ಧಾರವಾಡ:
ಸುಡುಗಾಡು ಸಿದ್ಧರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಲೆಮಾರಿ ಜನಾಂಗಗಳಲ್ಲಿ ಬರುವ ಇವರು ಈ ನೆಲದ ಸಾಂಸ್ಕೃತಿಕ ವಾರಸುದಾರರು, ಇವರ ಬಗ್ಗೆ ಸಾಂಸ್ಕೃತಿಕ ಅಧ್ಯಯನ ವಾಸ್ತವವಾಗಿ ನಡೆಯಬೇಕಿದೆ ಎಂದು ಸಾಹಿತಿ ಡಾ. ವೈ.ಎಂ. ಭಜಂತ್ರಿ ಹೇಳಿದರು.ನಗರದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಜಾನಪದ ಸಂಶೋಧನಾ ಕೇಂದ್ರದಿಂದ ನಡೆದ ಡಾ. ಜಿನದತ್ತ ಹಡಗಲಿ ದತ್ತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ "ಸುಡುಗಾಡು ಸಿದ್ಧರು ಒಂದು ಸಾಂಸ್ಕೃತಿಕ ಅಧ್ಯಯನ " ಉಪನ್ಯಾಸ ಮತ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು..
ಕರ್ನಾಟಕದಲ್ಲಿ ಇರುವಷ್ಟು ಬುಡಕಟ್ಟು ಅಲೆಮಾರಿ ಜನಾಂಗಗಳು ದೇಶದ ಬೇರೆ ಯಾವ ಭಾಗದಲ್ಲಿಯೂ ಇಲ್ಲ. ಆದರೆ, ಆ ಎಲ್ಲ ಜನಾಂಗಗಳು ಇಂದು ಅನಾಥ ಪ್ರಜ್ಞೆಯಿಂದ ಬಳಲುತ್ತಿವೆ. ಅದರಲ್ಲಿ ಕೇವಲ ಶೇ. 1ರಷ್ಟು ಜನ ಕಲಿತಿದ್ದು ತಮ್ಮ ಜನಾಂಗದ ಕುರಿತು ಅಧ್ಯಯನ ಮಾಡಬೇಕಿದೆ. ಇವರೆಲ್ಲ ಮೂಲ ಆಂಧ್ರದವರಾದರು ಉತ್ತರ ಕರ್ನಾಟಕದಲ್ಲಿ ಹೆಚ್ಚು ನೆಲೆಸಿದ್ದಾರೆ ಎಂದರು.ಕವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಮಾತನಾಡಿ, ಸುಡುಗಾಡು ಸಿದ್ಧರು ಪ್ರಕೃತಿ ಪ್ರಿಯರು, ಸಭ್ಯಸ್ತರು. ಬಡತನ, ದಾರಿದ್ರ‍್ಯ, ಅನಕ್ಷರತೆ ಇದ್ದರೂ ನೈತಿಕತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು ಎಂದು ಹೇಳಿದರು.
ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಗುರು ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ಸುಡುಗಾಡು ಸಿದ್ಧ ಯಲ್ಲಪ್ಪ ಡಕ್ಕಣ್ಣವರ ಪ್ರದರ್ಶನ ನಡೆಸಿದರು. ಹುಸೇನಪ್ಪ ಕುಲಾವಿ ಸಾಥ್ ಕೊಟ್ಟರು. ವೇದಿಕೆ ಮೇಲೆ ಡಾ. ಜಿನದತ್ತ ಹಡಗಲಿ, ಸುಜಾತ ಹಡಗಲಿ ಇದ್ದರು. ಕಾರ್ಯದರ್ಶಿ ನಾಗಭೂಷಣ ಹಿರೇಮಠ ಸ್ವಾಗತಿಸಿದರು, ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಜಾನಪದ ಸಂಗೀತ ಬಳಗ ಶಿವಸ್ತುತಿ ಹಾಡಿದರು, ಸರಸ್ವತಿ ಪೂಜಾರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಭಾ ನೀರಲಗಿ, ಆಶಾ ಸಯ್ಯದ್, ಖೈರುನ್ನಿಸ, ಗಿರಿಜಾ ಶಕ್ಕಿ, ಭಾರತಿ ಕಲ್ಮಠ, ಇಂದಿರಾ, ಜಯಶ್ರೀ, ಸುಮಾ, ವಾಣಿ, ಎಂ.ಎಂ. ಚಿಕ್ಕಮಠ, ಶರಬೇಂದ್ರೆ ಸ್ವಾಮಿ, ಶಶಿಧರ ನರೇಂದ್ರ ಮತ್ತಿತರರಿದ್ದರು.