ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ ಪೇಜಾವರ ಮಠದ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ವೇದಾಂತ ಅಧ್ಯಯನ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಅದೃಷ್ಟವೊಂದು ಒದಗಿ ಬಂದಿದೆ. ಅವರು ಈ ವಿಶ್ವವಿಖ್ಯಾತ ರಾಮಮಂದಿರದಲ್ಲಿ ತಮ್ಮ ವಿದ್ವತ್ ಪರೀಕ್ಷೆಯನ್ನು ನೀಡಲಿದ್ದಾರೆ. ಈ ಬಾರಿ ಪೂರ್ಣಪ್ರಜ್ಞಾ ವಿದ್ಯಾಪೀಠದ ಘಟಿಕೋತ್ಸವ ರಾಮಮಂದಿರದಲ್ಲಿ ನಡೆಯುತ್ತಿದೆ. ಪೇಜಾವರ ಶ್ರೀಗಳು ರಾಮಮಂದಿರದಲ್ಲಿಯೇ ಅಖಂಡ 48 ದಿನಗಳ ಕಾಲ ಮಂಡಲೋತ್ಸವವನ್ನು ನಡೆಸುತ್ತಿರುವುದರಿಂದ ತಮ್ಮ ಶಿಷ್ಯರಿಗೆ ವೇದಾಂತ ಪಾಠವನ್ನೂ ಅಲ್ಲಿಯೇ ನಡೆಸುತಿದ್ದಾರೆ. ಈ ವಿದ್ಯಾರ್ಥಿಗಳು 14 ವರ್ಷಗಳ ಕಾಲ ಗುರುಗಳಿಂದ ವೇದಾಂತ ಅಧ್ಯಯನ ಮಾಡುತ್ತಾರೆ. ಮೊದಲ 13 ವರ್ಷಗಳ ಕಾಲ ವಿವಿಧ ವೇದಾಂತ ಗ್ರಂಥಗಳನ್ನು ಅಧ್ಯಯನ ಮಾಡಿ, ನಂತರ ಒಂದು ವರ್ಷ ಶ್ರೀಮನ್ನ್ಯಾಯ ಸುಧಾ ಎಂಬ ಬೃಹತ್ ಗ್ರಂಥವನ್ನು ಅಧ್ಯಯನ ಮಾಡಬೇಕಾಗುತ್ತದೆ. ಈ 14 ವರ್ಷಗಳ ಅಧ್ಯಯನದ ಪರೀಕ್ಷೆಯೇ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವ ಅರ್ಥಾತ್ ಘಟಿಕೋತ್ಸವ. ಈ ಬಾರಿ ಇದು ರಾಮಮಂದಿರದಲ್ಲಿ ನಡೆಯಲಿದೆ. ನೂತನವಾಗಿ ನಿರ್ಮಾಣವಾದ ಭವ್ಯ ರಾಮಮಂದಿರದಲ್ಲಿ ಈ ವಿದ್ಯಾರ್ಥಿಗಳ ಘಟಿಕೋತ್ಸವ ನಡೆಯುತ್ತಿರುವ ವಿಶೇಷವಾಗಿದೆ.
-------ರಾಮಮಂದಿರದ ಅರ್ಚಕ ತಿವಾರಿಗೆ ಪೇಜಾವರ ಶ್ರೀಗಳಿಂದ ಸಂಮಾನ
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಮೊದಲು ರಾಮಲಲ್ಲಾನ ಪೂಜೆ ಮಾಡುತ್ತಿದ್ದ ಅರ್ಚಕರಲ್ಲಿ ಓರ್ವರಾದ ಸಂತೋಷ್ ತಿವಾರಿ ಅವರು ಸೋಮವಾರ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಭೇಟಿಯಾಗಿದ್ದರು.1992ರಲ್ಲಿ ವಿವಾದಿತ ಕಟ್ಟಡ ಉರುಳಿದ ಬಳಿಕ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ತಾತ್ಕಾಲಿಕ ಕುಟೀರದಲ್ಲಿ ರಾತೋರಾತ್ರಿ ರಾಮಲಲ್ಲಾನ ಪ್ರತಿಷ್ಠಾಪನೆಯಾದ ಬಳಿಕ 42 ವರ್ಷಗಳ ಕಾಲ ರಾಮನ ನಿತ್ಯ ಪೂಜೆ ನಡೆಸಿದ್ದ ಮತ್ತು ನೂತನ ಮಂದಿರದಲ್ಲಿ ಶ್ರೀ ಬಾಲರಾಮನ ಪ್ರತಿಷ್ಠಾಪನೆಯಾದ ಬಳಿಕವೂ ಅರ್ಚಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದ ಭಾಗ್ಯಶಾಲಿ ತಿವಾರಿಯವರು.ಅವರು ಪೇಜಾವರ ಶ್ರೀಗಳ ಭೇಟಿಯ ಸಂದರ್ಭದಲ್ಲಿ ಆ ಎಲ್ಲ ಅವಧಿಯ ಸೇವೆಯನ್ನು ಸ್ಮರಸಿಕೊಂಡು ಭಾವುಕರಾದರು. ಶ್ರೀಗಳೂ ಅವರನ್ನು ಸಂಮಾನಿಸಿ ಆಶೀರ್ವದಿಸಿದರು.