ಯಶಸ್ವಿಯಾಗಿ ನಡೆದ ಸಿಇಟಿ-ಸಕ್ಷಮ್ ಪರೀಕ್ಷೆ

| Published : Aug 26 2024, 01:39 AM IST

ಸಾರಾಂಶ

ಬೆಳಗಾವಿ ಜಿಲ್ಲೆಯ ಎಲ್ಲ ಸರಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಸಿ.ಇ.ಟಿ.-ಸಕ್ಷಮ್ ಎಂಬ ವಿನೂತನ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯ ಎಲ್ಲ ಸರಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಸಿ.ಇ.ಟಿ.-ಸಕ್ಷಮ್ ಎಂಬ ವಿನೂತನ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಆರಂಭಿಸಿದ್ದಾರೆ.

4ನೇ ಶನಿವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಥಮ ಸಿಇಟಿ/ನೀಟ್ ಸಿದ್ಧತಾ ಪರೀಕ್ಷೆ ಸರದಾರ ಪದವಿ ಪೂರ್ವ ವಿದ್ಯಾಲಯದಲ್ಲಿ ಜರುಗಿತು. ವಿದ್ಯಾಲಯಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಪರೀಕ್ಷಾ ಕೊಠಡಿಯಲ್ಲಿ ಸಂಚರಿಸಿ ಪರೀಕ್ಷಾ ಪ್ರಕ್ರಿಯೆ ವೀಕ್ಷಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಜಿಪಂ ಹಾಗೂ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ನಾವು ಸಿಇಟಿ ಸಕ್ಷಮ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ. ಜಿಲ್ಲೆಯಲ್ಲಿನ ಸುಮಾರು 34 ವಿಜ್ಞಾನ ಕಾಲೇಜುಗಳಲ್ಲಿ ಸಿಇಟಿ ಸಕ್ಷಮ ಪರೀಕ್ಷೆ ಹಮ್ಮಿಕೊಂಡಿದ್ದು, ಇದರಲ್ಲಿ 3500 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ಪರೀಕ್ಷೆಯು ಒಎಂಆರ್‌ ಆಧಾರಿತವಾಗಿದ್ದು, ಪರೀಕ್ಷೆ ಮುಗಿದಾದ ನಂತರ ಜಿಲ್ಲಾ/ತಾಲೂಕು/ಕಾಲೇಜುವಾರು ರ್‍ಯಾಂಕಿಂಗ್ ತೆಗೆಯಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ಹಾಗೂ ಸಿಇಟಿ ಭಯ ಹೋಗಲಾಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪರೀಕ್ಷೆ ಆದ ಎರಡು ದಿನಗಳಲ್ಲಿ ಸೋಮವಾರ ಫಲಿತಾಂಶ ಪ್ರಕಟಿಸಲಾಗುವುದು. ನಂತರ ಜಿಲ್ಲೆಯ ಎಲ್ಲ ವಿಜ್ಞಾನ ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ಅನುಮಾನ ನಿವಾರಣಾ ಸೆಷನ್ಸ್‌ ನಡೆಸುವುದರ ಮೂಲಕ ಪರೀಕ್ಷಾ ವಿಶ್ಲೇಷಣೆ ಮಾಡಲಾಗುವುದು. ಇದೊಂದು ಜಿಲ್ಲೆಯಲ್ಲಿ ವಿನೂತನವಾದ ಕಾರ್ಯಕ್ರಮವಾಗಿದ್ದು, ಹಿರಿಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ರಾಹುಲ್ ಶಿಂಧೆ ತಿಳಿಸಿದರು.

ಚುನಾವಣೆ ಸಾಕ್ಷರತೆ ಸಂಘ (ಇ.ಎಲ್.ಸಿ) ಕಾರ್ಯಚಟುವಟಿಕೆ ಅವಲೋಕಿಸಿದರು.17 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡಿಸುವಂತೆ ಸಂಬಂಧಪಟ್ಟ ಚುನಾವಣೆ ಇ.ಎಲ್.ಸಿ ನೋಡಲ್ ಅಧಿಕಾರಿಗೆ ನಿರ್ದೇಶನ ನೀಡಿದರು. ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡು ಹರ್ಷ ವ್ಯಕ್ತಪಡಿಸಿದರು.

ಪ್ರಾಚಾರ್ಯ ವೈ.ಎಂ. ಪಾಟೀಲ , ಉಪನ್ಯಾಸಕ ವಿಜಯಕುಮಾರ ಹತ್ತಿ, ಇ.ಎಲ್.ಸಿ ನೋಡಲ್ ಅಧಿಕಾರಿ ಎಂ.ಎಂ. ಮುಲ್ಲಾ, ಪ್ರೌಢ ಶಾಲಾ ಮುಖ್ಯಶಿಕ್ಷಕ ಶಿವಾನಂದ ಹಾದಿಮನಿ ಉಪಸ್ಥಿತರಿದ್ದರು.