ಸಾರಾಂಶ
ವಿಚಾರ ತಿಳಿಯುತ್ತಲೇ ಹತ್ತಾರು ಸಾರ್ವಜನಿಕರು ನಗರಸಭೆಗೆ ಆಗಮಿಸಿ ಲೋಕಾಯುಕ್ತ ಪೊಲೀಸರಿಗೆ ತಮ್ಮ ದೂರು ಸಲ್ಲಿಸಿದರು. ಇ-ಖಾತೆ ಅವ್ಯವಹಾರ, ಖಾತೆಗಳ ವಿಚಾರದಲ್ಲಿ ವಿಳಂಬ ಸೇರಿ ಹಲವು ವಿಚಾರಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಇಲ್ಲಿನ ನಗರಸಭೆ ಕಚೇರಿ ಮೇಲೆ ಸೋಮವಾರ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದರು.ಸೋಮವಾರ ಮಧ್ಯಾಹ್ನ ಸುಮಾರು 1.15ರ ಸಮಯದಲ್ಲಿ ರಾಮನಗರ ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿಗಳಾದ ಗೌತಮ್, ಅನಂತರಾಮು ನೇತೃತ್ವದಲ್ಲಿ ನಗರಸಭೆ ಕಚೇರಿ ಮೇಲೆ ದಾಳಿ ನಡೆಸಿದ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳಿದ್ದ ಲೋಕಾಯುಕ್ತ ಪೊಲೀಸರ ತಂಡ, ನಗರಸಭೆಯಲ್ಲಿನ ಕಡತಗಳ ಪರಿಶೀಲನೆ ನಡೆಸಿದರು.
ಸುಮಾರು 4 ತಂಡಗಳಾಗಿ ವಿಂಗಡನೆಗೊಂಡ ಅಧಿಕಾರಿಗಳ ತಂಡ, ಪೌರಾಯುಕ್ತರ ಕೊಠಡಿ, ನಗರಸಭೆಯ ಕಂದಾಯ ಇಲಾಖೆ, ಕಾಮಗಾರಿ ವಿಭಾಗ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಕಡತಗಳ ಪರಿಶೀಲನೆ ನಡೆಸಿತು. ಇದೇ ವೇಳೆ ದೂರುದಾರರ ಅಹವಾಲುಗಳನ್ನು ಆಲಿಸಿ, ಕಡತಗಳನ್ನು ಪರಿಶೀಲಿಸಿದರು.ಸಂಜೆಯಾದರೂ ಮುಂದುವರಿದಿದ್ದ ಪರಿಶೀಲನೆ:
ಸೋಮವಾರ ಮಧ್ಯಾಹ್ನ ನಗರಸಭೆಗೆ ಆಗಮಿಸಿದ ಲೋಕಾಯುಕ್ತ ಪೊಲೀಸರ ತಂಡ ಕಡತಗಳ ದಾಖಲೆಗಳ ಪರಿಶೀಲನೆ ನಡೆಸಿತು. ಪೌರಾಯುಕ್ತ ಪುಟ್ಟಸ್ವಾಮಿ ಕೊಠಡಿಯಲ್ಲಿ ಕುಳಿತ ಡಿವೈಎಸ್‌ಪಿಗಳು ಹಾಗೂ ಅಧಿಕಾರಿಗಳ ತಂಡ, ಕಡತಗಳ ಪರಿಶೀಲನೆ ನಡೆಸುವ ಜತೆಗೆ ಪೌರಾಯುಕ್ತರಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿತು. ಇದರೊಂದಿಗೆ ಹಲವು ದೂರುದಾರರು ಸಹ ನಗರಸಭೆಗೆ ಆಗಮಿಸಿ ಲೋಕಾಯುಕ್ತ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು. ಇದೇ ವೇಳೆ ಕೆಲವು ನಾಗರಿಕರು ದಾಖಲೆಗಳನ್ನು ನೀಡಿದ್ದು, ಲೋಕಾಯುಕ್ತ ಪೊಲೀಸರು ಪೌರಾಯುಕ್ತರಿಂದ ಮಾಹಿತಿ ಪಡೆದುಕೊಂಡರು. ಸಂಜೆಯಾದರೂ ನಗರಸಭೆಯಲ್ಲಿ ಕಡತಗಳ ಪರಿಶೀಲನೆ ಕಾರ್ಯ ಮುಂದುವರೆದಿತ್ತು.ಹಲವು ದೂರುಗಳು:
ಇಲ್ಲಿನ ನಗರಸಭೆಯಲ್ಲಿನ ಭ್ರಷ್ಟಾಚಾರ, ಅಕ್ರಮ ಖಾತೆ, ಸಾರ್ವಜನಿಕರ ಕೆಲಸ-ಕಾರ್ಯಗಳಲ್ಲಿ ವಿಳಂಬ ಕುರಿತು ಸಾಕಷ್ಟು ದೂರುಗಳು ಕೇಳಿಬಂದಿದ್ದವು. ನಗರಸಭೆ ಆಡಳಿತ ಹಳಿತಪ್ಪಿದ್ದು, ಕಾಸಿಲ್ಲದೇ ಯಾವುದೇ ಕಾರ್ಯಗಳೂ ನಡೆಯುವುದಿಲ್ಲ ಎಂದು ಸಾರ್ವಜನಿಕರು ದೂರಿದರು. ಖಾತೆ ವಿಚಾರದಲ್ಲಿ ಸಾಕಷ್ಟು ಅವ್ಯವಹಾರವಾಗಿರುವ ಕುರಿತು ದೂರುಗಳು ಕೇಳಿಬಂದಿದ್ದವು. ನಗರಸಭೆಯಲ್ಲಿನ ಅವ್ಯವಹಾರದ ಹಾಗೂ ಪೌರಾಯುಕ್ತ ಪುಟ್ಟಸ್ವಾಮಿ ಅವರ ಕಾರ್ಯವೈಖರಿ ಕುರಿತು ಖುದ್ದು ಇಲ್ಲಿನ ನಗರಸಭೆ ಅಧ್ಯಕ್ಷರೇ ಜಿಲ್ಲಾಧಿಕಾರಿ, ಲೋಕಾಯುಕ್ತ ಸೇರಿ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದ್ದರು.ನಗರಸಭೆ ಅಧ್ಯಕ್ಷರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ೭ ಮಂದಿ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡ ಕೆಲವು ತಿಂಗಳ ಹಿಂದೆ ನಗರಸಭೆಗೆ ಆಗಮಿಸಿ ನಗರಸಭೆಯಲ್ಲಿ ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿತ್ತು. ಇದೀಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ವಿಚಾರ ತಿಳಿಯುತ್ತಲೇ ಹತ್ತಾರು ಸಾರ್ವಜನಿಕರು ನಗರಸಭೆಗೆ ಆಗಮಿಸಿ ಲೋಕಾಯುಕ್ತ ಪೊಲೀಸರಿಗೆ ತಮ್ಮ ದೂರು ಸಲ್ಲಿಸಿದರು. ಇ-ಖಾತೆ ಅವ್ಯವಹಾರ, ಖಾತೆಗಳ ವಿಚಾರದಲ್ಲಿ ವಿಳಂಬ ಸೇರಿ ಹಲವು ವಿಚಾರಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.