ಸಾರಾಂಶ
ಸೋಷಿಯಲ್ ವೆಲ್ ಪೇರ್ ಸೊಸೈಟಿಯಲ್ಲಿ ಮಕ್ಕಳ ಬೇಸಿಗೆ ದಸರಾ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಬೇಸಿಗೆ ಶಿಬಿರದಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಯಲಿದ್ದು ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸಬೇಕು ಎಂದು ತಹಸೀಲ್ದಾರ್ ತನುಜಾ ಟಿ ಸವದತ್ತಿ ಕರೆ ನೀಡಿದರು.ಮಂಗಳವಾರ ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಭಾಂಗಣದಲ್ಲಿ ನೈಸ್ ಕೇಂದ್ರ ಹಾಗೂ ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ನಡೆದ 1 ದಿನದ ಮಕ್ಕಳ ಬೇಸಿಗೆ ದಸರಾ ಶಿಬಿರ ಮತ್ತು ಉಚಿತ ಕಲಿಕಾ ಸಾಮಾಗ್ರಿ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೋಷಿಯಲ್ ವೆಲ್ ಫೇರ್ ಸೊಸೈಟಿ ವಿವಿಧ ಶಾಲೆ ಮಕ್ಕಳನ್ನು ಒಂದೂ ಗೂಡಿಸಿ ಬೇಸಿಗೆ ಶಿಬಿರ ಏರ್ಪಡಿಸಿರುವುದು ಸಂತಸದ ವಿಷಯ. ಮಕ್ಕಳಿಗೆ ನಾಲ್ಕು ಗೋಡೆಯ ಒಳಗಿನ ಶಿಕ್ಷಣದ ಜೊತೆಗೆ ಇಂತಹ ಶಿಕ್ಷಣ ಅವಶ್ಯಕವಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ಸಂಯೋಜಕಿ ಸಂಗೀತ ಮಾತನಾಡಿ, ರಜೆ ದಿನಗಳಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ ಅತ್ಯಂತ ಅವಶ್ಯಕ ಎಂದರು. ಸೋಷಿಯಲ್ ವೆಲ್ ಫೇರ್ ಸೊಸೈಟಿ ಆಪ್ತ ಸಮಾಲೋಚಕಿ ಶಶಿಕಲ ಮಾತನಾಡಿ, ಕಳೆದ 8 ವರ್ಷಗಳಿಂದ ಸೋಷಿಯಲ್ ವೆಲ್ ಫೇರ್ ಸೊಸೈಟಿ ಮಕ್ಕಳ ಬೇಸಿಗೆ ಶಿಬಿರ ನಡೆಸುತ್ತಿದೆ. 1 ದಿನದ ಶಿಬಿರದಲ್ಲಿ ಮಕ್ಕಳ ಕೌಸಲ್ಯ ಅಭಿವೃದ್ಧಿ, ಮಕ್ಕಳ ದೈನಂದಿನ ಕಲಿಕೆ ಜೊತೆಗೆ ವಿಭಿನ್ನ ಶಿಕ್ಷಣ, ಆಟೋಟ, ಕಲೆ ಕಲಿಸಲಾಗುತ್ತಿದೆ. ಬೇಸಿಗೆ ಶಿಬಿರದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಬರುತ್ತಾರೆ. ಪ್ರತಿ ವರ್ಷ 100 ಮಕ್ಕಳನ್ನು ಗುರುತಿಸಿ ನೋಟ್ ಬುಕ್, ಶಾಲಾ ಬ್ಯಾಗ್ ನೀಡುತ್ತಾ ಬಂದಿದ್ದೇವೆ. ಈ ಬೇಸಿಗೆ ಶಿಬಿರದಲ್ಲೂ 100 ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುತ್ತೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸೋಷಿಯಲ್ ವೆಲ್ ಫೇರ್ ಸೊಸೈಟಿ ನಿರ್ದೇಶಕ ಫಾ.ಜೋಬೀಶ್ ಮಾತನಾಡಿ, ಮಕ್ಕಳು ಬೇಸಿಗೆ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಗುಬ್ಬಿಗಾ ಶಾಲೆ ಶಿಕ್ಷಕ ಸುಭಾಶ್, ಸಿಸ್ಟರ್ ಚಾಲ್ಸ್ ಇದ್ದರು. ಆಶ್ವಿನಿ ಆರ್ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು. ಉಷಾ ವಂದಿಸಿದರು.