ಸುಹಾಸ್‌ ಶೆಟ್ಟಿ ಹತ್ಯೆ: 30ಕ್ಕೂ ಅಧಿಕ ಮಂದಿಯ ವಿಚಾರಣೆ

| Published : May 06 2025, 12:16 AM IST

ಸುಹಾಸ್‌ ಶೆಟ್ಟಿ ಹತ್ಯೆ: 30ಕ್ಕೂ ಅಧಿಕ ಮಂದಿಯ ವಿಚಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 20 ಕ್ಕೂ ಅಧಿಕ ಮಂದಿ ಶಾಮೀಲು ಆಗಿರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು 30 ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆಸುತ್ತಿದ್ದಾರೆ. ಬಜಪೆ ಪರಿಸರದಲ್ಲಿ ಆರೋಪಿಗಳಿಗೆ ಸ್ಥಳೀಯರ ನೆರವು ಶಂಕೆ ಇದ್ದು, ಈ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 20 ಕ್ಕೂ ಅಧಿಕ ಮಂದಿ ಶಾಮೀಲು ಆಗಿರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು 30 ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆಸುತ್ತಿದ್ದಾರೆ.

ಬಜಪೆ ಪರಿಸರದಲ್ಲಿ ಆರೋಪಿಗಳಿಗೆ ಸ್ಥಳೀಯರ ನೆರವು ಶಂಕೆ ಇದ್ದು, ಈ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸಂದರ್ಭದ ಸಿಸಿಟಿವಿ ಫೂಟೇಜ್, ಮೊಬೈಲ್ ವಿಡಿಯೋಗಳನ್ನು ಪೊಲೀಸರು ಸಂಗ್ರಹಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಸುಹಾಸ್‌ ಅಲ್ಲಿಗೆ ಆಗಮಿಸಿದ ವೇಳೆ, ಅಲ್ಲಿ ಆತನ ಕಾರನ್ನು ಅಡ್ಡಗಟ್ಟುವ ಯೋಜನೆ ಎಲ್ಲವೂ ಸ್ಥಳೀಯರದ್ದೇ ಎಂಬುದು ಪೊಲೀಸರ ತರ್ಕ. ಶರಣ್ ಪಂಪ್‌ವೆಲ್‌, ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ!ಹಿಂದು ಮುಖಂಡರಾದ ಶರಣ್‌ ಪಂಪ್‌ವೆಲ್‌ ಹಾಗೂ ಭರತ್‌ ಕುಮ್ಡೇಲುಗೆ ಜಾಲತಾಣಗಳಲ್ಲಿ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್‌ ಎಂದು ಪೋಸ್ಟ್ ಮಾಡಲಾಗಿದ್ದು, ಪೊಲೀಸ್ ಇಲಾಖೆಯ ಕ್ರಮದ ನಡುವೆ ದ್ವೇಷ ಕಾರುವ ಪೋಸ್ಟ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್‌.. ಶರಣ್ ಹತ್ಯೆಯಾಗಲು ತಯಾರಾಗು’ ಎಂದು ಬೆದರಿಕೆ ಹಾಕಲಾಗಿದ್ದು, ಬಜರಂಗದಳ ಮುಖಂಡ ಭರತ್ ಕುಮ್ಡೆಲ್‌ಗೂ ಇದೇ ರೀತಿ ಬೆದರಿಕೆಯ ಪೋಸ್ಟ್‌ ಹಾಕಲಾಗಿದೆ.

ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಆರೋಪಿಯಾಗಿದ್ದ ಭರತ್ ಕುಮ್ಡೆಲ್‌ ಬಗ್ಗೆ ಜಾಲತಾಣದಲ್ಲಿ ‘ನೆಕ್ಸ್ಟ್ ಟಾರ್ಗೆಟ್ ಭರತ್ ಕುಮ್ಡೆಲ್.. ಇಂ ಅಲ್ಲಾ’ ಎಂದು ಪೋಸ್ಟ್ ಮಾಡಲಾಗಿದೆ. 2017 ಜೂನ್ 21ರಂದು ಹತ್ಯೆಯಾಗಿದ್ದ ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆಯ ಆರೋಪ ಈತನ ಮೇಲಿದೆ ಭರತ್‌ ಕುಮ್ಡೇಲ್‌ ಬಗ್ಗೆ ಸಝಿನ್ ಹಾಗೂ ಸಜೊವ್ ಕಾಂಟ್ ಹೆಸರಿನ ಖಾತೆಗಳಿಂದ ಪೋಸ್ಟ್ ಮಾಡಲಾಗಿದೆ. ಸುಹಾಸ್‌ ಹತ್ಯೆ ಬಳಿಕ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ.

ಬಶೀರ್‌ ಕೊಲೆ ಆರೋಪಿಗೂ ಜೀವ ಬೆದರಿಕೆ:

2018 ರ ಜನವರಿಯಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತಿಕಾರಕ್ಕೆ ಬಶೀರ್ ಕೊಲೆ ಘಟನೆ ಮಂಗಳೂರಿನ ಹೊರವಲಯ ಕೊಟ್ಟಾರ ಚೌಕಿ ಬಳಿ ನಡೆದಿತ್ತು. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಶ್ರೀಜು ಈ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ‘ಶ್ರೀಜು ನೆಕ್ಸ್ಟ್ ಟಾರ್ಗೆಟ್’ ಎಂದು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಕಿಲ್ಲರ್ಸ್‌ ಟಾರ್ಗೆಟ್‌ ಹೆಸರಿನ ಪೇಜ್‌ನಿಂದ ಪೋಸ್ಟ್ ಆಗಿತ್ತು. ಭಾನುವಾರ ಮತ್ತೆ ಕಿಡಿಗೇಡಿಗಳು ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ್ದಾರೆ.

ಪ್ರತೀಕಾರದ ಕಿಚ್ಚು!:

ಜಾಲತಾಣಗಳಲ್ಲಿ ರಿವೆಂಜ್ ಪೋಸ್ಟ್‌ಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಹಿಂದೂ ಮುಖಂಡರ ಬಳಿಕ ಮುಸ್ಲಿಂ ನಾಯಕರಿಗೂ ಕೊಲೆ ಬೆದರಿಕೆ ಹಾಕಲಾಗಿದೆ. ಎಸ್‌ಡಿಪಿಐ ಮುಖಂಡರಿಗೂ ಸ್ಕೆಚ್‌ ಹಾಕಲಾಗಿದೆ. ರಿಯಾಜ್ ಫರಂಗಿಪೇಟೆ, ರಿಯಾಜ್ ಕಡಂಬು, ಶಾಫಿ ಬೆಳ್ಳಾರೆಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ನೆಕ್ಸ್ಟ್ ಹಿಟ್ ಲಿಸ್ಟ್ ಎಂದು ಪೋಸ್ಟ್ ಮಾಡಲಾಗಿದೆ. ಯೂಟ್ಯೂಬ್ ವಿಡಿಯೋ ಒಂದರಲ್ಲಿ ಕೊಲೆ ಬೆದರಿಕೆಯ ಪೋಸ್ಟ್ ಮಾಡಲಾಗಿದ್ದು,ಇದರಲ್ಲಿ ಬಹುತೇಕ ವಿದೇಶದಿಂದಲೇ ನಿಯಂತ್ರಿಸಲ್ಪಡುತ್ತಿರುವ ಫೇಕ್ ಅಕೌಂಟ್‌ಗಳಾಗಿವೆ ಎಂದು ಹೇಳಲಾಗಿದೆ.

.....................

3 ತಿಂಗಳ ಹಿಂದೆಯೇ ಸುಹಾಸ್‌ ಹತ್ಯೆಗೆ ಸ್ಕೆಚ್!

ಸುರತ್ಕಲ್‌ನಲ್ಲಿ ಹತ್ಯೆಗೆ ಒಳಗಾದ ಫಾಜಿಲ್‌ನ ಸಹೋದರ ಆದಿಲ್‌, ಜನವರಿಯಲ್ಲೇ ಸಫ್ವಾನ್ ತಂಡಕ್ಕೆ 3 ಲಕ್ಷ ರು. ಸುಪಾರಿ ಮೊತ್ತ ನೀಡಿರುವುದು ಪೊಲೀಸ್‌ ತನಿಖೆಯಲ್ಲಿ ಪತ್ತೆಯಾಗಿದೆ.

ಅಂದರೆ 2003ರಲ್ಲೇ ಮೊದಲ ಬಾರಿಗೆ ಆದಿಲ್-ಸಫ್ವಾನ್ ನಡುವೆ ಭೇಟಿ ನಡೆದಿದೆ. 2023ರ ಸ.3ರಂದು ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್‌ನಿಂದ ಸಫ್ವಾನ್‌ಗೆ ಇರಿತವಾಗಿದೆ. ಈ ವಿಷಯ ತಿಳಿದು ತಾನಾಗಿಯೇ ಸಫ್ವಾನ್ ನೋಡಲು ಆಸ್ಪತ್ರೆಗೆ ಆದಿಲ್ ಬಂದಿದ್ದ. ಅದೇ ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಸಫ್ವಾನ್-ಆದಿಲ್ ಮೊದಲ ಭೇಟಿಯಾಗಿದ್ದರು.

ಈ ವೇಳೆ ಸಫ್ವಾನ್‌ ತಂಡದ ಮುಝಾಮಿಲ್‌ನ ಮೊಬೈಲ್‌ ನಂಬರ್‌ನ್ನು ಅದಿಲ್ ಪಡೆದಿದ್ದ. ಆ ಬಳಿಕ ಫೋನ್‌ನಲ್ಲೇ ಹಲವು ವಿಚಾರಗಳ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ್ದರು. ಈ ನಡುವೆ ಸಫ್ವಾನ್ ತಂಡದಿಂದ ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಲಾಗಿದೆ. ಆಗ ಆದಿಲ್ ಬಳಿ ಹಣಕಾಸು ನೆರವು ಕೇಳುವ ಬಗ್ಗೆ ಸಫ್ವಾನ್‌ಗೆ ಮುಝಾಮಿಲ್ ಸಲಹೆ ಮಾಡಿದ್ದನು. ಅದರಂತೆ ಕಳೆದ ಜನವರಿಯಲ್ಲಿ ನೇರವಾಗಿ ಫಾಜಿಲ್ ಸಹೋದರ ಆದಿಲ್‌ನ್ನು ಮುಝಾಮಿಲ್ ಭೇಟಿಯಾಗಿದ್ದ. ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿರುವ ಬಗ್ಗೆ ಅದಿಲ್‌ಗೆ ಮುಝಾಮಿಲ್ ಮಾಹಿತಿ ನೀಡಿದ್ದ. ಇದೇ ವೇಳೆ ಐದು ಲಕ್ಷ ರು. ನೀಡುವುದಾಗಿ ಅದಿಲ್‌ ಭರವಸೆ ನೀಡಿದ್ದ. ಕೆಲವೇ ದಿನಗಳಲ್ಲಿ ಮೂರು ಲಕ್ಷ ರು. ಮೊತ್ತವನ್ನು ಅದಿಲ್‌ ಮುಝಾಮಿಲ್‌ಗೆ ನೀಡಿದ್ದ. ಹಣ ಪಡೆದು ಸುಹಾಸ್ ಹತ್ಯೆಗೆ ಸಫ್ವಾನ್‌ ತಂಡ ಪ್ರಾಥಮಿಕ ಯೋಜನೆ ಸಿದ್ಧಪಡಿಸಿತ್ತು. ಎಲ್ಲ ಪ್ಲಾನ್ ರೂಪಿಸಿ ಮಾರ್ಚ್‌ 31, 2025ರೊಳಗೆ ಹತ್ಯೆ ಮಾಡಲು ನಿರ್ಧರಿಸಿತ್ತು. ಈ ನಡುವೆ ಮತ್ತೆ ಅದಿಲ್ ಬಳಿ ಬಾಕಿ ಎರಡು ಲಕ್ಷ ರು. ಮೊತ್ತಕ್ಕೆ ಸಫ್ವಾನ್‌ ತಂಡ ಬೇಡಿಕೆ ಇಟ್ಟಿರಿಸಿತ್ತು. ಆದರೆ ಸದ್ಯ ಹಣ ಇಲ್ಲ, ಕೆಲಸ ಆದ ಮೇಲೆ ಕೊಡುವುದಾಗಿ ಅದಿಲ್‌ ಹೇಳಿದ್ದ.

ಹಾಗಾಗಿ ಪ್ಲಾನ್ ರೂಪಿಸಿ ಏ.24 ರಂದೇ ಎರಡು ವಾಹನವನ್ನು ಹಂತಕರ ತಂಡ ಬಾಡಿಗೆಗೆ ಪಡೆದಿತ್ತು. ಮೀನಿನ ಪಿಕಪ್ ಮನೆಯಲ್ಲೇ ಇಟ್ಟು ಸ್ವಿಫ್ಟ್ ಕಾರಿನಲ್ಲೇ ಸುತ್ತಾಟ ನಡೆಸಿತ್ತು. ಸುಹಾಸ್ ಚಲನವಲನ ಗಮನಿಸಲು ಸ್ವಿಫ್ಟ್‌ ಕಾರಿನಲ್ಲಿ ಸುತ್ತಾಟ ಮಾಡಿದ್ದರು.