ತೀವ್ರ ಸ್ವರೂಪಕ್ಕೆ ತಿರುಗಿದ ಕಬ್ಬು ದರ ಹೋರಾಟ

| Published : Nov 06 2025, 02:00 AM IST

ತೀವ್ರ ಸ್ವರೂಪಕ್ಕೆ ತಿರುಗಿದ ಕಬ್ಬು ದರ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲೆಯ ವಿವಿಧೆಡೆ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರು ನಡೆಸುತ್ತಿರುವ ಹೋರಾಟ ಬುಧವಾರ 7ನೇ ದಿನಕ್ಕೆ ಕಾಲಿಟ್ಟಿತು. ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಬೆಳಗಾವಿ, ಅಥಣಿ, ರಾಯಬಾಗ, ಹುಕ್ಕೇರಿ, ಚಿಕ್ಕೋಡಿಯಲ್ಲಿಯೂ ರೈತರ ಹೋರಾಟ ಮುಂದುವರೆದಿದೆ. ಈ ಮಧ್ಯೆ, ಹೋರಾಟಕ್ಕೆ ಬಿಜೆಪಿ, ಸ್ವಾಮೀಜಿಗಳು, ವಕೀಲರ ಸಂಘ, ಕರವೇ ಸೇರಿ ವಿವಿಧ ಸಂಘಟನೆಗಳು ಸಾಥ್‌ ಕೊಟ್ಟಿದ್ದು, ರೈತರ ಕಿಚ್ಚು ಮತ್ತಷ್ಟು ಹೆಚ್ಚಾಗಿದೆ.

ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಮಂಗಳವಾರ ರಾತ್ರಿಯಿಡೀ ಕೊರೆಯುವ ಚಳಿಯಲ್ಲೇ ರೈತರ ಜೊತೆಗೆ ಮಲಗಿದರು. ಇದೇ ವೇಳೆ, ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಕೂಡ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ರೈತರ ಪ್ರತಿಭಟನೆ ಜನಾಂದೋಲನ ಸ್ವರೂಪ ಪಡೆದುಕೊಂಡಿದ್ದು, ಲಕ್ಷಾಂತರ ರೈತರು ಪ್ರತಿಭಟನಾ ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳದ ಟೆಂಟ್‌ ಪಕ್ಕದಲ್ಲೇ ಲಕ್ಷಾಂತರ ರೈತರಿಗೆ ಊಟ, ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಈ ಮಧ್ಯೆ, ಹೋರಾಟ ಬೆಂಬಲಿಸಿ ಬುಧವಾರ ರಾಯಬಾಗ ಬಂದ್‌ ನಡೆಸಲಾಯಿತು. ಕಾಗವಾಡ ತಾಲೂಕಿನ ಮಂಗಸೂಳಿ, ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಸೇರಿಹಲವೆಡೆ ರಸ್ತೆ ತಡೆ ನಡೆಸಲಾಯಿತು.

ಬಾಕ್ಸ್...

ಹೋರಾಟಕ್ಕೆ ರೈತ

ಮಹಿಳೆಯರ ಸಾಥ್‌

ರೈತರು ನಡೆಸುತ್ತಿರುವ ಹೋರಾಟಕ್ಕೆ ರೈತ ಮಹಿಳೆಯರು, ಮಕ್ಕಳು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತ ಮಹಿಳೆಯರು ಹೋರಾಟಗಾರರಿಗೆ ಖಡಕ್‌ ರೊಟ್ಟಿ ವಿತರಿಸಿದರು. ಮಧ್ಯಾಹ್ನದ ಊಟಕ್ಕೆ ಸಾವಿರಾರು ಮಹಿಳೆಯರು ತಮ್ಮ ಮನೆಯಲ್ಲಿ ಅಡಿಗೆ ಮಾಡಿ, ತಲೆ ಮೇಲೆ ರೊಟ್ಟಿ ಹೊತ್ತು ತಂದು ರೈತರಿಗೆ ಊಟ ಬಡಿಸಿದರು.(ಬಾಕ್ಸ್‌)

ರಾಷ್ಟ್ರೀಯ ಹೆದ್ದಾರಿ

ತಡೆದು ಕರವೇ ಧರಣಿ

ರೈತರು ಆರಂಭಿಸಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಬೆಳಗಾವಿ ನಗರ ಹೊರವಲಯದ ಸುವರ್ಣ ವಿಧಾನಸೌಧ ಎದುರಿನಲ್ಲಿ ಬುಧವಾರ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

ಸುವರ್ಣಸೌಧ ಪ್ರವೇಶದ ದ್ವಾರದ ಎದುರಿಗೆ ಸೇರಿದ ಕಾರ್ಯಕರ್ತರು ರಸ್ತೆ ಮಧ್ಯೆ ಧರಣಿ ಕುಳಿತು ಟೈರ್‌ಗೆ ಬೆಂಕಿಯಿಟ್ಟು, ಎರಡೂ ಬದಿಯ ಸಂಚಾರವನ್ನು ತಡೆದು ತೀವ್ರ ಆಕ್ರೋಶ ಹೊರಹಾಕಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಇದರಿಂದಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿ, ಕಿ.ಮೀ.ಗಟ್ಟಲೇ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ, ಪೊಲೀಸರು ಅವರನ್ನು ತಡೆಯಲು ಯತ್ನಿಸಿದಾಗ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಈ ಮಧ್ಯೆ, ರೈತರ ಹೋರಾಟ ಬೆಂಬಲಿಸಿ ನ.7ರಂದು ಬೆಳಗಾವಿ ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಹೀರೆಕುಡಿ ತಿಳಿಸಿದ್ದಾರೆ.

ಇದೇ ವೇಳೆ, ಕಬ್ಬಿನ ದರ ನಿಗದಿ ಮಾಡದಿದ್ದರೆ ರಾಜ್ಯದ ಮಠಾಧೀಶರ ನೇತೃತ್ವದಲ್ಲಿ ವಿಧಾನಸೌಧಕ್ಕೆ ಬೀಗ ಜಡಿಯುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಗೋಕಾಕ ತಾಲೂಕಿನ ಹಡಿಗಿನಾಳ ಗ್ರಾಮದ ಹಣಸಿನಬಣ ಮಠದ ಮುತ್ತೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.