ಹಸುಗೂಸಿನ ಡಯಾಫ್ರಾಮ್ ಹರ್ನಿಯಾಕ್ಕೆ ಯಶಸ್ವಿ ಚಿಕಿತ್ಸೆ

| Published : Dec 07 2024, 12:30 AM IST

ಹಸುಗೂಸಿನ ಡಯಾಫ್ರಾಮ್ ಹರ್ನಿಯಾಕ್ಕೆ ಯಶಸ್ವಿ ಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಜನ್ಮಜಾತ ಕಾಯಿಲೆಯಿಂದ ನರಳುತ್ತಿದ್ದ ನಿಂಬರ್ಗಾ ಹಸುಗೂಸಿಗೆ ಯಶಸ್ವಿ ಚಿಕಿತ್ಸೆ ನೀಡಿ ಮಗುವನ್ನ ಎತ್ತಿಕೊಂಡು ನಿಂತ ಯಶೋಧರಾ ಮಕ್ಕಳ ಆಸ್ಪತ್ರೆ ವೈದ್ಯ ಡಾ. ಪ್ರಶಾಂತ ಹಾಗೂ ವೈದ್ಯರ ತಂಡ, ಅವರ ಜೊತೆಗೆ ಪೋಷಕರಾದ ಮೇಘಾ, ಮಂಜುನಾಥ ಇದ್ದರು.

ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ಸು

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾದ ಮಂಜುನಾಥ ಹಾಗೂ ಮೇಘಾ ರೈತ ದಂಪತಿಗೆ ಹುಟ್ಟಿದ್ದ 2ನೇ ಮಗು ಗಂಡಾಗಿತ್ತು. ಚೊಚ್ಚಿಲ ಹೆಣ್ಣುಮಗು. 2ನೇಯದ್ದು ಪುತ್ರ ಸಂತಾನವಾಯಿತು ಎಂದು ಹಿಗ್ಗಿದ ಈ ದಂಪತಿ ಪ್ಯಾಮಿಲಿ ಪ್ಲ್ಯಾಂನಿಂಗ್‌ ಚಿಕಿತ್ಸೆ ಕೂಡಾ ಮಾಡಿಸಿಕೊಂಡಿದ್ದರು.

ಆದರೇ ವಿಧಿಯಾಟ ಬೇರೆನೇ ಆಗಿತ್ತು. ಮೇಘಾ-ಮಂಜುನಾಥ್‌ ದಂಪತಿಯ ಪಂಚಪ್ರಾಣ ಗಂಡು ಮಗುವಿಗೆ ನಿರಂತರ ಉಸಿರಾಟದ ತೊಂದರೆ, ಕಫ ಕಟ್ಟೋದು ಶುರುವಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ದಂಪತಿ ಆಸ್ಪತ್ರೆ ಅಲೆದದ್ದೇ ಬಂತು. ಮಗುವಿಗೆ ಏನಾಗಿದೆ ಎಂಬುದು ನಿಖರವಾಗಿ ಆರಂಭದಲ್ಲಿ ಗೊತ್ತಾಗಲೇ ಇಲ್ಲ.

*ವಿರಳ ಕಾಯಿಲೆ ಪತ್ತೆ ಹಚ್ಚಿದ ವೈದ್ಯರು: ಕಲಬುರಗಿಗೆಯಲ್ಲಿರುವ ಡಾ.ಪ್ರಶಾಂತ ಕುಲಕರ್ಣಿ ನೇತೃತ್ವದ ಯಶೋಧರಾ ಮಕ್ಕಳ ಆಸ್ಪತ್ರೆಗೆ ದಾಖಲಾದಾಗ ಇಲ್ಲಿ ಒಂದು ವಾರ ಮೇಘಾ-ಮಂಜುನಾಥ್‌ ದಂಪತಿಯ ಮಗುವನ್ನು ಉಳಿಸಿಕೊಂಡು 3 ತಿಂಗಳ ಹಸುಗೂಸಿನ ಉಸಿರಾಟದ ತೊಂದರೆಗೆ ಜನ್ಮಜಾತ ವಪೆಯ ಅಂಡವಾಯು (ಕಾಗ್ನಿಜೆಟಲ್‌ ಡಯಾಫ್ರಾಮ್ ಹರ್ನಿಯಾ) ಇರೋದು ಪತ್ತೆ ಹಚ್ಚಿ ಸತತ 2 ಗಂಟೆಕಾಲ ಲ್ಯಾಪ್ರೋಸ್ಕೋಪಿಕ್‌ ಶಸ್ತ್ರ ಚಿಕಿತ್ಸೆ ನಡೆಸಿ ಕೂಸಿನ ಪ್ರಾಣಕ್ಕೆ ಕಂಟಕವಾಗಲಿದ್ದ ವಪೆಯ ಹರ್ನಿಯಾಕ್ಕೆ ಚಿಕಿತ್ಸೆ ನೀಡಿದ್ದಾರೆ. ಇದರಿಂದಾಗಿ ರೈತ ದಂಪತಿಯ ಪುತ್ರ ಸಂತಾನದ ಸಂಕಷ್ಟ ದೂರವಾಗಿದ್ದು ಆ ಹಸುಗೂಸಿನ ಪುನರ್ಜನ್ಮವಾಗಿದೆ.

ನ.18ರಂದು ನಿಂಬರ್ಗಾದಿಂದ ಮಂಜುನಾಥ-ಮೇಘಾ ದಂಪತಿ ಮಗುವಿನೊಂದಿಗೆ ಯಶೋಧರಾ ಆಸ್ಪತ್ರೆಗೆ ಆಗಮಿಸಿದ ಅವರು, ಅಂದೇ ಆಡ್ಮಿಟ್‌ ಆದ ಪುಟಾಣಿಗೆ ಮಾರಣಾಂತಿಕ ಸಮಸ್ಯೆ ಕಾಡ್ತಿರೋದು ಪತ್ತೆ ಹಚ್ಚಿದೆವು. ಮಕ್ಕಳ ಶಸ್ತ್ರಜ್ಞ ಡಾ.ಕೃಷ್ಣ ಇಂದುವಾಸಿ, ಅರುವಳಿಕೆ ತಜ್ಞ ಡಾ.ಮಲ್ಲಿಕಾರ್ಜುನ್‌, ಚಿಕ್ಕಮಕ್ಕಳ ವೈದ್ಯರಾದ ಡಾ.ದೀಪಾ, ಡಾ.ಪ್ರಶಾಂತ ಚವ್ಹಾಣ್‌ ಒಳಗೊಂಡ ತಂಡದ ಜೊತೆಗೂಡಿ ನ.26 ರಂದು ಕ್ಲಿಷ್ಚಕರವಾಗಿದ್ದ ಶಸ್ತ್ರ ಚಿಕಿತ್ಸೆಯನ್ನ ಕಲಬುರಗಿಯಲ್ಲೇ ಮಾಡಿ ಯಶ ಕಂಡಿದ್ದೇವೆ. ಇದು ಕಲ್ಯಾಣ ಕರ್ನಾಟಕದಲ್ಲೇ ಮೊಟ್ಟ ಮೊದಲ ಡಯಾಫ್ರಾಮ್‌ ಹರ್ನಿಯಾ ಶಸ್ತ್ರ ಚಿಕಿತ್ಸೆಯಾಗಿ ದಾಖಲಾಗಿದೆ ಎಂದು ಯಶೋಧರಾ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಪ್ರಶಾಂತ ಕುಲಕರ್ಣಿ ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿ ವೈದ್ಯರ ತಂಡದ ಶ್ರಮ, ಏಕಾಗ್ರತೆಯ ಕಾರ್ಯಾಚರಣೆಯನ್ನ ಕೊಂಡಾಡಿದ್ದಾರೆ.

ಏನಿದು ಜನ್ಮಜಾತ ಡಯಾಫ್ರಾಮ್ ಹರ್ನಿಯಾ

ಮಾನವ ದೇಹದಲ್ಲಿನ ಎದೆ ಹಾಗೂ ಹೊಟ್ಟೆಯನ್ನು ಪ್ರತ್ಯೇಕಿಸಲು ಡಯಾಫ್ರಾಮ್‌ (ವಪೆ) ಎಂಬ ಸ್ನಾಯುಪದರು ಇರುತ್ತದೆ. ಆದರೆ ಈ ಹಸುಗೂಸಿನ ವಪೆಯಲ್ಲಿ 3 ರಂಧ್ರಗಳು ಉಂಟಾಗಿದ್ದವು. ಇದರಿಂದಾಗಿ ಕೂಸಿನ ಹೊಟ್ಟೆಯಲ್ಲಿರಬೇಕಾಗಿದ್ದ ದೊಡ್ಡ, ಸಣ್ಣ ಕರಳು, ಸ್ಲೀನ್‌ (ಮಾನವನ ಉದರದೊಳಗೆ ಎಡಭಾಗದ ಮೇಲಿನ ಮೂಲೆಯಲ್ಲಿರುವ ಅಂಗ- ಗುಲ್ಮ) ಜಠರ ಸೇರಿದಂತೆ ಎಲ್ಲಾ ಹೊಟ್ಟೆಯೊಳಗಿನ ಅಂಗಾಂಗಗಳು ವಪೆಯಲ್ಲಿದ್ದ ರಂಧ್ರದ ಮೂಲಕ ಕೂಸಿನ ಪುಟ್ಟದಾದ ಎದೆಗೂಡು ಸೇರಿಬಿಟ್ಟಿದ್ದವು. ಇದರಿಂದಾಗಿ ಶ್ವಾಸಕೋಶ ಬೆಳವಣಿಗೆಗೆ ಅಡಚಣೆ ಮಾಡಿದ್ದವು. ಇಂತಹ ಸ್ಥಿತಿಯನ್ನೇ ಜನ್ಮಜಾತ ಡಯಾಫ್ರಾಮ್ ಹರ್ನಿಯಾ ಎನ್ನುತ್ತಾರೆ.

ಹೊಟ್ಟೆಯೊಳಗಿನ ಅಂಗಾಂಗಗಳೆಲ್ಲ ಎದೆಗೂಡಿಗೆ ಬಂದಾಗ ಎದೆ ಗೂಡಲ್ಲಿರಬೇಕಾಗಿದ್ದ ಶ್ವಾಸಕೋಶ, ಪುಪ್ಪುಸ, ಹೃದಯ ಇವೆಲ್ಲವೂ ಎದೆ ಗೂಡಿನ ಎಡದಿಂದ ಬಲಕ್ಕೆ ಶಿಫ್ಟ್‌ ಆಗಿಬಿಟ್ಟು ಕೂಸಿಗೆ ನಿರಂತರ ಶ್ವಾಸೋಚ್ವಾಸಕ್ಕೇ ಅಡಚಣೆ ತಂದೊಡ್ಡಿದ್ದವು. ಸಿಟಿ ಸ್ಕ್ಯಾನ್‌ ಸೇರಿ ಹಲವು ಹತ್ತು ಪರೀಕ್ಷೆಗಳ ಮೂಲಕ ವಪೆಯ ರಂಧ್ರ, ಖಾಲಿ ಹೊಟ್ಟೆ, ಎದೆಗೂಡಲ್ಲಿ ಕರಳು ಇವನ್ನೆಲ್ಲ ಪತ್ತೆ ಹಚ್ಚಿದ ಕಲಬುರಗಿ ಯಶೋಧರಾ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಈ ವಿರಳ ಕಾಯಿಲೆಗೆ ಲ್ಯಾಪ್ರೋಸ್ಕಾಪಿಕ್‌ ಸರ್ಜರಿ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ.

ಜನ್ಮಜಾತ ಡಯಾಫ್ರಾಮ್ ಹರ್ನಿಯಾ ಇರುವ ಮಕ್ಕಳಲ್ಲಿ ತಾಯಿ ಗರ್ಭದಲ್ಲಿದ್ದಾಗಲೇ ಸಾವಿಗೊಳಗಾಗುವ ಸಂದರ್ಭವೆ ಹೆಚ್ಚು. ಇಂತಹ ವಿರಳ ಕಾಯಿಲಿಗೆ ಯಶೋಧರಾ ಆಸ್ಪತ್ರೆಯಲ್ಲೇ ಯಶಸ್ವಿ ಲ್ಯಾಪ್ರೋಸ್ಕೋಪಿಕ್‌ ಸರ್ಜರಿ ಮಾಡಿದ್ದೇವೆ. ಇಂತಹ ಗಂಭೀರ ಕಾಯಿಲೆಯಿಂದ ನರಳುತ್ತಿದ್ದ ನಿಂಬರ್ಗಾ ಮಗುವಿಗೆ ಚಿಕಿತ್ಸೆ ನೀಡಿದ ತೃಪ್ತಿ ನಮ್ಮ ಆಸ್ಪತ್ರೆ ವೈದ್ಯರ ತಂಡದ್ದಾಗಿದೆ.

-ಡಾ.ಪ್ರಶಾಂತ ಕುಲಕರ್ಣಿ, ಯಶೋಧರಾ ಆಸ್ಪತ್ರೆ ಮುಖ್ಯ ವೈದ್ಯರು ಕಲಬುರಗಿ

ವಪೆಯಲ್ಲಿ ರಂಧ್ರ ಇದ್ದು ಕೂಸಿನ ಹೊಟ್ಟೆಯಲ್ಲಿರಬೇಕಾಗಿದ್ದ ಕರಳು ಎದೆಗೂಡು ಸೇರಿ ಒಳಗೆ ಬಾವು ಬಂದಿತ್ತು. ಲ್ಯಾಪ್ರೋಸ್ಕೋಪಿ, ಎದೆ, ಹೊಟ್ಟೆ ಕತ್ತರಿಸಿ ಆಪರೇಷನ್‌ ಮಾಡುವ ಅವಕಾಶಗಳಿದ್ದರೂ ನಾವಿಲ್ಲಿ ಲ್ಯಾಪ್ರೋಸ್ಕೋಪಿ ವಿಧಾನ ಬಳಸಿ ಹಸುಗೂಸಿಗೆ ಹೆಚ್ಚಿನ ನೋವಾಗದಂತೆ ಮಾಡಿದ್ದೇವೆ. ಮಗುವನ್ನು ತಾಯಿ ಮಡಿಲಿಗೆ ಕೊಟ್ಟಿದ್ದು ಮಗು ಹಾಲು ಕುಡಿಯುತ್ತಿದೆ. ಆಪರೇಷನ್‌ ಯಶ ಕಂಡಿದ್ದು ನಮಗೂ ಧನ್ಯತೆ ಭಾವ ಮೂಡಿದೆ.

-ಡಾ.ಕೃಷ್ಣ ಇಂದುವಾಸಿ, ಚಿಕ್ಕಮಕ್ಕಳ ಶಸ್ತ್ರಜ್ಞರು, ಕಲಬುರಗಿ

ಮಗು ಹುಟ್ಟಿದಾಗಿನಿಂದ ಉಸಿರಾಟದ ತೊಂದರೆ ಎದುರಿಸುತಿತ್ತು. ಎಲ್ಲಾಕಡೆ ಸುತ್ತಿದ್ವಿ, ಕಫ ತೆಗೆದು ಕಳುಹಿಸುತ್ತಿದ್ದರು. ಯಶೋಧರಾ ಆಸ್ಪತ್ರೆಗೆ ಬಂದಾಗ ಕೂಸಿಗೆ ಕಾಡುತ್ತಿರೋ ಕಾಯಿಲೆ ಕಂಡು ಹಿಡಿದರು. ನಮಗೆಲ್ಲಾ ತಿಳಿಸಿ ಹೇಳಿ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ. ನಾವು ಯಶೋಧರಾ ವೈದ್ಯರಿಗೆ ಧನ್ಯವಾದ ಹೇಳಬೇಕು.

-ಮಂಜುನಾಥ-ಮೇಘಾ, ಮಗುವಿನ ಪೋಷಕರು