ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಐಮಂಗಲ ಹೋಬಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಯಿಂದ ಪರೀಕ್ಷಾರ್ಥವಾಗಿ ನೀರು ಹರಿಸುವ ಮಾರ್ಗ ಮಧ್ಯದಲ್ಲಿ ಭರಂಪುರ ಗ್ರಾಮದ ಹಳ್ಳಕ್ಕೆ ನೀರು ಹರಿಸಬೇಕೆಂದು ಐಮಂಗಲ ಹೋಬಳಿ ನೀರಾವರಿ ಹೋರಾಟ ಸಮಿತಿಯವರು ಗ್ರಾಮದ ಕಲ್ಕುಂಟೆ ಕರಿಯಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸ್ಥಳಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರೈತರಿಗೆ ಅನುಕೂಲವಾಗುವಂತಹ ಕೆರೆ ತುಂಬಿಸುವ ಯೋಜನೆಯನ್ನು ಅತಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.ಭದ್ರಾ ಮೇಲ್ದಂಡೆ ಯೋಜನೆಯ ಕನಸು ಕೇವಲ ಚಿತ್ರದುರ್ಗ ಕ್ಷೇತ್ರದ ಕನಸಲ್ಲ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮತದಾರರ ಕನಸಾಗಿದೆ. ಈ ಕನಸನ್ನು ನನಸು ಮಾಡುವಂತಹ ದಿನಗಳು ಕೆಲವೇ ದಿನಗಳು ಉಳಿದಿವೆ. ಐಮಂಗಲ ಭಾಗದ ಕೆರೆಗಳನ್ನು ಸಹ ತುಂಬಿಸುವುದಕ್ಕೆ ಸರ್ಕಾರದಿಂದ ಅನುಮೋದನೆಯನ್ನು ತರುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.ಅತಿ ಶೀಘ್ರದಲ್ಲಿ ಕೆಲಸವನ್ನು ಮುಗಿಸಿ ಕಾಲುವೆಯ ಮುಖಾಂತರ ನೀರನ್ನು ಹರಿಸುವ ಕೆಲಸವನ್ನು ಮಾಡಲಾಗುವುದು. ಐಮಂಗಲ ಹೋಬಳಿಯ ರೈತರಿಗೂ ಸಹ ಇದರ ಸದುಪಯೋಗ ಆಗಲಿದೆ. ಮುಖ್ಯವಾಗಿ ಕೆರೆಗಳಿಗೆ ನೀರು ತುಂಬಿಸುವಂತಹ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ನಂತರದ ದಿನಗಳಲ್ಲಿ ರೈತರ ಹೊಲಗಳಿಗೆ ಪೈಪ್‌ಲೈನ್ ಕಾಮಗಾರಿ ಸಹ ಮಾಡಲಾಗುವುದು ಎಂದರು.
ಐಮಂಗಲ ಹೋಬಳಿ ನೀರಾವರಿ ಹೋರಾಟ ಸಮಿತಿ ಕಾರ್ಯದರ್ಶಿ ಯಶವಂತರಾಜ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಕಾಲುವೆಯ ಕಣಿವೆ ಕೆರೆಹಳ್ಳ ಮಾರ್ಗವಾಗಿ ಭರಂಪುರ ಗ್ರಾಮದ ಮುಖಾಂತರ ಹಲವು ಹಳ್ಳಿಗಳಾದ ಭರಂಪುರ, ಕೆ.ಸಿ.ರೊಪ್ಪ, ಆದಿರಾಳು, ಸಿ.ಎನ್ ಮಾಳಿಗೆ, ಹುಲಿತೊಟ್ಟಿಲು, ಸೂರಗೊಂಡನಹಳ್ಳಿ, ತವಂದಿ ಕೆರೆಯವರೆಗೂ ಮುಖ್ಯ ಹಳ್ಳದ ಮಾರ್ಗವಾಗಿರುತ್ತದೆ. ಈ ಮುಖ್ಯ ಹಳ್ಳದ ಮಾರ್ಗವಾಗಿ ನೀರು ಹರಿಸಲು ತುರ್ತಾಗಿ ಜಾರಿಗೊಳಿಸಬೇಕು ಎಂದರು.ಈ ಸಂದರ್ಭದಲ್ಲಿ ಐಮಂಗಲ ಹೋಬಳಿಯ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ತಿಪ್ಪೀರಣ್ಣ, ಉಪಾಧ್ಯಕ್ಷ ಎಚ್ ಸಿ ಕಾಂತರಾಜ್, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಶಿವಣ್ಣ, ರೈತ ಮುಖಂಡರಾದ ಮೋಹನ್, ತಿಪ್ಪೇಸ್ವಾಮಿ, ಮಹೇಶ್, ಅಂಜನಪ್ಪ, ಕೃಷ್ಣಪ್ಪ, ವೀರಣ್ಣ, ಶಾಂತಣ್ಣ, ಮನು, ಸಿದ್ದಪ್ಪ, ರಂಗಸ್ವಾಮಿ, ಮಹೇಶ್, ಗುರು, ಸಿದ್ದಪ್ಪ, ಅರವಿಂದ್, ಸಿಂದೂರ್, ಆನಂದ್, ಗುರುರಾಜ್, ಹನುಮಂತರೆಡ್ಡಿ, ಪಾಪಯ್ಯ, ಯತೀಶ್ ಮುಂತಾದವರು ಹಾಜರಿದ್ದರು.
ಚಿತ್ರದುರ್ಗ ಬ್ರಾಂಚ್ ಕೆನಲ್‌ಗೆ ಸಧಾಕರ್ ಹೆಸರಿಡಲು ಒತ್ತಾಯ
ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಬೇಕೆಂದು ಸಚಿವ ಡಿ.ಸುಧಾಕರ್ ಅವರ ಶ್ರಮ ಸಾಕಷ್ಟು ಇದೆ.ಇದರ ಸಲುವಾಗಿ ಸಾಕಷ್ಟು ಅಧಿಕಾರಿಗಳ ಸಭೆ ನಡೆಸಿ ಮುಖ್ಯಮಂತ್ರಿಗಳನ್ನು ಹಲವು ಬಾರಿ ಭೇಟಿ ಮಾಡಿ ಯೋಜನೆಯ ಬಗ್ಗೆ ಗಮನ ಸೆಳೆದಿದ್ದಾರೆ. ಜಿಲ್ಲೆಗೆ ಭದ್ರಾ ನೀರು ಬರುವುದಕ್ಕೆ ಕಾರಣೀಭೂತರಾಗಿದ್ದಾರೆ. ಹಿರಿಯೂರು ಭಾಗಗಳಲ್ಲಿನ ಕೆರೆಗಳಿಗೆ ಭದ್ರಾ ನೀರು ಹರಿಸುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಹಾಗಾಗಿ ಅವರ ಹೆಸರು ಶಾಶ್ವತವಾಗಿ ಉಳಿಯಬೇಕಾದರೆ ಚಿತ್ರದುರ್ಗ ಬ್ರಾಂಚ್ ಕೆನಲ್‌ಗೆ ಅವರ ಹೆಸರನ್ನೇ ನಾಮಕರಣ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಅವರು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರಿಗೆ ಮನವಿ ಮಾಡಿದ್ದಾರೆ.