ಜೀವನದ ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ: ಡಾ.ಬಿ.ಎನ್.ರವೀಶ್

| Published : Sep 11 2025, 12:03 AM IST

ಜೀವನದ ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ: ಡಾ.ಬಿ.ಎನ್.ರವೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ವಯಸ್ಸಿನ ಬೇಧವಿಲ್ಲದೇ ಎಲ್ಲ ವಯೋಮಾನದವರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಕಾಣಬಹುದಾಗಿದೆ. ಆತ್ಮಹತ್ಯೆ ಎನ್ನುವುದು ಸಾಮಾಜಿಕ ಪಿಡುಗಾಗಿದ್ದು, ಜೀವನದಲ್ಲಿ ನೊಂದು ಬೆಂದವರು ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ, ಆದರೆ ನಾವು ನಮಗಾಗಿ ಜೀವಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜೀವನದ ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ ಅದರಾಚೆಗೂ ಬದುಕು ಇದೆ. ತಾತ್ಕಾಲಿಕವಾದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ನೋವನ್ನು ಸಹಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಮನೋವೈದ್ಯರು ಹಾಗೂ ಮೈಸೂರು ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್. ರವೀಶ್ ಅಭಿಪ್ರಾಯಪಟ್ಟರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಐ.ಕ್ಯೂ.ಎ.ಸಿ ಘಟಕ, ಎನ್.ಸಿ.ಸಿ ಘಟಕ, ಎನ್.ಎಸ್.ಎಸ್‌ ಘಟಕ, ರೆಡ್‌ ಕ್ರಾಸ್‌ ಘಟಕ ಮತ್ತು ಸ್ಕೌಟ್ಸ್‌ ಅಂಡ್‌ ಗೈಡ್ಸ್ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ವಯಸ್ಸಿನ ಬೇಧವಿಲ್ಲದೇ ಎಲ್ಲ ವಯೋಮಾನದವರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಕಾಣಬಹುದಾಗಿದೆ. ಆತ್ಮಹತ್ಯೆ ಎನ್ನುವುದು ಸಾಮಾಜಿಕ ಪಿಡುಗಾಗಿದ್ದು, ಜೀವನದಲ್ಲಿ ನೊಂದು ಬೆಂದವರು ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ, ಆದರೆ ನಾವು ನಮಗಾಗಿ ಜೀವಿಸಬೇಕಾಗಿದೆ. ಜಗತ್ತಿನಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಆತ್ಮಹತ್ಯೆ ಮತ್ತು ಅಪಘಾತಗಳನ್ನು ತಡೆಗಟ್ಟಬಹುದಾಗಿದ್ದು, ಆತ್ಮಹತ್ಯೆಗೆ ಕಾರಣವೇನೆಂಬುದನ್ನು ಅರಿತು ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಂಡು ನವಜೀವನವನ್ನು ನಡೆಸಬಹುದು. ನಿಮ್ಮ ಸಾವಿಗೆ ಅರ್ಥಪೂರ್ಣವಾದ ವಿರಾಮವನ್ನು ಪಡೆದು ಉತ್ತಮವಾಗಿ ಜೀವಿಸಬೇಕಾದರೆ ಆಹಾರ, ವಿಹಾರ, ಆಚಾರ, ವಿಚಾರ, ವ್ಯವಹಾರ ಎಂಬ ಈ ಐದು ತತ್ವಗಳ ಅರಿವು ಯಾರಿಗಿರುತ್ತದೋ ಅವರ ಆರೋಗ್ಯ ಉತ್ತಮವಾಗಿದ್ದು, ಅವರೆಂದು ಆತ್ಮಹತ್ಯೆಗೆ ಪ್ರಯತ್ನಿಸುವುದಿಲ್ಲ, ಅಂತಹಯಾರೇ ಆದರೂ ಮತ್ತೊಬ್ಬರ ಜೀವವನ್ನು ಉಳಿಸಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಸ್‌. ಮರೀಗೌಡ ಮಾತನಾಡಿ, ಆಧುನಿಕವಾದ ಇಂದಿನ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹಲವು ವ್ಯಸನಗಳಿಗೆ ದಾಸರಾಗಿದ್ದು, ಬಹಳ ಬೇಗ ಸಣ್ಣ-ಸಣ್ಣ ವಿಷಯಗಳಿಗೂ ಖಿನ್ನತೆಗೆ ಒಳಗಾಗುತ್ತಾರೆ.ಅಂತಹ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂದಿನ ಈ ಉಪನ್ಯಾಸ ಪ್ರಯೋಜನಕಾರಿಯಾಗಿದೆ ಎಂದರು.

ರೆಡ್‌ ಕ್ರಾಸ್ ಸಂಚಾಲಕ ಎಸ್. ಶಶಿಧರ್ ಸ್ವಾಗತಿಸಿದರು. ಅಧ್ಯಾಪಕ ಸಲಹೆಗಾರರಾದ.ಎಸ್. ಲಾವಣ್ಯ, ಅಧ್ಯಾಪಕರು, ಅಧ್ಯಾಪಕೇತರರು ಭಾಗವಹಿಸಿದ್ದರು. .ವಿ. ಚಂದನ್ ನಿರೂಪಿಸಿದರು., ಸ್ಕೌಟ್ಸ್‌ ಅಂಡ್‌ ಗೈಡ್ಸ್ ಸಂಚಾಲಕ ಆರ್‌. ಅರವಿಂದ್‌ ವಂದಿಸಿದರು.