ಸಾರಾಂಶ
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಸಿಡಿಸಿಸಿ)ಗೆ ಗುರುವಾರ ನಡೆದ ಚುನಾವಣೆಯಲ್ಲಿ ಸಚಿವ ಡಿ. ಸುಧಾಕರ್ ನೇತೃತ್ವದ ಟೀಂ ಮತ್ತೆ ಆಧಿಪತ್ಯ ಸ್ಥಾಪಿಸಿದೆ. ಬ್ಯಾಂಕ್ ನ ಹಾಲಿ ಅಧ್ಯಕ್ಷ ಡಿ. ಸುಧಾಕರ್ ಮತ್ತೆ ಮುಂದಿನ ಐದು ವರ್ಷಗಳಿಗೆ ಅಧ್ಯಕ್ಷರಾಗಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.
ಡಿಸಿಸಿ ಬ್ಯಾಂಕಿನ 12 ನಿರ್ದೇಶಕರ ಸ್ಥಾನಗಳಿಗಾಗಿ ಚುನಾವಣೆ ನಡೆದಿದ್ದು ತೀವ್ರ ಕುತೂಹಲ ಹಾಗೂ ಪೈಪೋಟಿ ಏರ್ಪಟ್ಟಿತ್ತು. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಚುನಾವಣೆಗೆ ಎಂಟ್ರಿಯಾಗಿದ್ದರಿಂದ ಸಹಜವಾಗಿಯೇ ಬಿರುಸು ಪಡೆಯಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಅವರು ಸ್ಪರ್ಧಿಸುತ್ತಿದ್ದ ಸಹಕಾರ ಸಂಘ ಅನರ್ಹವಾದ್ದರಿಂದ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ತಿರಸ್ಕೃತ ಮಾಡಿದ್ದರು.
ಹಾಗಾಗಿ ಸುಧಾಕರ್ ಗುಂಪಿನ ಗೆಲವಿನ ಓಟ ಮುಂದುವರೆದಿದೆ. ಸಿಡಿಸಿಸಿ ಬ್ಯಾಂಕ್ ನ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡಿ. ಸುಧಾಕರ್, ಎಸ್.ಆರ್. ಗಿರೀಶ್(ಹೊಳಲ್ಕೆರೆ), ಓ. ಮಂಜುನಾಥ್(ಹಿರಿಯೂರು), ಎಚ್.ಬಿ. ಮಂಜುನಾಥ್(ಹೊಸದುರ್ಗ) ಕೆ. ಜಗಣ್ಣ(ಚಳ್ಳಕೆರೆ), ರಘುರಾಮರೆಡ್ಡಿ(ಚಿತ್ರದುರ್ಗ), ಪಿ. ತಿಪ್ಪೇಸಾಮಿ ಸಿರಿಗೆರೆ(ಚಿತ್ರದುರ್ಗ), ಎಚ್.ಎಂ. ದ್ಯಾಮಣ್ಣ(ಚಿತ್ರದುರ್ಗ), ಕೆ. ಅನಂತ್ (ಹೊಸದುರ್ಗ), ಎಚ್.ಟಿ. ನಾಗರೆಡ್ಡಿ(ಮೊಳಕಾಲ್ಕೂರು), ಪಿ. ವಿನೋದಸ್ವಾಮಿ(ಚಳ್ಳಕೆರೆ), ಎಂ. ನಿಶಾನಿ ಜಯಣ್ಣ(ಚಿತ್ರದುರ್ಗ) ಆಯ್ಕೆಯಾಗಿದ್ದಾರೆ. 12 ಮಂದಿ ನಿರ್ದೇಶಕರು ಮತ್ತು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಮಾತ್ರ ಇನ್ನೂ ಬಾಕಿ ಇದೆ.