ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಕಬ್ಬು ಕಟಾವು ನಂತರ ಸಕ್ಕರೆ ಕಾರ್ಖಾನೆಗೆ ಸಾಗಾಣಿಕೆ ಮಾಡುವ ವೆಚ್ಚವನ್ನು ರೈತರ ಮೇಲೆ ವಿಧಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಬ್ಬು ಸಾಗಾಣಿಕೆ ವೆಚ್ಚ ಕುರಿತು ರೈತರು ಹಾಗೂ ಲಾರಿ ಮಾಲೀಕರ ನಡುವೆ ಇದ್ದ ಗೊಂದಲವನ್ನು ಪರಿಹರಿಸಲು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಹಿತ ಕಾಯುವ ಕೆಲಸ ಮಾಡುತ್ತದೆ. ಕಬ್ಬು ಸಾಗಾಣಿಕಾ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡುವ ಕಬ್ಬು ಖರೀದಿ ಹಣದಲ್ಲಿ ಕಟಾವು ಮಾಡುವಂತಿಲ್ಲ. ಸಕ್ಕರೆ ಕಾರ್ಖಾನೆಗಳು ಲಾರಿ ಮಾಲೀಕರಿಗೆ ಕಬ್ಬು ಸಾಕಾಣಿಕೆ ವೆಚ್ಚವನ್ನು ಭರಿಸುವ ಬಗ್ಗೆ ಚರ್ಚಿಸಿ ರೈತರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಲಾರಿ ಮಾಲೀಕರು ಲಾರಿ ಆಯುಕ್ತಲಾಯದಿಂದ ನಿಗದಿಪಡಿಸಿರುವ ದರವನ್ನು ಯಾವುದೇ ರೈತರ ಮೇಲೆ ಹೇರುವಂತಿಲ್ಲ. ಲಾರಿ ಮಾಲೀಕರು ಹಾಗೂ ಸಕ್ಕರೆ ಕಾರ್ಖಾನೆಗಳು ಜೊತೆಗೂಡಿ ಸಮನ್ವಯ ಸಾಧಿಸಿ ವೆಚ್ಚವನ್ನು ಭರಿಸಬೇಕು. ಈ ಸಂಬಂಧ ಸಕ್ಕರೆ ಕಾರ್ಖಾನೆಗಳು ತಮ್ಮ ಮುಖ್ಯಸ್ಥರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಹೇಳಿದರು.ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ೨೦೬ ಬ್ಯಾಚ್‌ಗಳಾಗಿ ಕಬ್ಬು ಕಟಾವು ಮಾಡುವವರು ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ಕಬ್ಬು ಕಟಾವು ಮಾಡುವವರ ಕೊರತೆ ಇರುವುದರಿಂದ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದು ಕಟಾವು ಮಾಡಿ ಸಾಗಾಣಿಕೆಯನ್ನು ಅವರೇ ಮಾಡುತ್ತಿದ್ದಾರೆ. ಲಾರಿ ಮಾಲೀಕರಾಗಲಿ ಸಕ್ಕರೆ ಕಾರ್ಖಾನೆಗಳಾಗಲಿ, ರೈತರಿಗೆ ಸಾಗಾಣಿಕೆ ವೆಚ್ಚವನ್ನು ಭರಿಸುವಂತೆ ಒತ್ತಾಯಿಸುವಂತಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಂ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಜಿಲ್ಲಾ ಲಾರಿ ಮಾಲೀಕರ ಅಧ್ಯಕ್ಷ ವೇಣುಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.