ಸಾರಾಂಶ
ಜಮಖಂಡಿ: ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪವನ ಬಳ್ಳೂರ ಅಪರೂಪದ ಲಿಪೋಮಾ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರ ಚರ್ಮದೊಳಗಿನ ಗಡ್ಡೆಯನ್ನು ಪರೀಕ್ಷೆಗೆ ಒಳಪಡಿಸಿ ದೊಡ್ಡಗಾತ್ರದ ಲಿಪೋಮಾ ಗಡ್ಡೆಯನ್ನು ಸುಮಾರು 30 ರಿಂದ 45 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪವನ ಬಳ್ಳೂರ ಅಪರೂಪದ ಲಿಪೋಮಾ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರ ಚರ್ಮದೊಳಗಿನ ಗಡ್ಡೆಯನ್ನು ಪರೀಕ್ಷೆಗೆ ಒಳಪಡಿಸಿ ದೊಡ್ಡಗಾತ್ರದ ಲಿಪೋಮಾ ಗಡ್ಡೆಯನ್ನು ಸುಮಾರು 30 ರಿಂದ 45 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.ಹಲವಾರು ವರ್ಷಗಳಿಂದ ಲಿಪೋಮಾ ಗಡ್ಡೆಯಿಂದ ಬಳಲುತ್ತಿದ್ದ ರೋಗಿಗೆ ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನೇ ಬಳಸಿಕೊಂಡು ಉಚಿತ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ಮೇಲೆ ನಂಬಿಕೆ ಇಟ್ಟರೆ ಉತ್ತಮ ಚಿಕಿತ್ಸೆ ಸಾಧ್ಯ ಎಂಬುದಕ್ಕೆ ಈ ಶಸ್ತ್ರಚಿಕಿತ್ಸೆ ಸಾಕ್ಷಿಯಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಇಷ್ಟು ದೊಡ್ಡಗಡ್ಡೆಯ ಶಸ್ತ್ರಚಿಕಿತ್ಸೆ ಮಾಡಿಸುವುದು ಹೇಗೆ ಎಂಬ ಅಳುಕಿತ್ತು. ಆದರೆ ವೈದ್ಯ ಡಾ.ಪವನ ಬಳ್ಳೂರ ಅವರು ಧೈರ್ಯ ತುಂಬಿ ಶಸ್ತ್ರಚಿಕಿತ್ಸೆ ಮಾಡಿ ಆರ್ಥಿಕ ಹೊರೆ ತಪ್ಪಿಸಿದ್ದಾರೆ ಎಂದು ರೋಗಿಯ ಸಂಬಂಧಿಕರು ತಿಳಿಸಿದರು.
ಲಿಪೋಮಾ ಗಡ್ಡೆ ಸಣ್ಣದಿದ್ದಾಗಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಅದು ಬೆಳೆದು ದೊಡ್ಡದಾಗುವವರೆಗೆ ಬಿಡಬಾರದು. ಇದರಿಂದ ಬೇರೆ ತೊಂದರೆ ಕಂಡುಬರಲಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಇದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೈದ್ಯ ಡಾ.ಪವನ ಬಳ್ಳೂರ ತಿಳಿಸಿದರು.ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಶಸ್ತ್ರಚಿಕಿತ್ಸೆ ನೀಡಿ ಬಡರೋಗಿಗಳಿಗೆ ಸೇವೆ ಮಾಡುತ್ತಿರುವ ವೈದ್ಯರ ಕಾರ್ಯಕ್ಕೆ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.