ಸಾರಾಂಶ
ಕೃಷಿ ಪತ್ತಿನ ಸಹಕಾರ ಸಂಘದ ಹೆಸರು ಬದಲಾಯಿಸಿದ್ದಕ್ಕೆ ಗ್ರಾಮಸ್ಥರ ನಡುವೆ ತೀವ್ರ ಜಟಾಪಟಿ ನಡೆದ ಘಟನೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ಕೃಷಿ ಪತ್ತಿನ ಸಹಕಾರ ಸಂಘದ ಹೆಸರು ಬದಲಾಯಿಸಿದ್ದಕ್ಕೆ ಗ್ರಾಮಸ್ಥರ ನಡುವೆ ತೀವ್ರ ಜಟಾಪಟಿ ನಡೆದ ಘಟನೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.ಜಿ.ಹೊಸಹಳ್ಳಿ ಗ್ರಾಮದಲ್ಲಿರುವ ಮಡೇನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘ ಎಂಬ ಹೆಸರು ಸುಮಾರು 50 ವರ್ಷಗಳ ಹಿಂದಿನಿಂದಲೂ ನಡೆದು ಬಂದಿದೆ. ದಿಢೀರ್ ಆಗಿ ಮಡೇನಹಳ್ಳಿ ಹೆಸರು ಕೈ ಬಿಟ್ಟು ಜಿ.ಹೊಸಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘ ಎಂದು ಬದಲಾಯಿಸಿದ್ದಕ್ಕೆ ಮಡೇನಹಳ್ಳಿ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಚೇರಿ ಬಳಿ ನಡೆದಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತಿನ ಸಮರ ಸಾರಿದರು.ಬ್ಯಾಡಗೆರೆ, ತೊರೆಹಳ್ಳಿ ಕಟ್ಟಿಗೆನಹಳ್ಳಿ ಸೇರಿದಂತೆ ಮಡೇನಹಳ್ಳಿ, ಜಿ.ಹೊಸಹಳ್ಳಿ ಗ್ರಾಮಸ್ಥರ ಹಿತ ಕಾಯಲು ನಡೆದು ಬಂದ ವಿಎಸ್ಎಸ್ಎನ್ ಸೊಸೈಟಿ ಹೆಸರು ಬದಲಾವಣೆ ಬೇಕಿಲ್ಲ. ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಹೊಸಹಳ್ಳಿ ಹೆಸರಿನಲ್ಲಿ ಮತ್ತೊಂದು ಸಹಕಾರ ಸಂಘ ಮಾಡಿಕೊಳ್ಳಲಿ ಎಂದು ವಾದ ನಡೆಯಿತು. ಮಾತಿನ ಚಕಮಕಿ ತಾರಕ್ಕೇರಿ ಒಬ್ಬರನ್ನೊಬ್ಬರು ನೂಕಿ ತಳ್ಳಾಟ ನಡೆಸಿದರು. ಸರ್ಕಾರದ ನಿಯಮಾನುಸಾರ ಗ್ರಾಮ ಪಂಚಾಯಿತಿ ಕೇಂದ್ರದ ಸಂಘಕ್ಕೆ ಜಿ.ಹೊಸಹಳ್ಳಿ ಹೆಸರು ಇಡಲು 2023 ರಲ್ಲಿ ತೀರ್ಮಾನಿಸಲಾಗಿತ್ತು ಎಂದು ಕೆಲವರ ವಾದ ನಡೆಸಿದರು. ಮಾತಿನ ಚಕಮಕಿ ತಾರಕ್ಕೆಕೇರುವ ಮುನ್ನ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಇಂದಿನ ಸರ್ವ ಸದಸ್ಯರ ಸಭೆ ನಡೆಸಿ ಮುಂದಿನ ಎರಡು ತಿಂಗಳ ನಂತರ ಹೆಸರು ನಾಮಕರಣ ವಿಚಾರಕ್ಕೆ ಸಭೆ ನಡೆಸಿ ತೀರ್ಮಾನಿಸಲು ಒಪ್ಪಿದ ಬಳಿಕ ಸದಸ್ಯರ ಸಭೆ ಶಾಂತಿಯುತವಾಗಿ ಮುಂದುವರಿಯಿತು.