ಸಾರಾಂಶ
ಹಾಲು ಹಾಗೂ ವಿದ್ಯುತ್ ದರ ಹೆಚ್ಚಳ ಖಂಡಿಸಿ ಎಸ್‌ಯುಸಿಐ ಪಕ್ಷದ ಕಾರ್ಯಕರ್ತರು ನಗರದಲ್ಲಿ ಶನಿವಾರ ಸಂಜೆ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಹಾಲು ಹಾಗೂ ವಿದ್ಯುತ್ ದರ ಹೆಚ್ಚಳ ಖಂಡಿಸಿ ಎಸ್‌ಯುಸಿಐ ಪಕ್ಷದ ಕಾರ್ಯಕರ್ತರು ನಗರದಲ್ಲಿ ಶನಿವಾರ ಸಂಜೆ ಪ್ರತಿಭಟನೆ ನಡೆಸಿದರು.ಹೈನುಗಾರರ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂಬುದು ನಿಜ. ಇದನ್ನು ಕಡಿಮೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪಶು ಆಹಾರ, ಮೇವು, ಪಶು ವೈದ್ಯಕೀಯ ವೆಚ್ಚ ಮೊದಲಾದ ಹೈನುಗಾರಿಕೆಯ ಒಳಸುಳಿಗಳ ವೆಚ್ಚವನ್ನು ಸರ್ಕಾರ ಕಡಿತ ಮಾಡಬೇಕಿತ್ತು. ಬದಲಿಗೆ ಪ್ರತಿಬಾರಿಯೂ ವೆಚ್ಚದ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ವರ್ಗಾಯಿಸುವುದು ಜನವಿರೋಧಿ ನೀತಿಯಾಗಿದೆ. ಇನ್ನೊಂದೆಡೆ ವಿದ್ಯುತ್ ದರವನ್ನು ಮತ್ತೆ ಪರಿಷ್ಕರಣೆ ಮಾಡಲಾಗಿದೆ. ಸದ್ಯಕ್ಕೆ ಗೃಹಜ್ಯೋತಿ ಯೋಜನೆಯ ಕಾರಣಕ್ಕೆ ಇದರಿಂದ ಬಹುಪಾಲು ಗ್ರಾಹಕರಿಗೆ ಸಮಸ್ಯೆ ಆಗದೇ ಇರಬಹುದು. ಆದರೆ ವಾಣಿಜ್ಯ ಮತ್ತು ಸಣ್ಣ ಕೈಗಾರಿಕೆಗಳಿಗೆ ಇದು ಹೊರೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ನಾಗಲಕ್ಷ್ಮಿ, ಡಾ. ಪ್ರಮೋದ್ ಹಾಗೂ ಎಸ್.ಜಿ. ನಾಗರತ್ನ, ಕೆಎಂಎಫ್ ಮತ್ತು ವಿದ್ಯುತ್ ಕಂಪನಿಗಳ ದಕ್ಷತೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ ವಹಿಸಿಲ್ಲ. ಹೀಗಾಗಿ ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚ ನಿಯಂತ್ರಣವಿಲ್ಲದಂತಾಗಿದೆ. ಹಾಲು ಮತ್ತು ವಿದ್ಯುತ್ ದರ ಏರಿಕೆಗಳು ಇತರ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಶಾಂತಾ, ಈಶ್ವರಿ, ವಿಜಯಲಕ್ಷ್ಮಿ, ರವಿರಾಜ, ರವಿಕಿರಣ್, ಹನುಮಪ್ಪ, ವಿದ್ಯಾ, ನಾಗಭೂಷಣ, ನೇತ್ರಾ, ಶಾಂತಕುಮಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.