ಕನ್ನಡಪ್ರಭ ವಾರ್ತೆ ಬೆಂಗಳೂರು

ರಾತ್ರೋರಾತ್ರಿ ಬೆಂಗಳೂರು ಬದಲಾವಣೆ ಸಾಧ್ಯವಿಲ್ಲ. ಆದರೂ ಇರುವ ಕಾನೂನು ಬಿಗಿ ಮಾಡಿ ಕಠಿಣ ನಿರ್ಣಯ ಮಾಡಲಿದ್ದೇನೆ. ಯಾವುದೇ ಹೊಸ ಕಾನೂನು ಮಾಡಲು ಹೋಗುವುದಿಲ್ಲ. ಆದರೆ ಬೆಂಗಳೂರಿನ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಖಾತೆ ಕ್ಯಾತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ನಾನು ಬೇಡಿಕೆ ಇಟ್ಟಿರಲಿಲ್ಲ. ಆದರೂ ಹೈಕಮಾಂಡ್‌ ಯೋಚನೆ ಮಾಡಿ ನನಗೆ ಜವಾಬ್ದಾರಿ ನೀಡಿದೆ. ಈ ಬಗ್ಗೆ ನಾನು ರಾಮಲಿಂಗಾರೆಡ್ಡಿ ಅವರ ಸಹಕಾರ ಕೇಳುತ್ತೇನೆ’ ಎಂದರು.

‘ರಾಮಲಿಂಗಾರೆಡ್ಡಿ ಅವರು ನಮ್ಮ ನಾಯಕರು. ಪಕ್ಷದ ವರಿಷ್ಠರು ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಲಿದ್ದಾರೆ. ಜನರ ಹಿತದೃಷ್ಟಿಯಿಂದ ನಾವು ಕುಳಿತು ಸರಿಪಡಿಸಿಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ರಾಮಲಿಂಗಾರೆಡ್ಡಿ ಅವರ ಸಹಕಾರ ಕೇಳುತ್ತೇನೆ’ ಎಂದರು.

ಕಂದಾಯ ಇಲಾಖೆ ಕೇಳಿದ್ದೆ:


ನಾನು ಕಂದಾಯ ಇಲಾಖೆಯಲ್ಲಿ ಆರಂಭಿಸಿರುವ ಕೆಲಸಗಳನ್ನು ಪೂರ್ಣಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಆದರೆ ಪಕ್ಷದ ನಾಯಕತ್ವ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದೆ. ಬೆಂಗಳೂರು ಅಭಿವೃದ್ಧಿ ಇಲಾಖೆ ದೊಡ್ಡ ಸವಾಲಿನ ಜವಾಬ್ದಾರಿ. ನಗರ ಹಲವು ಜಟಿಲ ಸಮಸ್ಯೆಗಳನ್ನು ಎದುರಿಸುತ್ತಿದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಈಗಲೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳ ಕೆಲಸ ಆರಂಭಿಸಿದ್ದಾರೆ. ಜತೆಗೆ, ಬೆಂಗಳೂರು ನಗರದ ಕಸ ನಿರ್ವಹಣೆ, ಟ್ರಾಫಿಕ್ ಸಮಸ್ಯೆ ಹಾಗೂ ಖಾತೆ ಸಮಸ್ಯೆಗಳಂತಹ ದಿನನಿತ್ಯದ ಸಮಸ್ಯೆಗಳ ಕಡೆ ಹೆಚ್ಚು ಗಮನ ಹರಿಸಲಾಗುವುದು ಎಂದು ಹೇಳಿದರು.