ಸಾರಾಂಶ
ರಾಯಚೂರು: ರಾಜ್ಯದ 19 ಸೇರಿ ದೇಶದ 151 ಲೋಕಸಭಾ ಕ್ಷೇತ್ರಗಳಲ್ಲಿ ಸೋಷಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್-ಎಸ್‌ಯುಸಿಐ-ಸಿ) ಪಕ್ಷ ಸ್ಪರ್ಧಿಸುತ್ತಿದ್ದು, ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ರಾಯಚೂರು ಕ್ಷೇತ್ರದಿಂದ ರಾಮಲಿಂಗಪ್ಪ ಅವರನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಸೆಕ್ರೇಟರಿಯಟ್ ಸದಸ್ಯ ಕೆ.ಸೋಮಶೇಖರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ದೇಶದಲ್ಲಿ ಏಳು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಿರಂತರವಾಗಿ ಕಾರ್ಮಿಕ ವಿರೋಧಿ ಧೊರಣೆ ಅನುಸರಿಸುತ್ತಾ ಕಾರ್ಪೋರೇಟ್ ವ್ಯವಸ್ಥೆಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪರ್ಯಾಯ ಶಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಎಸ್‌ಯುಸಿಐ-ಕಮ್ಯುನಿಸ್ಟ್ ಪಕ್ಷ ನಿರಂತರವಾಗಿ ಹೋರಾಟ ನಡೆಸುತ್ತಾ ಬರುತ್ತಿದೆ ಎಂದು ತಿಳಿಸಿದರು.ರೈತರ ಹೋರಾಟಗಳಿಗೆ ಬಲ ನೀಡಲು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು, ಎನ್‌ಇಪಿ ವಿರುದ್ಧ ಧ್ವನಿ ಎತ್ತಲು, ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಉಳಿಸಲು, ಯುವ ಜನರ, ಮಹಿಳೆಯರ ಹಿತಾಸಕ್ತಿಯನ್ನು ಎತ್ತಿ ಹಿಡಿಯಲು ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ರಾಜ್ಯದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ಜನರು ತಿರಸ್ಕರಿಸಿ ಪ್ರಮಾಣಿಕ, ಹೋರಾಟಗಾರರ ಅಭ್ಯರ್ಥಿಗಳಿಗೆ ಮತದಾರರು ಮತ ನೀಡಬೇಕು ಎಂದು ಕೋರಿದರು.
ರಾಯಚೂರು ಕ್ಷೇತ್ರದಿಂದ ಸ್ಪರ್ಧಿಸಿರುವ ರಾಮಲಿಂಗಪ್ಪ ವಿದ್ಯಾರ್ಥಿ ದೆಸೆಯಿಂದಲೇ ಸಂಪೂರ್ಣವಾಗಿ ಹೋರಾಟದಲ್ಲಿ ತೊಡಗಿಕೊಂಡಿದ್ದು, ಕ್ಷೇತ್ರದ ಮತದಾರರು ಇಂತ ಜನಪರ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ, ಕೆ.ಸೋಮಶೇಖರ್ ಯಾದಗಿರಿ, ಚಂದ್ರಗಿರೀಶ್, ಶರಣಗೌಡ ಗೂಗಲ್, ಎನ್.ಎಸ್.ವೀರೇಶ್, ಚನ್ನಬಸವ ಜಾನೇಕಲ್, ಅನ್ನಪ್ಪ, ಮಹೇಶ ಚೀಕಲಪರ್ವಿ, ಬಸವರಾಜ ಇದ್ದರು.