ಪುತ್ತಿಗೆ ಮಠದಿಂದ ಪ್ರಕಟಗೊಳ್ಳುತ್ತಿರುವ ‘ಸುಗುಣಮಾಲಾ’ ಮಾಸಪತ್ರಿಕೆಯ 40ನೇ ವಾರ್ಷಿಕೋತ್ಸವ ವನ್ನು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಉಡುಪಿ: ಪತ್ರಿಕೆಗಳು ಎಲ್ಲ ಕ್ಷೇತ್ರಗಳ ಉತ್ತಮ ಗುಣಗಳಿಗೆ ಆದ್ಯತೆ ನೀಡಬೇಕು. ಕೊಲೆ, ಅತ್ಯಾಚಾರ ಇತ್ಯಾದಿ ಅಪರಾಧ ಕೃತ್ಯಗಳಿಗೆ ಆದ್ಯತೆ ನೀಡಿದಾಗ ಓದುಗರ ಮನಸ್ಸು ವ್ಯಗ್ರಗೊಂಡು ನಕಾರಾತ್ಮಕ ಅಂಶಗಳತ್ತ ಹೊರಳುತ್ತದೆ. ಪತ್ರಿಕೆಗಳು ಓದುಗರನ್ನು ಸಕರಾತ್ಮಕ ಚಿಂತನೆಯತ್ತ ಹೊರಳಿಸಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕರೆ ನೀಡಿದರು. ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದಿಂದ ಪ್ರಕಟಗೊಳ್ಳುತ್ತಿರುವ ‘ಸುಗುಣಮಾಲಾ’ ಮಾಸಪತ್ರಿಕೆಯ 40ನೇ ವಾರ್ಷಿಕೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.1986ರಲ್ಲಿ ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಪ್ರೇರಣೆಯಿಂದ ಆರಂಭವಾದ ಸುಗುಣಮಾಲಾ ಮೊದಲು ದೈನಿಕ, ಬಳಿಕ ಸಾಪ್ತಾಹಿಕ ಪತ್ರಿಕೆಯಾಗಿ ನಂತರದ ದಿನಗಳಲ್ಲಿ ಮಾಸಪತ್ರಿಕೆಯಾಗಿ ಪರಿವರ್ತನೆಗೊಂಡು ಈಗಲೂ ಮುನ್ನಡೆಯುತ್ತಿದೆ. ನನ್ನಲ್ಲಿದ್ದ ಬರವಣಿಗೆಯ ಗುಣವನ್ನು ಗುರುತಿಸಿದ ಗುರುಗಳು ಪತ್ರಿಕೆ ಆರಂಭಿಸಲು ಸೂಚಿಸಿದ್ದು, ಬನ್ನಂಜೆ ಗೋವಿಂದಾಚಾರ್ಯ, ರಾಜಗೋಪಾಲಾಚಾರ್ಯ ಮೊದಲಾದವರ ಸಹಕಾರದಿಂದ ನಾಡಿನ ಅಪೂರ್ವ ಆಧ್ಯಾತ್ಮಿಕ ಮಾಸಪತ್ರಿಕೆಯಾಗಿ ಜನ- ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು ಎಂದು ಶ್ರೀಗಳು ಹೇಳಿದರು.ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು, ವೇದಿಕೆಯಲ್ಲಿ ಶ್ರೀನಿವಾಸ ವಿವಿಯ ಕುಲಾಧಿಪತಿ ಸಿ.ಎ. ರಾಮಕೃಷ್ಣ ರಾವ್, ಸಹಕುಲಾಧಿಪತಿ ಡಾ. ಶ್ರೀನಿವಾಸ ರಾವ್, ಪತ್ರಕರ್ತರಾದ ಅರವಿಂದ ನಾವಡ, ಪ್ರಕಾಶ್ ಇಳಂತಿಲ, ಡಾ. ಜಯಲಕ್ಷ್ಮೀ ಸಂಪತ್ ಕುಮಾರ್, ಡಾ. ಶ್ರೀವತ್ಸ ಕಂಬಲೂರು, ಎ.ವಿ. ಪಂಚಮುಖಿ, ಭುವನಾಭಿರಾಮ, ಸಾಹಿತಿ ರೋಹಿತ್ ಚಕ್ರತೀರ್ಥ, ಬಾಗಲಕೋಟೆಯ ಖ್ಯಾತ ವೈದ್ಯ ಡಾ. ಗಿರೀಶ್ ಮಸೂರ್‌ಕರ್ ಉಪಸ್ಥಿತರಿದ್ದರು.
ವಿದ್ವಾನ್ ಡಾ. ಗೋಪಾಲಾಚಾರ್ಯ.ರು ಸ್ವಾಗತಿಸಿದರು, ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.