ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ನೇತೃತ್ವದ ತಂಡ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ದಿಢೀರ್ ದಾಳಿ ಮಾಡಿ ಕ್ಲಿನಿಕ್ ಮುಚ್ಚಲು ತಾಕೀತು ಮಾಡಿದರು.ತಾಲೂಕಿನ ರಾಂಪುರ, ತಮ್ಮೇನಹಳ್ಳಿ, ಬೊಮ್ಮದೇವರ ಹಳ್ಳಿ, ಕೋನಾಪುರ, ಕರಡಿ ಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕ್ಲಿನಿಕ್ ಗಳ ಮೇಲೆ ದಾಳಿ ಮಾಡಿದರು.
ಆರಂಭದಲ್ಲಿ ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಳ್ಳಿ ಗ್ರಾಮದಲ್ಲಿರುವ ಕ್ಲಿನಿಕ್ ಮೇಲೆ ದಾಳಿ ಮಾಡಿದ ವೇಳೆ ಔಷಧ ಹಾಗೂ ಸಿರಿಂಜ್‌ಗಳ ಕಂಡು ಕುಪಿತಗೊಂಡ ಅಧಿಕಾರಿಗಳು ಯಾವುದೇ ಅನುಮತಿ ಪಡೆಯದೇ ವಿದ್ಯಾರ್ಹತೆ ಇಲ್ಲದೆ ಕ್ಲಿನಿಕ್ ನಡೆಸುತ್ತಾ ಅಮಾಯಕರ ಬದುಕಿನ. ಮೇಲೆ ಆಟವಾಡುತ್ತಿದ್ದೀರಿ. ಕೂಡಲೇ ಕ್ಲಿನಿಕ್ ಮುಚ್ಚಬೇಕೆಂದು ಅಲ್ಲಿನ ನಕಲಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡರು.ಕೋನಾಪುರ ಗ್ರಾಮದಲ್ಲಿದ್ದ ನಕಲಿ ವೈದ್ಯ ರಾಜು ಕ್ಲಿನಿಕ್ ಮೇಲೆ ದಾಳಿಗೂ ಮುನ್ನಾ ಸುಳಿವು ಅರಿತ ನಕಲಿ ವೈದ್ಯ, ಕ್ಲಿನಿ ಮುಚ್ಚಿ ಪರಾರಿಯಾಗಿದ್ದ. ಅಲ್ಲಿದ್ದರಿಗೆ ಕೂಡಲೇ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಲು ತಿಳಿಸುವಂತೆ ಸೂಚನೆ ನೀಡಿದರು.
ಬೊಮ್ಮದೇವರಹಳ್ಳಿಯಲ್ಲಿ ಕ್ಲಿನಿಕ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿಯೇ ದಾಳಿ ನಡೆಸಿದರು. ಯಾವ ಊರು, ನಿನ್ನ ವಿದ್ಯಾರ್ಹತೆ ಏನು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ ಅವರು ಅರ್ಹತೆ ಇಲ್ಲದೆ ವೈದ್ಯ ವೃತ್ತಿ ಮಾಡುತ್ತಿರುವುದು ಕಾನೂನು ಬಾಹಿರ ಸಾರ್ವಜನಿಕರಿಗೆ ಮೋಸ ಮಾಡುತ್ತಾ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಿಯ ಈಗಲೇ ಕ್ಲಿನಿಕ್ ಮುಚ್ಚಲು ಸೂಚಿಸಿದ ಅವರು ಮತ್ತೊಮ್ಮೆ ಬಾಗಿಲು ತೆರೆದರೆ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಾಳಿಯ ಮುನ್ಸೂಚನೆ ಅರಿತ ನಕಲಿ ವೈದ್ಯರು ರಾಂಪುರ, ಕರಡಿ ಹಳ್ಳಿ ಗ್ರಾಮಗಳಲ್ಲಿ ಬಾಗಿಲು ಬಂದ್ ಮಾಡಿ ಮಾಡಿ ಕಾಲ್‌ಕಿತ್ತರು. ಇದರಿಂದ ಕೋಪ ಅಧಿಕಾರಿಗಳ ತಂಡ ನೋಟೀಸ್ ನೀಡಿ ತೆರಳಿದರು.
ಇದೇ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ, ತಾಲೂಕಿನಲ್ಲಿ ಅರ್ಹತೆ ಇಲ್ಲದೆ ಇರುವಂತ ಕೆಲವರು ಕ್ಲಿನಿಕ್ ಇಟ್ಟು ಚಿಕಿತ್ಸೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಕಲಿ ಕ್ಲಿನಿಕ್‌ಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಮತ್ತೊಮ್ಮೆ ಕಂಡು ಬಂದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪಿಎಸ್ಐ ಬಾಹುಬಲಿ, ಹಿರಿಯ ಆರೋಗ್ಯ ನಿರೀಕ್ಷಕ ಗುರುಮೂರ್ತಿ, ಆರೋಗ್ಯ ನಿರೀಕ್ಷಕ ಅನಂತಕುಮಾರ್, ಪೊಲೀಸ್ ಸಿಬ್ಬಂದಿ ಅಶೋಕ್, ಸಿಎಎಚ್ಒ ಹನುಮಂತಪ್ಪ ಇದ್ದರು.