ಸರ್ಕಾರದ ರಕ್ಷಣೆಯ ನಂಬಿಕೆಯಿಂದಲೇ ಸುಹಾಸ್‌ ಹತ್ಯೆ : ಸಂಸದ ಬಿ.ವೈ. ರಾಘವೇಂದ್ರ ಆರೋಪ

| N/A | Published : May 02 2025, 11:47 PM IST / Updated: May 03 2025, 01:16 PM IST

BY Raghavendra
ಸರ್ಕಾರದ ರಕ್ಷಣೆಯ ನಂಬಿಕೆಯಿಂದಲೇ ಸುಹಾಸ್‌ ಹತ್ಯೆ : ಸಂಸದ ಬಿ.ವೈ. ರಾಘವೇಂದ್ರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣದ ಆರೋಪಿಗಳ ಮೇಲಿನ ಮೊಕದ್ದಮೆ ಖುಲಾಸೆ ಆಯಿತು. ಇಂತಹ ವಿಶ್ವಾಸದ ಮೇಲೆ ಹತ್ಯೆ ನಡೆಯುತ್ತಿದೆ.

  ಮೈಸೂರು : ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳು ತಮಗೆ ಕಾಂಗ್ರೆಸ್‌ ಸರ್ಕಾರದಲ್ಲಿ ರಕ್ಷಣೆ ಇದೆ ಎಂಬ ಕಾರಣದಿಂದಲೇ ಕೃತ್ಯ ನಡೆಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಹಾಸ್‌ ಶೆಟ್ಟಿ ಮೇಲಿನ ಆರೋಪ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದೆ. ಪ್ರಕರಣದಿಂದ ಯಾವುದೇ ತೀರ್ಪು ಹೊರ ಬಂದಿಲ್ಲ. ಹೀಗಿರುವಾಗ ಮಂಗಳೂರಿನ ಪ್ರಮುಖ ವೃತ್ತದಲ್ಲಿ ತಲವಾರ್‌ ಹಿಡಿದು ಬಂದು ಹತ್ಯೆ ನಡೆಸಿರುವುದು ಕಾನೂನು ಕೈಗೆತ್ತಿಕೊಂಡಂತೆ ಎಂದರು.

ಇದೊಂದು ಗೂಂಡಾಗಿರಿ ಪ್ರದರ್ಶನ, ಆರೋಪಿಗಳು ಕಾನೂನು ಕೈಗೆತ್ತಿಕೊಂಡಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ರಕ್ಷಣೆ ಇದೆ ಎಂಬ ಮನಸ್ಥಿತಿ ಹೆಚ್ಚಾಗಿದೆ. ಹಿಂದುತ್ವ ತುಳಿಯುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ನ ಅನುಕಂಪ ನೀತಿಯು ಇಂತಹ ಕೆಲಸಕ್ಕೆ ಪ್ರೇರೇಪಿಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣದ ಆರೋಪಿಗಳ ಮೇಲಿನ ಮೊಕದ್ದಮೆ ಖುಲಾಸೆ ಆಯಿತು. ಇಂತಹ ವಿಶ್ವಾಸದ ಮೇಲೆ ಹತ್ಯೆ ನಡೆಯುತ್ತಿದೆ. ಇಂತಹ ಘಟನೆಗೆ ಬಿಗಿ ನಿಲುವು ತೆಗೆದುಕೊಳ್ಳದಿದ್ದರೆ ಮುಂದೆ ಸಮಸ್ಯೆಯಾಗುತ್ತದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.

ಕೇಂದ್ರದ ಜಾತಿ ಗಣತಿಯನ್ನು ಸ್ವಾಗತಿಸುತ್ತೇವೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಪೂಜೆಗೆ ಮಾತ್ರ ಸೀಮಿತ ಮಾಡಿಕೊಂಡು ಅವಮಾನಿಸಿದ ಕಾಂಗ್ರೆಸ್‌ ಈಗ ಅವರನ್ನು ಹೊತ್ತು ಮೆರೆಯುವ ನಾಟಕ ಆಡುತ್ತಿದೆ. ಅವರನ್ನು ಸೋಲಿಸಿದವರಿಗೆ ಪದ್ಮಶ್ರೀ ನೀಡಿತು. ಆದರೆ ಬಿಜೆಪಿ ಅವರಿಗೆ ಭಾರತರತ್ನ ನೀಡಿದ್ದಾಗಿ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜಾತಿಗಣತಿ ಮಾಡಲು ಮುಂದಾಗಿರುವುದು ರಾಜ್ಯ ಸರ್ಕಾರದ ಕಾಫಿ ಅಲ್ಲ. ರಾಜ್ಯದ ಆಡಳಿತ ನೋಡಿಕೊಂಡು ದೇಶ ನಡೆಸುವ ಪರಿಸ್ಥಿತಿ ಇಲ್ಲ ಎಂದರು.