ಸಾರಾಂಶ
ಇದುವರೆವಿಗೂ ಹಳ್ಳಿಗಾಡಿನ ಬಡ, ದುರ್ಬಲ ಸಮುದಾಯದವರು ಖಾಸಗಿ ಆಸ್ಪತ್ರೆ, ದೂರದ ತಾಲೂಕು ಕೇಂದ್ರಗಳಿಗೆ ತೆರಳಬೇಕಿತ್ತು. ತಮ್ಮಲ್ಲಿ ನುರಿತ ವೈದ್ಯರು, ಉಪಕರಣ, ಸಿಬ್ಬಂದಿ ತಂಡವಿದ್ದು, ಸಾರ್ವಜನಿಕರು ಈ ಆರೋಗ್ಯ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿರುವುದು ಸಂತಸ ತಂದಿದೆ ಎಂದು ವೈದ್ಯಾಧಿಕಾರಿ ಪ್ರಸೂತಿತಜ್ಞೆ ಡಾ.ಸೌಜನ್ಯ ಎಸ್.ವಲ್ಕೆ ತಿಳಿಸಿದರು.ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಪ್ರಸೂತಿ ಶಸ್ತ್ರ ಚಿಕಿತ್ಸೆ ನಡೆಸಿದ ನಂತರ ಮಾತನಾಡಿ, ಹೋಬಳಿ ಹಂತದಲ್ಲಿನ ಮೊಟ್ಟ ಮೊದಲ ಶಸ್ತ್ರ ಚಿಕಿತ್ಸೆಯಾಗಿದೆ. ಇದರಿಂದ ಇಡೀ ಸಿಬ್ಬಂದಿ ವರ್ಗದವರಿಗೆ ಬಹಳ ಸಂತಸ ತಂದಿದೆ ಎಂದರು.
ಇದುವರೆವಿಗೂ ಹಳ್ಳಿಗಾಡಿನ ಬಡ, ದುರ್ಬಲ ಸಮುದಾಯದವರು ಖಾಸಗಿ ಆಸ್ಪತ್ರೆ, ದೂರದ ತಾಲೂಕು ಕೇಂದ್ರಗಳಿಗೆ ತೆರಳಬೇಕಿತ್ತು. ತಮ್ಮಲ್ಲಿ ನುರಿತ ವೈದ್ಯರು, ಉಪಕರಣ, ಸಿಬ್ಬಂದಿ ತಂಡವಿದ್ದು, ಸಾರ್ವಜನಿಕರು ಈ ಆರೋಗ್ಯ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.ಈ ಮೊದಲು ಸಾಮಾನ್ಯ ಹೆರಿಗೆ ಸೇವೆ ಆಸ್ಪತ್ರೆಯಲ್ಲಿತ್ತು. ಹೆಚ್ಚಿನ ಅಪಾಯಕರ ಸ್ಥಿತಿಯಲ್ಲಿನ ಸಿಜೇರಿಯನ್ ಶಸ್ತ್ರಚಿಕಿತ್ಸೆಯನ್ನು ತಮ್ಮ ಆರೋಗ್ಯ ಕೇಂದ್ರದಲ್ಲಿಯೇ ಮಾಡಲಾಗುತ್ತಿದೆ. ಪ್ರತಿ ತಿಂಗಳು 9ರಂದು ಪಿಎಂಎಸ್‌ಎಂಎ (ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ್ಯಅಭಿಯಾನ)ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ ಮಾಡಿ ಸಲಹೆ ನೀಡಲಾಗುತ್ತಿದೆ ಎಂದರು.
ಹೈರಿಸ್ಕ್ ಸ್ಥಿತಿ ಇದ್ದಲ್ಲಿ ನೆಗೆಟಿವ್, ರಕ್ತ, ಸಕ್ಕರೆ, ಬಿಪಿ ಸಮಸ್ಯೆ ಇದ್ದವರಿಗೆ ಪ್ರತಿ ತಿಂಗಳು 24 ರಂದು ಹೆಚ್ಚಿನ ತಪಾಸಣೆ ಮಾಡಲಾಗುವುದು, ಭಯಬಿಡಿ ತಾಯಿ, ಮಗುವಿನ ಆರೋಗ್ಯ ಆರೈಕೆಗೆ ಸದಾ ಬದ್ಧವಿರುವುದಾಗಿ ನುಡಿದರು.ಗರ್ಭಿಣಿಯರು ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಯುಕ್ತ ಪೌಷ್ಟಿಕಾಂಶಭರಿತ ಆಹಾರ ಸೇವನೆ ಕಾಳಜಿ ವಹಿಸಬೇಕಿದೆ. ಇದು ತಾಯಿ ಹುಟ್ಟುವ ಮಗುವಿನ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ಅರ್ಹ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಶಸ್ತ್ರಚಿಕಿತ್ಸೆ(ಸಿಜೇರಿಯನ್) ಮಾಡಲಾಯಿತು. ಮಕ್ಕಳ ತಜ್ಞ ಡಾ.ಚಂದನ್, ಅರವಳಿಕೆ ತಜ್ಞಡಾ.ತ್ಯಾಗರಾಜ್, ಆರೋಗ್ಯ ಸಿಬ್ಬಂದಿ ಇದ್ದರು.