ಸಾರಾಂಶ
ಗಜೇಂದ್ರಗಡ: ಪಟ್ಟಣದ ಬಸ್ ನಿಲ್ದಾಣ, ಕುಷ್ಟಗಿ ಮತ್ತು ರೋಣ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಗೂಡಂಗಡಿಗಳನ್ನು ಏಕಾಏಕಿ ತೆರವು ಮಾಡಿದ್ದನ್ನು ಖಂಡಿಸಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರು ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ಕಳೆದ ಕೆಲ ವರ್ಷಗಳಿಂದ ರಸ್ತೆಯ ಬೀದಿ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ವ್ಯಾಪಾರ ನಂಬಿ ವಿವಿಧ ಸ್ವಸಹಾಯ ಗುಂಪುಗಳಲ್ಲಿ ಹಾಗೂ ಬಡ್ಡಿ ಸಾಲ ಮಾಡಿ ಹೂವು, ಹಣ್ಣು, ತರಕಾರಿ, ಎಳನೀರು ಹಾಗೂ ಏಗ್ ರೈಸ್ ಅಂಗಡಿಗಳನ್ನು ನಡಸಿಕೊಂಡು ತುತ್ತು ಅನ್ನಕ್ಕೆ ದಾರಿ ಮಾಡಿಕೊಂಡಿದ್ದೇವೆ.
ಈಗ ಪುರಸಭೆ ಹಾಗೂ ತಹಸೀಲ್ದಾರ್ ಕಚೇರಿಯಿಂದ ಯಾವುದೇ ನೋಟಿಸ್ ನೀಡದೆ ಅಂಗಡಿಗಳನ್ನು ತೆರವುಗೊಳಿಸಿದರೆ ಸಾಲ ಮಾಡಿ ತಂದಿರುವ ಹೂವು, ಹಣ್ಣು, ತರಕಾರಿ ಹಾಳಾಗಿ ಸಾಲದ ಹೊರೆ ನಮ್ಮ ಮೈಮೇಲೆ ಬೀಳುವುದರ ಜತೆಗೆ ಮಾಡಿದ ಸಾಲವನ್ನು ತೀರಿಸುವುದು ಹೇಗೆ? ವ್ಯಾಪಾರ, ವಹಿವಾಟು ನಡೆಸುತ್ತಿರುವ ನಮ್ಮ ಮೇಲೆ ಗದಾ ಪ್ರಹಾರ ಮಾಡಿದರೆ ಎಷ್ಟು ಸರಿ, ಪಟ್ಟಣದಲ್ಲಿ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿಲ್ಲ ಹೊರತಾಗಿ ನ್ಯಾಯಯುತವಾಗಿ ದುಡಿದು ತಿನ್ನುತ್ತಿದ್ದೇವೆ.
ನಮಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನೆಗೆ ಮುಂದಾದರು. ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಬೀದಿ ಬದಿ ವ್ಯಾಪಾರಸ್ಥರ ಅಹವಾಲು ಆಲಿಸಿ, ಮನವಿ ಸ್ವೀಕರಿಸಿದ ಬಳಿಕ ಮಾತನಾಡಿ, ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟು ನಡೆಸಲು ಪರ್ಯಾಯ ಸ್ಥಳ ಹಾಗೂ ವ್ಯವಸ್ಥೆ ಮಾಡಿಕೊಡಲು ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿದ ಬಳಿಕ ವಿವಿಧ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ಜತೆಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಸಮಸ್ಯೆ ಪರಿಹಾರ ಕಲ್ಪಿಸಲು ಕ್ರಮ: ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಬೀದಿ ಬದಿ ವ್ಯಾಪಾರ ಮಾಡದ ಕೆಲವರು ಅಂಗಡಿಗಳಿಗೆ ಬಾಡಿಗೆ ನೀಡಿದ್ದರೆ ಇತ್ತ ಕೆಲ ಬೀದಿ ಬದಿ ವ್ಯಾಪಾರಸ್ಥರು ಸಹ ತಮ್ಮ ಅಂಗಡಿಗಳ ಪಕ್ಕದಲ್ಲಿನ ಜಾಗದಲ್ಲಿ ಕುಳಿತುಕೊಳ್ಳುವ ವ್ಯಾಪಾರಸ್ಥರಿಂದ ಬಾಡಿಗೆ ಹಣವನ್ನು ವಸೂಲಿ ಮಾಡುತ್ತಿದ್ದರು ಎಂಬ ದೂರುಗಳು ಕೇಳಿ ಬಂದಿದ್ದು ಒಂದೆಡೆಯಾದರೆ ಸುಗಮ ಸಂಚಾರ ಗಗನ ಕುಸಮದಂತಾಗಿ ಗ್ರಾಹಕರು, ವಾಹನ ಸವಾರರೊಂದಿಗೆ ಕೆಲ ಬೀದಿ ಬದಿ ವ್ಯಾಪಾರಸ್ಥರ ವಾಗ್ವಾದ ಸಾಮಾನ್ಯ ಎಂಬಂತಾಗಿದ್ದವು. ಹೀಗಾಗಿ ಸುದೀರ್ಘ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ನಿದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಪಟ್ಟಣದ ಬೀದಿ ಬದಿ ಅಂಗಡಿಗಳ ತೆರವು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ಧೋರಣೆಗೆ ಇಳಿದ್ದಾರೆಯೇ ಎಂಬ ಪ್ರಶ್ನೆ ಈಗ ಜನತೆಗೆ ಕಾಡಲಾರಂಭಿಸಿದೆ. ಏಕೆಂದರೆ ದುರ್ಗಾ ವೃತ್ತದಿಂದ ಹಿಡಿದು ಕುಷ್ಟಗಿ, ರೋಣ ಹಾಗೂ ಬಸ್ ನಿಲ್ದಾಣ ಸಂಪರ್ಕಿಸುವ ರಸ್ತೆಯ ಫುಟ್‌ಪಾತ್‌ನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವ ಅಂಗಡಿಕಾರರು ಪಾದಾಚಾರಿಗಳು ನಡು ರಸ್ತೆಯಲ್ಲಿ ಸಂಚರಿಸುವಂತೆ ಮಾಡಿದ್ದಾರೆ. ಹೀಗಾಗಿ ಶ್ರೀಮತರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯವೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.