ಸಾರಾಂಶ
ದಿನಗೂಲಿ ನೌಕರನನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಪದಾಧಿಕಾರಿಗಳಿಂದ ಅರಣ್ಯ ಭವನ ಎದುರು ಪ್ರತಿಭಟನೆ ಹಾಗೇ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಮೋಟಾರ್ ಕಾಯ್ದೆ ವಿರೋಧಿಸಿ ಲಾರಿ ಮಾಲೀಕರು, ಚಾಲಕರ ಸಂಘಟನೆಗಳ ಒಕ್ಕೂಟ ಹಾಗು ಖಾಸಗಿ ಬಸ್ ಗಳ ಚಾಲಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ದಿನಗೂಲಿ ನೌಕರನನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ಅರಣ್ಯ ಭವನ ಎದುರು ಪ್ರತಿಭಟಿಸಿದರು.ಅರಣ್ಯ ಭವನದ ನಗರ ಹಸರೀಕರಣ ವಲಯ ಕಚೇರಿಯಲ್ಲಿ ದಿನಗೂಲಿ ನೌಕರನಾಗಿ ಕಳೆದ 2011-12ನೇ ಸಾಲಿನಿಂದ ಕೆಲಸ ನಿರ್ವಹಿಸುತ್ತಿರುವ ನಿಂಗರಾಜು ಅವರನ್ನು ಯಾವುದೇ ಸೂಚನೆ ನೀಡದೆ ಕಳೆದ ಏಪ್ರಿಲ್ 2023 ರಿಂದ ಕೆಲಸದಿಂದ ತೆಗೆಯಲಾಗಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು.
ಈ ಸಂಬಂಧ ನೌಕರರು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ದಿನಗೂಲಿ ಕೆಲಸವನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ನೌಕರನ ಕುಟುಂಬ ಬೀದಿಗೆ ಬಿದ್ದಿದೆ. ನಗರದ ಮಧ್ಯೆ ಇರುವ ಮಳಲವಾಡಿ ಕೆರೆಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನವನ ಕಾಮಗಾರಿ 2011-12 ರಲ್ಲಿ ಪ್ರಾರಂಭವಾಗಿದ್ದು, ಈಗ ಈ ಜಾಗದ್ಲಿ ಸುಂದರವಾದ ಟ್ರಿಪಾರ್ಕ್‌ನಿರ್ಮಿಸಿದ್ದು, ಸರ್ಕಾರ ಪ್ರತಿವರ್ಷ ಹತ್ತಾರು ಲಕ್ಷ ವೆಚ್ಚ ಮಾಡುತ್ತಿದೆ ಎಂದು ದೂರಿದರು.ಹೀಗಿರುವಾಗ ಒಬ್ಬ ನೌಕರನಿಗೆ ಕೆಲಸವಿಲ್ಲ ಎಂದು ಹೇಳುವ ಇಲಾಖೆ ಕ್ರಮ ವಿರೋಧಿಸಿ ನೌಕರರ ಸಂಘ ಮತ್ತು ನಿಂಗರಾಜು ಕುಟುಂಬದವರು ಸೇರಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಉಪ ಮೇಯರ್ ಶೈಲೇಂದ್ರ, ಸಂಘದ ಅಧ್ಯಕ್ಷ ಎ.ಎಂ. ನಾಗರಾಜು ಮೊದಲಾದವರು ಇದ್ದರು.ಮುಂದುವರೆದ ಲಾರಿ ಚಾಲಕರ ಪ್ರತಿಭಟನೆ
ಮೈಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಮೋಟಾರ್ ಕಾಯ್ದೆ ವಿರೋಧಿಸಿ ಲಾರಿ ಮಾಲೀಕರು, ಚಾಲಕರ ಸಂಘಟನೆಗಳ ಒಕ್ಕೂಟ ಹಾಗು ಖಾಸಗಿ ಬಸ್ ಗಳ ಚಾಲಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.ಜಿಲ್ಲೆಯಾದ್ಯಂತ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ. ಅಗತ್ಯ ವಸ್ತುಗಳಾದ ಔಷಧ, ಹಾಲು ಮುಂತಾದ ಸಾಗಣಿಕೆಗೆ ಮಾತ್ರ ಅವಕಾಶ ನೀಡಿದ್ದು, ಉಳಿದಂತೆ ಎಲ್ಲಾ ಬಗೆಯ ವಸ್ತುಗಳ ಸಾಗಣಿಕೆಯನ್ನು ಬಂದ್ ಮಾಡಿದ್ದಾರೆ.
ಕೆಲವೆಡೆ ಖಾಸಗಿ ಬಸ್‌ಚಾಲಕರೂ ಕೂಡ ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಆದರೆ ಬೆರಳೆಣಿಕೆಯಷ್ಟು ಬಸ್ ಮತ್ತು ಸರಕು ಸಾಗಣಿಕೆ ವಾಹನಗಳು ಮಾತ್ರ ಸಂಚರಿಸಿದವು.ನೂತನ ಮೋಟಾರ್ ಕಾಯ್ದೆ ವಾಪಸ್ ಪಡೆಯುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಚಾಲಕರು ಎಚ್ಚರಿಸಿದರು.
ಲಾರಿಗಳ ಮಾಲೀಕರು ಮತ್ತು ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಹಣ್ಣು ಮತ್ತು ತರಕಾರಿ ಸಾಗಣಿಕೆಗೆ ಗೂಡ್ಸ್ ಆಟೋಗಳನ್ನು ಅವಲಂಬಿಸಬೇಕಾಯಿತು. ಆದರೆ ಹಳೇ ಸಂತೆಪೇಟೆ ಬಳಿ ಸರಕು ಸಾಗಣಿಕೆ ಆಟೋಗಳನ್ನು ತಡೆದು ಅವುಗಳ ಗ್ಲಾಸಿಗೆ ಬಂದ್ ನ ಕರಪತ್ರಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಇದ್ದರು.