ಬಿಸಿಲ ಝಳ: ಏಪ್ರಿಲ್‌ನಲ್ಲಿ ಬಿಎಂಟಿಸಿ ಎಸಿ ಬಸ್‌ಗೆ ಪ್ರಯಾಣಿಕರ ಹೆಚ್ಚಳ

| Published : May 18 2024, 01:38 AM IST / Updated: May 18 2024, 12:54 PM IST

ಬಿಸಿಲ ಝಳ: ಏಪ್ರಿಲ್‌ನಲ್ಲಿ ಬಿಎಂಟಿಸಿ ಎಸಿ ಬಸ್‌ಗೆ ಪ್ರಯಾಣಿಕರ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಬಿಸಲು ಹೆಚ್ಚಾದ ಹಿನ್ನೆಲೆಯಲ್ಲಿ ಬಿಎಂಟಿಸಿಯ ಹವಾ ನಿಯಂತ್ರಿತ ವಜ್ರ ಮತ್ತು ವಾಯು ವಜ್ರ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚುವಂತಾಗಿದೆ.

 ಬೆಂಗಳೂರು :  ಬೇಸಿಗೆ ಬಿಸಲು ಹೆಚ್ಚಾದ ಹಿನ್ನೆಲೆಯಲ್ಲಿ ಬಿಎಂಟಿಸಿಯ ಹವಾ ನಿಯಂತ್ರಿತ ವಜ್ರ ಮತ್ತು ವಾಯು ವಜ್ರ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚುವಂತಾಗಿದೆ. ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷ ದೈನಂದಿನ ಪ್ರಯಾಣಿಕರ ಸಂಖ್ಯೆ ಸರಾಸರಿ 12 ಸಾವಿರ ಹೆಚ್ಚಳವಾಗಿದ್ದು, ಆದಾಯ ₹3.50 ಲಕ್ಷ ಹೆಚ್ಚುವಂತಾಗಿದೆ.

ಬಿಎಂಟಿಸಿಯಲ್ಲಿ 575 ಎಸಿ ಬಸ್‌ಗಳಿದ್ದು, ಅವುಗಳಲ್ಲಿ ಕಳೆದ ವರ್ಷದ ಬೇಸಿಗೆ ಅವಧಿಯಲ್ಲಿ ಪ್ರತಿದಿನ 428ರಿಂದ 435 ಬಸ್‌ಗಳ ಮೂಲಕ ಸೇವೆ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಬಿಸಿಲಿನ ತಾಪ ಹೆಚ್ಚಿದ್ದ ಕಾರಣ ಏಪ್ರಿಲ್‌ನಲ್ಲಿ ಆ ಸಂಖ್ಯೆ 450ರಿಂದ 460ಕ್ಕೆ ಹೆಚ್ಚಳವಾಗಿದೆ. ಅಲ್ಲದೆ, ದೈನಂದಿನ ಪ್ರಯಾಣಿಕರ ಸಂಖ್ಯೆ ಸರಾಸರಿ 1.15 ಲಕ್ಷದಿಂದ 1.27 ಲಕ್ಷಕ್ಕೆ ಹೆಚ್ಚಿದೆ. ಅದೇ ರೀತಿ ಆದಾಯ ₹62.50 ಲಕ್ಷದಿಂದ ₹66 ಲಕ್ಷಕ್ಕೆ ಹೆಚ್ಚುವಂತಾಗಿದೆ.

ಅದೇ ರೀತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇವೆ ನೀಡುವ ವಾಯುವಜ್ರ ಬಸ್‌ ಸೇವೆಯಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಪ್ರತಿದಿನ ಸರಾಸರಿ 16 ಸಾವಿರವಿದ್ದ ಪ್ರಯಾಣಿಕರ ಸಂಖ್ಯೆ ಈ ವರ್ಷ ಸರಾಸರಿ 18 ಸಾವಿರಕ್ಕೆ ಹೆಚ್ಚಳವಾಗಿದೆ. ಅಲ್ಲದೆ, ವಾಯುವಜ್ರ ಬಸ್‌ ಸೇವೆಯ ಸಂಖ್ಯೆ ಪ್ರತಿದಿನ 125 ರಿಂದ 141ಕ್ಕೆ ಹೆಚ್ಚಳವಾಗಿದೆ. ಆದಾಯ ₹33.31 ಲಕ್ಷದಿಂದ ₹33.62 ಲಕ್ಷಕ್ಕೆ ಹೆಚ್ಚಳವಾಗಿದೆ.