ಕೊಪ್ಪ: ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸುಧಾಕರ್ ಎಸ್.ಶೆಟ್ಟಿ ನೇಮಕವಾಗಿದ್ದಾರೆ.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅವರನ್ನು ನೇಮಕ ಮಾಡಿ ಆದೇಶಹೊರಡಿಸಿದ್ದಾರೆ.ಲೋಕಸಭಾ ಬಜೆಟ್ ಅಧಿವೇಶನದ ಪೂರ್ವಭಾವಿಯಾಗಿ, ಎನ್‌ಡಿಎ ಸಹಭಾಗಿತ್ವದಲ್ಲಿ ನಡೆದ ರಾಷ್ಟ್ರಮಟ್ಟದ ವಕ್ತಾರರ ವಿಚಾರ ಸಂಕಿರಣದಲ್ಲಿ ಸುಧಾಕರ್ ಶೆಟ್ಟಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರೊಂದಿಗೆ ಸಂವಾದ ನಡೆಯಿತು. ಸಭೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕರ್ತವ್ಯ, ಆರ್ಥಿಕ ನೀತಿ ಗಳು, ಸಾಮಾಜಿಕ ಸ್ಥಿತಿಗತಿ ಮತ್ತು ರೈತರ ಸಮಸ್ಯೆಗಳ ಕುರಿತು ಸುಧಾಕರ್ ಶೆಟ್ಟಿ ಸಮಗ್ರ ಹಾಗೂ ಆಳವಾದ ವಿಶ್ಲೇಷಣೆ ಮಂಡಿಸಿದ್ದರು. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ , ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಲಹೆ ಮೇರೆಗೆ ಸುಧಾಕರ್ ಎಸ್. ಶೆಟ್ಟಿ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡಿದ್ದಾರೆ.ಎಚ್.ಜಿ. ವೆಂಕಟೇಶ್ ಈ ಕುರಿತು ಮಾತನಾಡಿ ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಸುಧಾಕರ್ ಶೆಟ್ಟಿ ದುಡಿಯುತ್ತಿದ್ದಾರೆ ಎಂದು ಪ್ರಶಂಸಿಸಿದರು. ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮಸ್‌ ನಂತಹ ಪ್ರತಿಷ್ಠಿತ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಸುಮಾರು ೨೭ ರಾಷ್ಟ್ರಗಳ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಅನುಭವ ಅವರಿಗೆ ಇದೆ. ರಾಜ್ಯ ಮತ್ತು ರಾಷ್ಟ್ರದ ಆರ್ಥಿಕ, ಸಾಮಾಜಿಕ ಹಾಗೂ ರೈತರ ಸಮಸ್ಯೆಗಳ ಕುರಿತು ವಿಶಾಲ ಅರಿವು ಹೊಂದಿದ್ದಾರೆ ಎಂದರು.ಜೆಡಿಎಸ್ ಪಕ್ಷದ ಕ್ಷೇತ್ರಾಧ್ಯಕ್ಷ ದಿವಾಕರ್‌ಭಟ್ ಮಾತನಾಡಿ, ಇಂದು ಜೆಡಿಎಸ್ ಪಕ್ಷ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಮಾ ನಾಂತರವಾಗಿ ಸ್ಪರ್ಧೆ ನೀಡುವ ಮಟ್ಟಕ್ಕೆ ಬೆಳೆದಿರುವುದಕ್ಕೆ ಸುಧಾಕರ್ ಶೆಟ್ಟಿ ಕೊಡುಗೆ ಮಹತ್ವದ್ದಾಗಿದೆ. ಸುಮಾರು ೫೦ ವರ್ಷಗಳ ರಾಜಕೀಯ ಹಾಗೂ ಸಾಮಾಜಿಕ ಅನುಭವ ಜೆಡಿಎಸ್ ಪಕ್ಷದ ಸಂಘಟನೆ ಇನ್ನಷ್ಟು ಬಲಪಡಿಸಲು ಸಹಕಾರಿ ಯಾಗಲಿದೆ ಎಂದರು.ಶೃಂಗೇರಿ ಕ್ಷೇತ್ರದ ಎಲ್ಲ ಪಕ್ಷದ ಮುಖಂಡರು ಸುಧಾಕರ್ ಶೆಟ್ಟಿ ಅವರನ್ನು ಆಭಿನಂದಿಸಿದರು.