೀಗಾಗಿ ರೋಗಿಯ ದೇಹದ ಮೇಲೆ ಯಾವುದೇ ಕಲೆ ಆಗುವುದಿಲ್ಲ. ರಕ್ತಸ್ರಾವ ಕನಿಷ್ಠವಿದ್ದು, ಸೋಂಕು ಅಥವಾ ತಂತಿ-ಸಂಬಂಧಿತ ತೊಡಕುಗಳ ಅಪಾಯ ಇರುವುದಿಲ್ಲ. ಅಲ್ಲದೆ, ಈ ಸಾಧನವು 17 ವರ್ಷ ಬ್ಯಾಟರಿ ಅವಧಿ ಹೊಂದಿದ್ದು, ಸಂಪೂರ್ಣ ಸುರಕ್ಷಿತವಾಗಿದೆ ಎಂದು ಡಾ. ರಘು ಪ್ರಸಾದ್ ವಿವರಿಸಿದರು.
ಈ ಸಾಧನೆಯ ಕುರಿತು ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ, ಹೃದ್ರೋಗ ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ಷೀಪ್ರ ಬೆಳವಣಿಗೆಯನ್ನು ಎಸ್‌ಡಿಎಂ ನಾರಾಯಣ ಹೃದಯಾಲಯ ಅಳವಡಿಸುತ್ತಿದೆ. ಡಾ. ರಘುಪ್ರಸಾದ ಅಂತಹ ಖ್ಯಾತ ಹೃದ್ರೋಗ ತಜ್ಞರು ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಹೃದಯ ಸಂಬಂಧಿತ ರೋಗಕ್ಕೆ ಪರಿಹಾರ ಒದಗಿಸುತ್ತಿದ್ದಾರೆ. ಉತ್ತರ ಕರ್ನಾಟಕದ ರೋಗಿಗಳು ಇನ್ಮುಂದೆ ಸುಧಾರಿತ, ಜೀವ ಉಳಿಸುವ ಹೃದಯ ಸಂಬಂಧಿ ಚಿಕಿತ್ಸೆಗಳಿಗಾಗಿ ದೊಡ್ಡ ನಗರಗಳಿಗೆ ಅಲೆದಾಡುವ ಅಗತ್ಯವಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಹೃದಯಾಲಯದ ಸೋಮನಾಥ ರಾಯಕೋಡಿ, ದುಂಡೇಶ್ ತಡಕೋಡ ಇದ್ದರು.