ಮಕ್ಕಳ ಬೌದ್ಧಿಕ, ಕ್ರಿಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ

| Published : May 13 2025, 11:55 PM IST

ಮಕ್ಕಳ ಬೌದ್ಧಿಕ, ಕ್ರಿಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯದಲ್ಲಿಯೇ ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ ವೃದ್ಧಿಸಲು ಇಂತಹ ಶಿಬಿರಗಳು ಸಹಾಯವಾಗಲಿದೆ.

ಕಾರವಾರ: ಮಕ್ಕಳ ಬೌದ್ಧಿಕ ಮತ್ತು ಕ್ರೀಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿಯಾಗಿದ್ದು, ಬೇಸಿಗೆ ಅವಧಿಯಲ್ಲಿನ ಶಿಬಿರದ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಶ್ಯಾಮ ಪ್ರಸಾದ ಹೇಳಿದರು.

ಅವರು ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನದಲ್ಲಿ ಆಯೋಜಿಸಿದ 2025-26ನೇ ಸಾಲಿನ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಾಲ್ಯದಲ್ಲಿಯೇ ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ ವೃದ್ಧಿಸಲು ಇಂತಹ ಶಿಬಿರಗಳು ಸಹಾಯವಾಗಲಿದೆ. ಮಕ್ಕಳಿಗೆ ಆಟ-ಪಾಠಗಳ ಜತೆಗೆ ನೃತ್ಯ, ಸಾಂಸ್ಕೃತಿಕ ಕಲೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಇಂತಹ ಶಿಬಿರಗಳು ಮೂಲ ಪ್ರೇರಣೆಯಾಗುತ್ತವೆ. ಮಕ್ಕಳ ಬೌದ್ಧಿಕ ವಿಕಾಸದೊಂದಿಗೆ ಭವಿಷ್ಯದ ಜೀವನಕ್ಕೆ ಮಾದರಿಯಾಗುತ್ತದೆ. ಮಕ್ಕಳು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿರೂಪಾಕ್ಷಗೌಡ ಪಾಟೀಲ್, 5ರಿಂದ 16 ವರ್ಷದ ಮಕ್ಕಳಿಗೆ ಚಿತ್ರಕಲೆ, ಕ್ರಾಪ್ಟ್, ನೃತ್ಯ, ಸಂಗೀತ ಸೇರಿದಂತೆ 8 ರೀತಿಯ ಕಾರ್ಯಕ್ರಮ ಈ ಶಿಬಿರದಲ್ಲಿ ಕಲಿಸಲಾಗುತ್ತದೆ. ಬುಧವಾರದಿಂದ 15 ದಿನಗಳವರೆಗೆ ನಡೆಯುವ ಈ ಶಿಬಿರದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು ಹಾಗೂ ಪೋಷಕರು ಮಕ್ಕಳನ್ನು ಶಿಬಿರಕ್ಕೆ ಸೇರಿಸುವ ಮೂಲಕ ಶಿಬಿರದಲ್ಲಿ ಮಕ್ಕಳ ಬೆಳವಣಿಗೆಗೆ ಹಾಗೂ ಕಲಿಕೆಗೆ ಪೂರಕವಾಗಿರಬೇಕು. ಮಕ್ಕಳು ಜ್ಞಾನ ವೃದ್ಧಿ ಪಡೆದುಕೊಳ್ಳಲು ಪೋಷಕರು ಮಕ್ಕಳಿಗೆ ಸಹಕರಿಸಬೇಕು ಎಂದರು.

ಸಮಗ್ರ ಶಿಕ್ಷಣ ಕರ್ನಾಟಕ ಕಾರವಾರದ ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ಭಾಸ್ಕರ ಗಾಂವಕರ, ಬೇಸಿಗೆ ಅವಧಿಯಲ್ಲಿ ವಿದ್ಯಾರ್ಥಿಗಳು ವ್ಯಕ್ತಿತ್ವದ ವಿಕಸನಕ್ಕೆ ಬೇಕಾಗುವ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ವ್ಯಕ್ತಿತ್ವ ವೃದ್ಧಿಸಿಕೊಳ್ಳಲು ಇಂತಹ ಶಿಬಿರಗಳಲ್ಲಿ ಮಕ್ಕಳು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ.ಲಕ್ಷ್ಮೀದೇವಿ, ಅಧೀಕ್ಷಕ ಜಿ.ಆರ್.ಭಟ್, ಜಿಲ್ಲಾ ಬಾಲ ಭವನ ಸಂಯೋಜಕಿ ಅಪೇಕ್ಷಾ ಶಿರೋಡಕರ, ಸಹಾಯಕಿ ಪ್ರೀತಿ ನಾಯ್ಕ ಮತ್ತಿತರರು ಇದ್ದರು.

ಕಲ್ಪನಾ ರಶ್ಮಿ ಕಲಾ ಲೋಕದ ಅಧ್ಯಕ್ಷ ಸೂರ್ಯಪ್ರಕಾಶ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಕಾರವಾರ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.