ಒಬ್ಬರೇ ಸಾಧಕರಿಗೆ ಒಂದಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ನೀಡುವುದು ಸೇರಿದಂತೆ ಗೌರವ ಪದವಿ ಕೊಡುವಾಗ ಯಾವುದೇ ಅಭಾಸಗಳನ್ನು ತಪ್ಪಿಸಲು ಏಪರೂಪ ಮಾನದಂಡ ಹಾಗೂ ಮಾರ್ಗಸೂಚಿಗಳನ್ನು ರೂಪಿಸುವ ತಜ್ಞರ ಸಮಿತಿ ರಚಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರಿಗೆ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಪ್ರತೀ ವರ್ಷ ಘಟಿಕೋತ್ಸವದಲ್ಲಿ ಗೌರವ ಪದವಿಗಳನ್ನು ನಿಯಮಾನುಸಾರ ನೀಡುವ ಅಧಿಕಾರ ರಾಜ್ಯದ ವಿಶ್ವವಿದ್ಯಾಲಯಗಳಿಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈಗಾಗಲೇ ಒಂದು ವಿವಿಯಿಂದ ಗೌರವ ಪದವಿಗೆ ಭಾಜನರಾಗಿರುವ ಸಾಧಕರನ್ನೇ ಬೇರೆ ಬೇರೆ ವಿವಿಗಳು ಮತ್ತೆ ತಮ್ಮ ಗೌರವ ಪದವಿಗೆ ಆಯ್ಕೆ ಮಾಡುವುದು ಅಥವಾ ಒಬ್ಬರೇ ವ್ಯಕ್ತಿಗೆ ಹಲವು ವಿವಿಗಳು ಗೌರವ ಡಾಕ್ಟರೇಟ್‌ ನೀಡಿರುವುದು ಕಂಡುಬರುತ್ತಿದ. ಇದು ಸಾರ್ವಜನಿಕ ವಲಯದಲ್ಲಿ ಹಾಗೂ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ. ಗೌರವ ಪದವಿ ನೀಡಲು ಇರುವ ಹಾಲಿ ಮಾನದಂಡಗಳು ಮತ್ತು ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಇವುಗಳನ್ನು ಪರಿಷ್ಕರಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ, ಗೌರವ ಪದವಿಗಳ ಘನತೆ, ವಿಶ್ವಾಸಾರ್ಹತೆ ಮತ್ತು ಪಾವಿತ್ರ್ಯವನ್ನು ಹೆಚ್ಚಿಸುವ ಸಲುವಾಗಿ ರಾಜ್ಯದ ಎಲ್ಲಾ ಸಾರ್ವಜನಿಕ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಮಾನದಂಡಗಳ ಶಿಫಾರಸು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ತಜ್ಞರ ಸಮಿತಿ ರಚಿಸಿ ಆದೇಶ ಮಾಡುವಂತೆ ಕೋರಿದ್ದಾರೆ.