ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಂಸದ ಡಾ.ಕೆ.ಸುಧಾಕರ್ ಅವರು ಶುಕ್ರವಾರ ಪ್ರಧಾನಿ ಫಸಲ್ ಭಿಮಾ ಯೋಜನೆಯ ಫಲಾನುಭವಿಗಳ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು.ಅಕಾಲಿಕ ಆಲಿಕಲ್ಲು ಮಳೆಗೆ ಹಾನಿಗೀಡಾದ ದ್ರಾಕ್ಷಿ ತೋಟಗಳಿಗೆ ಮತ್ತು ಕುಸುಮ್ ಸಿ ಯೋಜನೆಯಡಿಯಲ್ಲಿ ನಿರ್ಮಾಣ ಸೌರ ವಿದ್ಯುತ್ ಘಟಕ (19.7 ಮೆ.ವ್ಯಾ) ಸ್ಥಾವರಕ್ಕೆ ಭೇಟಿ ರೈತರೊಂದಿಗೆ ಸಂವಾದ ನಡೆಸಿದರು.
ತಾಲೂಕಿನ ಕೊತ್ತನೂರು ಗ್ರಾಮದ ಯಶ್ವಂತ್‌ರ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿ, ಅಲ್ಲಿಯ ರೈತರೊಂದಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಫಸಲ್ ಭಿಮಾ ಯೋಜನೆಯ ಬಗ್ಗೆ ತಿಳಿಸಿದರು.ದಿಬ್ಬೂರು ಗ್ರಾಮದಲ್ಲಿ ಆಕಾಲಿಕ ಆಲಿ ಕಲ್ಲು ಮಳೆ ಬಿದ್ದು ಹಾನಿಯಾಗಿದ್ದ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ, ಬೆಳೆ ಹಾನಿಗೊಳಗಾದ ಪಾಪೇಗೌಡ, ಮೋಹನ್, ರಮೇಶ್, ವೆಂಕಟೇಶ್, ಚಂದ್ರಪ್ಪ ಮತ್ತು ಡಾ. ಪಾಪೇಗೌಡ ಅವರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರಕ್ಕೆ ಕೊಡಿಸುವ ಭರವಸೆ ನೀಡಿದರು.
ಮಂಚೇನಹಳ್ಳಿ ತಾಲೂಕಿನ ತೊಂಡೇಬಾವಿ, ಗೌರಿಬಿದನೂರು ತಾಲೂಕಿನ ಚರಕಮಟ್ಟನಹಳ್ಳಿ ಗ್ರಾಮಗಳಲ್ಲಿ ಕುಸುಮ್ ಸಿ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಸೌರ ವಿದ್ಯುತ್ ಘಟಕ (19.7 ಮೆ.ವ್ಯಾ) ಸ್ಥಾವರಕ್ಕೆ ಭೇಟಿ ರೈತರೊಂದಿಗೆ ಸಂವಾದ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾಸ್ ಮತ್ತು ತೈಲ ನಮ್ಮ ದೇಶದಲ್ಲಿ ಉತ್ಪಾದನೆಯಾಗುವುದಿಲ್ಲ. ಇದನ್ನು ಆಮದು ಮಾಡಿಕೊಳ್ಳಬೇಕು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ 145 ಕೋಟಿ ಜನಸಂಖ್ಯೆ ಇದ್ದು ಎಲ್ಲರಿಗೂ ಗ್ಯಾಸ್ ದೊರೆಯುತ್ತಿರುವುದು ಸಂತಸದ ವಿಷಯವಾಗಿದೆ. ಭಾರತದ 145 ಕೋಟಿ ಜನರಲ್ಲಿ ಅಲ್ಪಸ್ವಲ್ಪ ಜನರಿಗೆ ಗ್ಯಾಸ್ ಮತ್ತು ಪೆಟ್ರೋಲ್ ಅಭಾವದಿಂದ ತೊಂದರೆ ಆಗಿರಬಹುದು. ಆದರೆ ಸಂಪೂರ್ಣ ಯಾರಿಗೂ ಸಂಕಷ್ಟ ಒದಗಿ ಬಂದಿರುವುದಿಲ್ಲ. ವಿಶ್ವದ ಎಲ್ಲೆಡೆ ಗ್ಯಾಸ್ ಮತ್ತು ಪೆಟ್ರೋಲ್‌ಗೆ ಅಭಾವವಿದ್ದು ದರಗಳು ಸಹ ಹೆಚ್ಚಾಗಿ ಇವೆ. ಆದರೆ ಭಾರತದಲ್ಲಿ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಸುಂಕವನ್ನು 10 ರು.ಗಳ ಇಳಿಕೆ ಮಾಡಿರುವಂತಹ ಹೆಗ್ಗಳಿಕೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಸಲ್ಲುತ್ತದೆ. ಪಕ್ಕದ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 400 ರೂಪಾಯಿಗಳು ಇದ್ದು, ವಿಶ್ವದ ಎಲ್ಲೆಡೆಯೂ ಬೆಲೆ ಏರಿಕೆ ಮಾಡಲಾಗಿದೆ ಎಂದರು.
ತಾಲೂಕಿನ ಕೊತ್ತನೂರು ಗ್ರಾಮದಲ್ಲಿ ಫಸಲ್ ಭೀಮಾ ಯೋಜನೆಯಿಂದ ಯಶ್ವಂತ್ ಅವರು 75,000 ರು.ಗಳನ್ನು ಪಡೆದಿದ್ದರೆ ಅವರ ತಂದೆಯವರು 5 ಲಕ್ಷ 75,000 ರು. ವರೆಗೂ ಪಸಲ್ ಭೀಮಾ ಯೋಜನೆಯಿಂದ ಹಣ ಪಡೆದಿರುತ್ತಾರೆ. ಇಷ್ಟು ದಿನ ಮನುಷ್ಯನಿಗೆ ಮಾತ್ರ ವಿಮೆ ಇತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಬೆಳೆಗಳಿಗೂ ವಿಮೆ ವಿಮೆ ಮಾಡಿಸಿ ಅವರನ್ನು ಆರ್ಥಿಕವಾಗಿ ಸಬಲರಾಗುವ ಉದ್ದೇಶದಿಂದ ಫಸಲ್ ಭೀಮಾ ಯೋಜನೆ ಜಾರಿಗೆ ತಂದರು. ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗುವುದಲ್ಲದೆ ಅವರ ಆದಾಯ ದ್ವಿಗುಣಗೊಳಿಸುವ ಆಗಬೇಕು ಎಂಬುದು ಮೂಲ ಉದ್ದೇಶವಾಗಿತ್ತು ಎಂದರು.ಚಿಕ್ಕಬಳ್ಳಾಪುರದ ರೈತರು ಸಾಕಷ್ಟು ಶ್ರಮಜೀವಿಗಳಾಗಿದ್ದು, ಈ ಭಾಗದಲ್ಲಿ ಹಿಂದೆ ಹನಿ ಹನಿ ಹನಿ ನೀರಿಗೂ ತತ್ವಾರ ಇತ್ತು. ಆಗ ಸಾವಿರಾರು ಅಡಿಗಳಿಂದ ನೀರು ತೆಗೆದು ಬೆಳೆ ಇಡುತ್ತಿದ್ದರು. ರೈತರಿಗೆ ಹನಿ ನೀರಾವರಿಯಲ್ಲಿ ಶೇಕಡ 50 ರಷ್ಟು ಸಬ್ಸಿಡಿಯನ್ನು ಮತ್ತು ಕೃಷಿ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 6,000 ರು.ಗಳನ್ನು, ರಸಗೊಬ್ಬರಗಳ ಮೇಲೆ ಸಬ್ಸಿಡಿಯನ್ನು ಕೇಂದ್ರವೇ ಭರಿಸಿ ಮೊದಲಿನ ದರಕ್ಕೆ ನೀಡುತ್ತಿದೆ ಎಂದರು.
ಪ್ರಧಾನ ಮಂತ್ರಿ ಕುಸುಮ್ ಸಿ ಯೋಜನೆಯಡಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಿ ಅದರಿಂದ ವಿದ್ಯುತ್ ಉತ್ಪಾದಿಸಿ ರೈತರು ಸ್ವಾವಲಂಬಿಗಳಾಗಲು ವ್ಯವಸ್ಥೆ ಮಾಡಿದ್ದಾರೆ, ಒಂದು ರೀತಿ ಹಿಂದೆ ವಿದ್ಯುತ್‌ಗಾಗಿ ಪರದಾಡುತ್ತಿದ್ದ ರೈತರು ಈಗ ತಾವೇ ವಿದ್ಯುತ್ ಅನ್ನು ಸೌರಶಕ್ತಿಯ ಮೂಲಕ ಉತ್ಪಾದಿಸಿ ಬಳಸಿ, ತಮ್ಮ ಬಳಕೆಗಾದ ನಂತರ ಉಳಿಕೆ ವಿದ್ಯುತ್ತನ್ನು ಸರ್ಕಾರಕ್ಕೆ ಮಾರುವಂತೆ ಯೋಜನೆ ಇದಾಗಿದೆ. ಇದರಿಂದ ರೈತರು ಉದ್ಯಮಿಗಳ ಉದ್ಯಮಿಗಳಾಗಿದ್ದಾರೆ. ರೈತರು ಜಮೀನುಗಳಿಗೆ ನೀರು ಕಟ್ಟಲು ರಾತ್ರಿ ವೇಳೆ ಹೋಗುತ್ತಿದ್ದಾಗ ಹಾವಿನ ಕಡಿತಕ್ಕೆ ಬಲಿಯಾಗಿ ಸಾಕಷ್ಟು ಮಂದಿ ಮರಣ ಹೊಂದಿದ್ದು ಅವರನ್ನು ಮರಣದಿಂದ ತಪ್ಪಿಸಲು ಈಗ ಹಗಲಿನಲ್ಲಿಯ ವಿದ್ಯುತ್ ನೀಡುವಂತಹ ಯೋಜನೆಯನ್ನು ನಮ್ಮ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದರು.ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಚಿಮೂಲ್ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ನಂದಿ ಮುನಿಸ್ವಾಮಿ, ಮುನಿನಂಜಪ್ಪ, ಗಿರೀಶ್ ಗರಿಗಿರೆಡ್ಡಿ, ಸತೀಶ್, ಯಶ್ವಂತ್, ಲಿಂಗಾರೆಡ್ಡಿ, ಮುನಿರೆಡ್ಡಿ, ಪ್ರಭಾಕರ್, ಆನಂದ್, ಮತ್ತಿತರರು ಇದ್ದರು.
ಸಿಕೆಬಿ-3 ತಾಲೂಕಿನ ಕೊತ್ತನೂರು ಗ್ರಾಮದ ಯಶ್ವಂತ್ ರ ದ್ರಾಕ್ಷಿ ತೋಟಕ್ಕೆ ಸಂಸದ ಡಾ.ಕೆ.ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.