ಇಲ್ಲಿಯ ಕಾರ್ಖಾನೆಗಳ ಮಾಲೀಕರು ಪಕ್ಕದ ಬೆಳಗಾವಿ ಭಾಗದಲ್ಲೇ ಇದ್ದರೂ ಅಲ್ಲಿನ ದರ ಮಾದರಿಯನ್ನು ಇಲ್ಲೇಕೆ ಅನುಸರಿಸುತ್ತಿಲ್ಲ? ಕಬ್ಬಿನ ರಿಕವರಿ ಪ್ರಮಾಣದ ಲೆಕ್ಕಾಚಾರದಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ.

ಬಂಕಾಪುರ(ಹಾವೇರಿ): ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹3,600 ದರ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಬಂಕಾಪುರ ಟೋಲ್ ಬಳಿ ರಸ್ತೆ ಸಂಚಾರ ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ಬೇರೆ-ಬೇರೆ ಜಿಲ್ಲೆಯ ಕಾರ್ಖಾನೆಗಳು ₹3,500 ಮೇಲ್ಪಟ್ಟು ದರ ನೀಡಲು ಮುಂದಾಗಿವೆ. ಉತ್ತರ ಕರ್ನಾಟಕ ಭಾಗದಲ್ಲಿರುವ ಹಾವೇರಿ ಜಿಲ್ಲೆಯ ಕಾರ್ಖಾನೆಗಳು ಮಾತ್ರ ರೈತರಿಗೆ ಸರಿಯಾದ ಬೆಲೆ ನಿಗದಿಪಡಿಸುತ್ತಿಲ್ಲ, ಜಿಲ್ಲೆಯ ರೈತರಿಗೆ ₹3,600 ದರ ನೀಡಲೇಬೇಕು ಎಂದು ರೈತರು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಮನೆಮುಂದೆ ಧರಣಿ ನಡೆಸಲು ರೈತರು ಸಜ್ಜಾಗಿದ್ದರು. ಆದರೆ, ಸಚಿವರ ಮನೆ ಸುತ್ತ-ಮುತ್ತ 250 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಹೊರಡಿಸಿದ್ದರಿಂದ ಪ್ರತಿಭಟನೆಯನ್ನು ಬಂಕಾಪುರ್ ಟೋಲ್‌ಗೆ ಸ್ಥಳಾಂತರಿಸಲಾಯಿತು. ಮಧ್ಯಾಹ್ನದ ವರೆಗೂ ಟೋಲ್ ಪಕ್ಕದಲ್ಲಿ ಪ್ರತಿಭಟಿಸಿದ ರೈತರು, ಮಧ್ಯಾಹ್ನದ ಬಳಿಕ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ₹3,600 ದರ ಘೋಷಿಸುವ ವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದ ರೈತರು, ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚೂನ್ನಪ್ಪ ಪೂಜಾರಿ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಬ್ಬಿನ ದರ ಘೋಷಣೆಯಾಗಿದೆ. ಬೆಳಗಾವಿಯಲ್ಲಿ ಪ್ರತಿ ಟನ್‌ಗೆ ₹3,800 ದರ ನೀಡಲಾಗಿದೆ. ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಭಾಗದ ರೈತರು ಹೋರಾಟದ ಮೂಲಕ ದರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹಾವೇರಿ ಜಿಲ್ಲೆಯ ಕಾರ್ಖಾನೆ ಮಾಲೀಕರಿಗೆ ಮಾತ್ರ ದರ ನೀಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಇಲ್ಲಿಯ ಕಾರ್ಖಾನೆಗಳ ಮಾಲೀಕರು ಪಕ್ಕದ ಬೆಳಗಾವಿ ಭಾಗದಲ್ಲೇ ಇದ್ದರೂ ಅಲ್ಲಿನ ದರ ಮಾದರಿಯನ್ನು ಇಲ್ಲೇಕೆ ಅನುಸರಿಸುತ್ತಿಲ್ಲ? ಕಬ್ಬಿನ ರಿಕವರಿ ಪ್ರಮಾಣದ ಲೆಕ್ಕಾಚಾರದಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ಜಿಎಂ ಶುಗರ್ಸ್‌ ಸಕ್ಕರೆ ಕಾರ್ಖಾನೆ ಮಾಲೀಕರು ಮುಂದೆ ಬಂದು ರೈತರ ಪ್ರಶ್ನೆಗಳಿಗೆ ಉತ್ತರಿಸಬೇಕು. ಕಾರ್ಖಾನೆಗಳಿಗೆ ಕಬ್ಬು ಪೂರೈಸುವವರು ರೈತರು. ಹೀಗಾಗಿ ನ್ಯಾಯಯುತ ದರ ಕೇಳುವ ಹಕ್ಕು ರೈತರಿಗಿದೆ. ಮಾರುಕಟ್ಟೆಯಲ್ಲಿ ಸಕ್ಕರೆಯನ್ನು ಕೆಜಿಗೆ ₹55ರಂತೆ ಮಾರಾಟ ಮಾಡುತ್ತಿದ್ದರೂ ಕಬ್ಬು ಬೆಳೆಗಾರರಿಗೆ ಲಾಭದ ಪಾಲು ನೀಡಲು ಹಿಂದೇಟು ಹಾಕಲಾಗುತ್ತಿದೆ. ಸಕ್ಕರೆ ಬೆಲೆ ಏರಿಕೆಗೆ ಅನುಗುಣವಾಗಿ ರೈತರಿಗೂ ಲಾಭ ಹಂಚಿಕೆಯಾಗಬೇಕು. ರೈತರ ಸಮ್ಮುಖದಲ್ಲೇ ಕಾರ್ಖಾನೆ ಮಾಲೀಕರು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ರೈತರ ಸಮಸ್ಯೆ ಪರಿಹರಿಸುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ಜಿಲ್ಲೆಯ ಆರು ಶಾಸಕರು ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು. ಸಕ್ಕರೆ ಸಚಿವರು ರೈತರ ಸಮಸ್ಯೆ ಬಗೆಹರಿಸದಿದ್ದರೆ ಸಚಿವ ಸ್ಥಾನದಲ್ಲಿದ್ದು ಪ್ರಯೋಜನವೇನು? ಬಂಧನ, ಕೇಸ್, ನಿಷೇಧಾಜ್ಞೆಗಳಿಗೆ ರೈತ ಹೋರಾಟಗಾರರು ಹೆದರುವುದಿಲ್ಲ. ನ. 26ರೊಳಗೆ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯದ 31 ಜಿಲ್ಲೆಗಳ ರೈತರ ಬೆಂಬಲದೊಂದಿಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರಸ್ತೆ ಅಭಿವೃದ್ಧಿಗೆ ₹16 ಸಾವಿರ ಕೋಟಿ ನೀಡುವ ಸರ್ಕಾರಕ್ಕೆ ರೈತರಿಗೆ ನ್ಯಾಯಯುತ ಬೆಲೆ ಕೊಡಲು ಹಣವಿಲ್ಲವೇ? ರಸ್ತೆ ಕಾಮಗಾರಿಗಳಲ್ಲಿ ಕಮಿಷನ್ ಸಿಗುತ್ತದೆ ಎಂಬ ಕಾರಣಕ್ಕೆ ಹಣ ನೀಡಲಾಗುತ್ತಿದೆ. ರೈತರಿಂದ ಕಮಿಷನ್ ಬರುವುದಿಲ್ಲ ಎಂಬ ಕಾರಣಕ್ಕೆ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲೆಯ ಆರು ಶಾಸಕರು ರೈತರ ಬಳಿ ಬಂದು ನಿಲ್ಲಬೇಕು. ಚುನಾವಣೆ ವೇಳೆ ಮತ ಕೇಳಲು ಬಂದಾಗ ರೈತರ ಹೋರಾಟದ ಸಂದರ್ಭದಲ್ಲಿ ಏಕೆ ನೆರವಿಗೆ ಬರಲಿಲ್ಲ ಎಂದು ಪ್ರಶ್ನಿಸಬೇಕು ಎಂದರು.

ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ ಹಾಗೂ ಎಸ್‌ಪಿ ಯಶೋದಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಬೇಡಿಕೆ ಈಡೇರುವ ವರೆಗೂ ಧರಣಿ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು. ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ಮುಖಂಡರಾದ ಅಶೋಕರೆಡ್ಡಿ ಮರಚರಡ್ಡೇರ, ಭುವನೇಶ್ವರ ಶಿಡ್ಲಾಪುರ, ಮರಿಗೌಡ ಪಾಟೀಲ, ಶಿವಬಸಪ್ಪ ಗೋವಿ, ಮಾಲತೇಶ ಪೂಜಾರ, ಮಂಜುನಾಥ ಹೊಸಕೋಟಿ, ಹನುಮಂತಪ್ಪ ಹುಚ್ಚಣ್ಣನವರ, ಹನುಮಂತಪ್ಪ ದೀವಗಿಹಳ್ಳಿ ಸೇರಿ ನೂರಾರು ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.

ಪರದಾಡಿದ ವಾಹನ ಸವಾರರು...

ಮಧ್ಯಾಹ್ನ 1 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ವಾಹನ ಸಂಚಾರ ತಡೆದಿದ್ದರಿಂದ ಪ್ರಯಾಣಿಕರು ಪರದಾಡಿದರು. ಪೊಲೀಸರು ಕೂಡಲೇ ಹೆದ್ದಾರಿ ವಾಹನಗಳಿಗೆ ಸವಣೂರು, ಬಂಕಾಪುರ ಮಾರ್ಗವಾಗಿ ಸಂಚರಿಸಲು ಮಾರ್ಗ ಬದಲಾವಣೆ ಮಾಡಿಕೊಟ್ಟರು. ಧರಣಿ ನಿರತ ರೈತರು ಹೆದ್ದಾರಿಯಲ್ಲಿಯೇ ಅಡುಗೆ ಮಾಡಿದರು. ಬಂದಿದ್ದ ಎಲ್ಲ ರೈತರಿಗೂ ಅಲ್ಲಿಯೇ ಊಟ ಬಡಿಸಿದರು.

ಸಚಿವರ ಮನೆಗೆ ಬಂದೋಬಸ್ತ್...

ಕಬ್ಬಿನ ದರಕ್ಕಾಗಿ ರೈತರು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಮನೆಗೆ ಮುತ್ತಿಗೆ ಹಾಕಿ ಧರಣಿ ನಡೆಸುವುದಾಗಿ ರೈತರು ಘೋಷಣೆ ಮಾಡುತ್ತಿದ್ದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಪೊಲೀಸರು ಸಚಿವರ ಮನೆ ರಸ್ತೆಗೆ ಬ್ಯಾರಿಕೇಡ್ ಅವಳಡಿಸಿ ಯಾರೂ ಸಚಿವರ ಮನೆಗೆ ರಸ್ತೆಗೆ ಹೋಗದಂತೆ ನಿರ್ಬಂಧಿಸಿದರು. ಇದರಿಂದ ಸ್ಥಳೀಯ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಯಿತು.