ಸಾರಾಂಶ
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶುಖಮುನಿ ತಾತನವರ ಜಾತ್ರಾಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಪಲ್ಲಕ್ಕಿ ಉತ್ಸವದ ಐದನೇ ದಿನದ ಅಂಗವಾಗಿ ಅವಧೂತ ಶುಖಮುನಿ ತಾತನವರ ಪಲ್ಲಕ್ಕಿ ಉತ್ಸವ ಬೆಳಗ್ಗೆ ಪ್ರಾರಂಭವಾಗಿ ನೇರವಾಗಿ ಮೂರು ಕಿಲೋಮೀಟರ್ ದೂರದಲ್ಲಿರುವ ಮಾಟೂರು, ಜಾಲಿಹಾಳ ಹಾಗೂ ರ‍್ಯಾವಣಕಿ ಗ್ರಾಮಗಳಿಗೆ ತೆರಳಿತು.
ಕುಷ್ಟಗಿ: ಭಾವೈಕ್ಯತೆಯ ಜಾತ್ರೆ ಎಂದೆ ಪ್ರಖ್ಯಾತಿಗೊಂಡ ತಾಲೂಕಿನ ದೋಟಿಹಾಳ ಗ್ರಾಮದ ಶುಖಮುನಿ ತಾತನವರ ಜಾತ್ರಾಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಶ್ರೀಮಠಕ್ಕೆ ಆಹಾರ ಧಾನ್ಯಗಳು ಹರಿದು ಬರುತ್ತಿದೆ.
ಪಲ್ಲಕ್ಕಿ ಉತ್ಸವದ ಐದನೇ ದಿನದ ಅಂಗವಾಗಿ ಅವಧೂತ ಶುಖಮುನಿ ತಾತನವರ ಪಲ್ಲಕ್ಕಿ ಉತ್ಸವ ಬೆಳಗ್ಗೆ ಪ್ರಾರಂಭವಾಗಿ ನೇರವಾಗಿ ಮೂರು ಕಿಲೋಮೀಟರ್ ದೂರದಲ್ಲಿರುವ ಮಾಟೂರು, ಜಾಲಿಹಾಳ ಹಾಗೂ ರ‍್ಯಾವಣಕಿ ಗ್ರಾಮಗಳಿಗೆ ತೆರಳಿತು.ಆಯಾ ಗ್ರಾಮದ ಗ್ರಾಮಸ್ಥರು ಭಜನೆ, ಭಾಜಾ-ಭಜಂತ್ರಿ, ಡೊಳ್ಳು ವಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡು ಗ್ರಾಮಗಳಲ್ಲಿರುವ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಕೈಗೊಂಡರು, ಬಳಿಕ ಆಶೀರ್ವಾದ ಪಡೆದುಕೊಂಡರು.
ಆನಂತರ ಮಧ್ಯಾಹ್ನ ತಾತನ ಪಲ್ಲಕ್ಕಿಯ ಜತೆಗೆ ಆಗಮಿಸಿದ ಭಕ್ತ ವೃಂದಕ್ಕೆ ಖಡಕ್ ರೊಟ್ಟಿ, ಮೊಸರು, ದಾಲ್, ಬದನೆಕಾಯಿ ಪಲ್ಯೆ, ಬಜ್ಜಿ, ಶೇಂಗಾ ಚಟ್ನಿ, ಜಿಲೇಬಿ, ಬಾಳೆಹಣ್ಣು, ಸೋನಾಪಾಪುಡಿ, ಅನ್ನ ಸಾಂಬಾರು ಊಟ ಮಾಡಿಸುವ ಮೂಲಕ ಅನ್ನದಾಸೋಹ ಕೈಗೊಂಡರು.ಸಾಯಂಕಾಲ ಹೊತ್ತಿಗೆ ಭಾಜಾ ಭಜಂತ್ರಿಗಳು ಹಾಗೂ ಡೊಳ್ಳು ವಾದ್ಯಮೇಳಗಳೊಂದಿಗೆ ದೋಟಿಹಾಳ ಶ್ರೀಮಠದತ್ತ ಮುಖಮಾಡಿದ ಪಲ್ಲಕ್ಕಿ ಎರಡು ಸಾವಿರಕ್ಕೂ ಅಧಿಕ ಜನ ಮಹಿಳೆಯರು ಕಳಶ ಕೈಗನ್ನಡಿಯೊಂದಿಗೆ ಹೆಜ್ಜೆ ಹಾಕಿದರು.
ಹತ್ತಾರು ಎತ್ತಿನ ಬಂಡಿಗಳು, 20ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳ ಮೆರವಣಿಗೆ ಮೂಲಕ ದಾಸೋಹ ಸೇವೆ ಮಠಕ್ಕೆ ಸಮರ್ಪಣೆ ಮಾಡಿದರು. ಸೋಮವಾರದ ಪಲ್ಲಕ್ಕಿ ಉತ್ಸವದ ಜವಾಬ್ದಾರಿ ಕೇಸೂರು ಗ್ರಾಪಂ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ನಡೆಯಿತು.